ನವದೆಹಲಿ: ಭಾರತದ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ.ಸೂರ್ಯಕಾಂತ್ ಅವರು ಸೋಮವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಹಿಂದಿನ ಸಿಜೆಐ ಬಿಆರ್ ಗವಾಯ್ ಅವರು ಭಾನುವಾರ ನಿವೃತ್ತರಾಗಿದ್ದಾರೆ. ಅವರ ಸ್ಥಾನಕ್ಕೆ 63 ವರ್ಷದ ನ್ಯಾ.ಸೂರ್ಯ ಕಾಂತ್ ಅವರು ಆಯ್ಕೆಯಾಗಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೂತನ ಸಿಜೆಐಗೆ ಪ್ರಮಾಣ ವಚನ ಬೋಧಿಸಿದರು. ಸಮಾರಂಭದಲ್ಲಿ ಉಪರಾಷ್ಟ್ರಪತಿ ಸಿಪಿ ರಾಧಾಕೃಷ್ಣನ್, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ಹಿರಿಯ ನಾಯಕರು ಭಾಗವಹಿಸಿದ್ದರು.
ಸೂರ್ಯಕಾಂತ್ ಅವರು 2019ರ ಮೇ 24ರಂದು ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದರು. ಹಿಂದಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ಕಳೆದ ಅಕ್ಟೋಬರ್ 30ರಂದು ಮುಂದಿನ ಸಿಜೆಐ ಆಗಿ ನೇಮಿಸಲಾಗಿತ್ತು. ಇವರು ಸುಮಾರು 15 ತಿಂಗಳುಗಳ ಕಾಲ ಈ ಹುದ್ದೆಯಲ್ಲಿ ಇರಲಿದ್ದಾರೆ. ಫೆಬ್ರವರಿ 9, 2027ರಂದು ಸೂರ್ಯಕಾಂತ್ ಅವರಿಗೆ 65 ವರ್ಷ ವಯಸ್ಸು ತುಂಬಿದ ಬಳಿಕ ಅಧಿಕಾರದಿಂದ ನಿವೃತ್ತರಾಗಲಿದ್ದಾರೆ.
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕೈಗೊಳ್ಳುವ ಚುನಾವಣಾ ಸಮಿತಿಯ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸುವಾಗ, ಬಿಹಾರದಲ್ಲಿ ಕರಡು ಮತದಾರರ ಪಟ್ಟಿಯಿಂದ ಹೊರಗುಳಿದ 65 ಲಕ್ಷ ಮತದಾರರ ವಿವರಗಳನ್ನು ಬಹಿರಂಗಪಡಿಸುವಂತೆ ನ್ಯಾಯಮೂರ್ತಿ ಸೂರ್ಯಕಾಂತ್ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದರು.
ತಮ್ಮ ಸೇವಾವಧಿಯಲ್ಲಿ ನ್ಯಾ. ಸೂರ್ಯಕಾಂತ್ ಅವರು ಅನೇಕ ಐತಿಹಾಸಿಕ ತೀರ್ಪುಗಳ ಭಾಗವಾಗಿದ್ದಾರೆ. ಆರ್ಟಿಕಲ್ 370ರ ರದ್ದತಿ, ವಸಾಹತುಶಾಹಿ ಕಾಲದ ದೇಶದ್ರೋಹದ ಕಾನೂನಿನ ಮರುಪರಿಶೀಲನೆ, ಮತ್ತು ಒನ್ ರ್ಯಾಂಕ್ ಒನ್ ಪೆನ್ಷನ್ (ಒಆರ್ಒಪಿ) ಯೋಜನೆಯ ಸಿಂಧುತ್ವ ಎತ್ತಿಹಿಡಿದ ಪೀಠಗಳಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು.
ಮಹಿಳಾ ಸಬಲೀಕರಣದ ಪರವಾಗಿ ದನಿ ಎತ್ತಿರುವ ಇವರು, ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಸೇರಿದಂತೆ ವಕೀಲರ ಸಂಘಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿ ನೀಡುವಂತೆ ನಿರ್ದೇಶನ ನೀಡಿದ್ದರು. ಅಕ್ರಮವಾಗಿ ಹುದ್ದೆಯಿಂದ ಕೆಳಗಿಳಿಸಲ್ಪಟ್ಟಿದ್ದ ಮಹಿಳಾ ಸರಪಂಚ್ ಒಬ್ಬರನ್ನು ಮರುನೇಮಕ ಮಾಡುವ ಮೂಲಕ ಲಿಂಗ ತಾರತಮ್ಯದ ವಿರುದ್ಧ ದಿಟ್ಟ ತೀರ್ಪು ನೀಡಿದ್ದರು.
ದೀರ್ಘಕಾಲದಿಂದ ಇತ್ಯರ್ಥವಾಗದೆ ಉಳಿದಿರುವ ಪ್ರಕರಣಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸಾಂವಿಧಾನಿಕ ಪೀಠಗಳನ್ನು ರಚಿಸುವುದಾಗಿ ಸೂರ್ಯಕಾಂತ್ ತಿಳಿಸಿದ್ದಾರೆ. ಐದು ಸದಸ್ಯರ ಪೀಠ, ಏಳು ಮತ್ತು ಒಂಬತ್ತು ಸದಸ್ಯರ ಸಾಂವಿಧಾನಿಕ ಪೀಠಗಳನ್ನು ಮುಂದಿನ ಕೆಲ ವಾರಗಳಲ್ಲಿ ರಚಿಸುವುದಾಗಿ ನೂತನ ಸಿಜೆಐ ಮಾಹಿತಿ ನೀಡಿದ್ದಾರೆ.
