Ad image

ಪವರ್ ಶೇರಿಂಗ್ ಜಟಾಪಟಿ ನಡುವೆ ಒಟ್ಟಿಗೆ ಕಾಣಿಸಿಕೊಂಡ ಸಿಎಂ-ಡಿಸಿಎಂ

Team SanjeMugilu
1 Min Read

ಬೆಂಗಳೂರು: ಪವರ್ ಶೇರಿಂಗ್ ಜಟಾಪಟಿ ನಡುವೆಯೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್  ಒಟ್ಟಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ವಿಶ್ವ ಮೀನುಗಾರಿಕೆ ದಿನಾಚರಣೆ ಹಿನ್ನೆಲೆ ಹೆಬ್ಬಾಳದ ಪಶು ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಮತ್ಸ್ಯಮೇಳ ಕಾರ್ಯಕ್ರಮಕ್ಕೆ ಸಿಎಂ ಹಾಗೂ ಡಿಸಿಎಂ ಒಟ್ಟಿಗೆ ಆಗಮಿಸಿದ್ದಾರೆ. ಅಲ್ಲದೇ ಮತ್ಸ್ಯಮೇಳದ ಸ್ಟಾಲ್‌ಗಳನ್ನು ಜೊತೆಯಾಗಿ ವೀಕ್ಷಿಸಿದ್ದಾರೆ. ಒಂದೇ ವೇದಿಕೆಯ ಮೇಲೆ ಅಕ್ಕಪಕ್ಕ ಕುಳಿತಿರುವ ಸಿಎಂ-ಡಿಸಿಎಂ ಗುಸುಗುಸು ಮಾತನಾಡಿದ್ದಾರೆ.

ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಸಮರ ಭಾರೀ ಸದ್ದು ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ಬಣ ಒಂದುಕಡೆಯಾದರೆ, ಡಿಸಿಎಂ ಡಿ.ಕೆ ಶಿವಕುಮಾರ್ ಬಣ ಮತ್ತೊಂದು ಕಡೆ ಇದೆ. ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು ಎಂದು ಡಿಕೆಶಿ ಬಣ ದೆಹಲಿ ಪರೇಡ್ ನಡೆಸಿದೆ. ಇದೆಲ್ಲದರ ನಡುವೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಬ್ರದರ್ಸ್ ಪ್ರತ್ಯೇಕವಾಗಿ ಕಾಂಗ್ರೆಸ್ ಹೈಕಮಾಂಡ್ ಅನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಸಂಸತ್ ಅಧಿವೇಶನ ಸಂದರ್ಭದಲ್ಲಿ ಎಲ್ಲ ನಾಯಕರು ಒಟ್ಟಿಗೆ ಸೇರಲಿದ್ದು, ಆ ಸಂದರ್ಭದಲ್ಲಿ ನಾಯಕತ್ವದ ವಿಚಾರದ ಬಗ್ಗೆಯೂ ಚರ್ಚಿಸಲಾಗುವುದು. ಅಲ್ಲಿಯವರೆಗೆ ಸಂಪುಟ ಪುನಾರಚನೆಗೆ ಅವಕಾಶ ಸಿಗುವುದಿಲ್ಲ. ಹಾಗಾಗಿ, ಸಮಾಧಾನದಿಂದ ಇರುವಂತೆ ಡಿಕೆ ಸಹೋದರರಿಗೆ ಮಲ್ಲಿಕಾರ್ಜುನ ಖರ್ಗೆ ಅವರು ಸೂಚಿಸಿದ್ದಾರೆ ಎನ್ನಲಾಗಿದೆ. ಕುರ್ಚಿ ಕದನದ ನಡುವೆಯೇ ಸಿಎಂ-ಡಿಸಿಎಂ ಒಟ್ಟಿಗೆ ಕಾಣಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ.

Share This Article