Ad image

ಬೆಂಗಳೂರಿಗೆ ನೂತನ ಐಟಿ ಸಿಟಿ ಎಂದ ಡಿಸಿಎಂ ಡಿಕೆಶಿ: ಎಲ್ಲಿ ನಿರ್ಮಾಣ?

Team SanjeMugilu
2 Min Read

ಬೆಂಗಳೂರು: ಬೆಂಗಳೂರು ದಕ್ಷಿಣದ ಬಿಡದಿಯಲ್ಲಿ ನೂತನ ಐಟಿ ನಗರ ನಿರ್ಮಾಣಕ್ಕೆ ಆಲೋಚಿಸಲಾಗಿದೆ. ಬೆಂಗಳೂರಿನಲ್ಲಿ ಬಿಲಿಯನ್ ಡಾಲರ್ ಬಂಡವಾಳ ಹೂಡಿಕೆಗೆ ನಾನಾ ದೇಶದ ನಾಯಕರುಗಳು ಮುಂದೆ ಬಂದಿದ್ದಾರೆ. ಜಗತ್ತಿನ ನಾನಾ ದೇಶದ ನಾಯಕರುಗಳು ಪ್ರತಿದಿನ ನನ್ನನ್ನು ಭೇಟಿ ಮಾಡುತ್ತಿರುತ್ತಾರೆ‌. ಅನೇಕರು ಬೆಂಗಳೂರಿನಲ್ಲಿ ಉದ್ದಿಮೆ ಆರಂಭಕ್ಕೆ ಉತ್ಸುಕರಾಗಿದ್ದಾರೆ. ನಾವು ಎಷ್ಟು ಸಾಧ್ಯವೋ ಅಷ್ಟು ಅವರೆಲ್ಲರ ಬೆಂಬಲಕ್ಕೆ ನಿಂತಿದ್ದೇವೆ ಎಂದು ಡಿಸಿಎಂ ಡಿ.ಕೆ‌.ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಟೆಕ್ ಸಮ್ಮಿಟ್ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, 60 ದೇಶಗಳ ಪ್ರತಿನಿಧಿಗಳು, ದೇಶದ ಎಲ್ಲಾ ರಾಜ್ಯಗಳ ಪ್ರಮುಖರು ಸೇರಿ ಸುಮಾರು 50 ಸಾವಿರ ಮಂದಿ ಇದರಲ್ಲಿ ಭಾಗವಹಿಸಲಿದ್ದಾರೆ. 1,500 ದೊಡ್ದ ಕಂಪೆನಿಗಳು ಭಾಗವಹಿಸುತ್ತಿವೆ. ಅವರಿಗೆ ನಮ್ಮ ಪ್ರೋತ್ಸಾಹ ನೀಡಿದರೆ ಇಲ್ಲಿನ ಪ್ರತಿಭೆಗಳು, ಹೊಸ ಆವಿಷ್ಕಾರ, ತಂತ್ರಜ್ಞಾನ, ಸ್ಟಾರ್ಟ್ ಅಪ್​ಗಳು ಕರ್ನಾಟಕವನ್ನು ಹೊಸ ದಿಕ್ಕಿನೆಡೆಗೆ ಕೊಂಡೊಯ್ಯಲಿವೆ. ನೀವು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬೇಕು ಎಂದು ನಮ್ಮ ಮುಂದಿನ ಪೀಳಿಗೆಗೆ ನಾನು ಸದಾ ಹೇಳುತ್ತಿರುತ್ತೇನೆ. ಹೊಸ ಆಲೋಚನೆಗಳು ಬಂದರೆ ಸ್ಟಾರ್ಟ್ ಅಪ್ ಮೂಲಕ ಬೆಳೆಯಲು ಸರ್ಕಾರ ಅವಕಾಶ ಕಲ್ಪಿಸಿ ನಿಮ್ಮ ಜೊತೆಗಿದೆ ಎಂದು ಈಗಾಗಲೇ ತಿಳಿಸಿದ್ದೇನೆ. ನಮ್ಮನ್ನು ನಂಬಿ ಬಂದವರಿಗೆ ಉತ್ತಮ ಅವಕಾಶ ನೀಡುವುದು ನಮ್ಮ ಕೆಲಸ. ಉದ್ಯಮಸ್ನೇಹಿ ವಾತಾವರಣ ನಿರ್ಮಿಸಲಾಗುವುದು ಎಂದು ಡಿಸಿಎಂ ತಿಳಿಸಿದ್ದಾರೆ.

ಐಟಿ ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಕಿಯೋನಿಕ್ಸ್ ಜವಾಬ್ದಾರಿ ಹೊತ್ತಿರುವ ಶರತ್ ಬಚ್ಚೇಗೌಡರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಜೊತೆ ನಾವೆಲ್ಲರೂ ಇದ್ದೇವೆ. ಬೆಂಗಳೂರಿನ ವಾತಾವರಣವೇ ಎಲ್ಲದಕ್ಕೂ ಅನುಕೂಲಕರವಾಗಿದೆ. 25 ಲಕ್ಷ ಐಟಿ ಪರಿಣಿತರು ಇಲ್ಲಿದ್ದಾರೆ. ನಮ್ಮಲ್ಲಿರುವ ಮಾನವ ಸಂಪನ್ಮೂಲಗಳು ಬೇರೆ ಎಲ್ಲೂ ಇಲ್ಲ. ಈ ಸಮ್ಮೇಳನ ಮೂಲಕ ಮೂರು ದಿನಗಳ ಕಾಲ ಭವಿಷ್ಯದ ಬಗ್ಗೆ ಚರ್ಚೆ ಮಾಡಲಾಗುವುದು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನದಿಂದ ಎಲ್ಲಾ ಕ್ಷೇತ್ರಗಳಿಗೆ ಅದರದೇ ಆದ ನೀತಿ ರೂಪಿಸಿ, ಪ್ರೋತ್ಸಾಹ ನೀಡುತ್ತಿದೆ ಎಂದರು.

‘ಹೊಗಳಿಕೆ, ಟೀಕೆ ಎರಡಕ್ಕೂ ಸ್ವಾಗತ’
ರಸ್ತೆಗಳ ದುರಸ್ತಿ ಕಾರ್ಯಕ್ಕೆ ಹಲವಾರು ಕಂಪೆನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ನಾವು ನಮ್ಮ ಕೆಲಸ ಮಾಡಿದ್ದೇವೆ. ಟೀಕೆ ಮಾಡಿದರೂ ಸ್ವಾಗತ, ಹೊಗಳಿದರೂ ಸ್ವಾಗತ. ಜನಸೇವೆ ಮಾಡುವುದೇ ಮೊದಲ ಆದ್ಯತೆ ಎಂದಿದ್ದಾರೆ.

Share This Article