ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಅಧಿಕಾರ ಹಂಚಿಕೆ ಸಮರ ಜೋರಾಗಿ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ ಬಣ, ಡಿಸಿಎಂ ಡಿ.ಕೆ ಶಿವಕುಮಾರ್ ಬಣ ಎಂದು ಜಟಾಪಟಿಗಳು ನಡೆಯುತ್ತಿದೆ. ಈ ಮಧ್ಯೆ ಎಐಸಿಸಿ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ರಾತ್ರೋರಾತ್ರಿ ಬೆಂಗಳೂರಿಗೆ ಆಗಮಿಸಿದ್ದಾರೆ. ಕೊಚ್ಚಿಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ರಾತ್ರಿ ಏರ್ಪೊಟ್ ನ ತಾಜ್ ನಲ್ಲೆ ವಾಸ್ತವ್ಯ ಹೂಡಿದ್ದಾರೆ, ಈ ಮಧ್ಯೆ ಡಿಕೆಶಿ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ರಾತ್ರೋರಾತ್ರಿ ಬೆಂಗಳೂರಿಗೆ ಕೆ.ಸಿ ವೇಣುಗೋಪಾಲ್ ಆಗಮನ ಕರ್ನಾಟಕ ಕಾಂಗ್ರೆಸ್‌ನಲ್ಲಿ ಅಧಿಕಾರ ವಿಭಜನೆ (ಪವರ್ ಶೇರಿಂಗ್) ಚರ್ಚೆಗೆ ಹೊಸ ತಿರುವು ನೀಡುವ ಸಂಕೇತವೆಂದು ರಾಜಕೀಯ ವಲಯಗಳಲ್ಲಿ ತೀವ್ರ ಕೂತೂಹಲ ಸೃಷ್ಟಿಸಿದೆ.
ಏರ್‌ಪೋರ್ಟ್ ಸಮೀಪದ ತಾಜ್ ವಿಹಾಂತ್ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ ವೇಣುಗೋಪಾಲ್ ಅವರನ್ನು ರಾತ್ರಿ ಡಿಸಿಎಂ ಡಿ.ಕೆ. ಶಿವಕುಮಾರ್ ಭೇಟಿಯಾಗಿ, ರಾಜ್ಯದ ರಾಜಕೀಯ ಭವಿಷ್ಯದ ಬಗ್ಗೆ ಮಹತ್ವದ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ವೇಣುಗೋಪಾಲ್ ಅವರು ರಾತ್ರಿ 11 ಗಂಟೆಯ ಸುಮಾರುಗೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಏರ್‌ಪೋರ್ಟ್‌ನ ಟರ್ಮಿನಲ್ 2 (ಟಿ2) ಮೂಲಕ ಪ್ರವೇಶಿಸಿದ ಅವರು, ಯಾವುದೇ ರಾಜಕೀಯ ನಾಯಕರನ್ನು ಭೇಟಿಯಾಗದೆ ನೇರವಾಗಿ ಹೋಟೆಲ್‌ಗೆ ತೆರಳಿದರು. ಮಾಧ್ಯಮಗಳೊಂದಿಗೆ ಯಾವುದೇ ಸಂಪರ್ಕ ನಡೆಸದೇ ಸೀದಾ ಹೋಟೆಲ್‌ಗೆ ಹೋದರು.
ಪವರ್ ಶೇರಿಂಗ್ ವಿಚಾರ ಚರ್ಚೆ!
ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಅಧಿಕಾರ ಹಂಚಿಕೆ ಚರ್ಚೆ ಹಿನ್ನೆಲೆಯಲ್ಲಿ ಕೆಸಿ ವೇಣುಗೋಪಾಲ್ ಭೇಟಿ ಎಲ್ಲರ ಗಮನವನ್ನೂ ಆಕರ್ಷಿಸಿವೆ. ಈ ನಡುವೆ, ಡಿಕೆ ಶಿವಕುಮಾರ್ ರಾತ್ರಿ 9:30ರ ಸುಮಾರಿಗೆ ಸದಾಶಿವನಗರದಲ್ಲಿರುವ ತಮ್ಮ ನಿವಾಸದಿಂದ ಹೊರಟು ಏರ್‌ಪೋರ್ಟ್ ಸಮೀಪದ ತಾಜ್ ಹೋಟೆಲ್‌ಗೆ ತಲುಪಿದ್ದಾರೆ. ಈ ಭೇಟಿಯು ಸುಮಾರು 11 ಗಂಟೆಯ ಸುಮಾರಿಗೆ ನಡೆದಿದ್ದು, ಪ್ರಮುಖ ವಿಷಯಗಳಲ್ಲಿ ಒಂದು ಪವರ್ ಶೇರಿಂಗ್ ಚರ್ಚೆಯಾಗಿರುವ ಸಾಧ್ಯತೆಯಿದೆ.
ಹೈ ಕಮಾಂಡ್‌ನಿಂದ ಸಿಗುತ್ತಾ ‘ಪವರ್’ಫುಲ್ ಸಿಗ್ನಲ್!?
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಮಧ್ಯದ ಪವರ್ ಶೇರಿಂಗ್ ವಿಚಾರ ಚರ್ಚೆಗಳು ಜೋರಾಗಿವೆ. ವೇಣುಗೋಪಾಲ್ ಅವರು ಎಐಸಿಸಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಈ ಭೇಟಿಯು ಕಾಂಗ್ರೆಸ್ ಹೈ ಕಮಾಂಡ್‌ನಿಂದ ಬಂದ ಸಂದೇಶವೆಂದು ರಾಜಕೀಯ ವರ್ಗಗಳು ಊಹಿಸುತ್ತಿವೆ.
ಕರ್ನಾಟಕ ಕಾಂಗ್ರೆಸ್‌ನಲ್ಲಿ ಪವರ್ ಶೇರಿಂಗ್ ವಿವಾದ ಇತ್ತೀಚಿನ ದಿನಗಳಲ್ಲಿ ಉಲ್ಬಣಗೊಂಡಿದೆ. ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಸರ್ಕಾರ ನಡೆಯುತ್ತಿದ್ದರೂ, ಡಿಕೆ ಶಿವಕುಮಾರ್ ಅವರ ಪ್ರಭಾವ ಮತ್ತು ಪಕ್ಷದೊಳಗಿನ ಗುಂಪುಗಳ ನಡುವೆ ಸಮತೋಲನ ಕಾಪಾಡುವುದು ಸವಾಲಾಗಿದೆ. ವೇಣುಗೋಪಾಲ್ ಅವರ ಆಗಮನ ಈ ಸಮಸ್ಯೆಗೆ ಪರಿಹಾರ ಬಂದಂತಿದ್ದು, ಹೈಕಮಾಂಡ್ ರಾಜ್ಯ ನಾಯಕರನ್ನು ಸಾಮರಸ್ಯಕ್ಕೆ ಕರೆದ ತಂತ್ರವೆಂದು ವಿಶ್ಲೇಷಕರು ಹೇಳುತ್ತಾರೆ.
ವಯನಾಡಿಗೆ ತೆರಳಿದ ಕೆ.ಸಿ ವೇಣುಗೋಪಾಲ್!
ಇಂದು ಕೆ.ಸಿ ವೇಣುಗೋಪಾಲ್ ಕೇರಳದ ವಯನಾಡು ಜಿಲ್ಲೆಗೆ ತೆರಳುವ ಯೋಜನೆಯಿದ್ದು, ಟಿ2 ಮೂಲಕ ಪ್ರಯಾಣ ಬೆಳೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಘಟನೆ ಕರ್ನಾಟಕದ ರಾಜಕೀಯದಲ್ಲಿ ಹೊಸ ಅಧ್ಯಾಯವನ್ನು ತೆರೆಯುವ ಸಂಕೇತವಾಗಿದ್ದು, ಪಕ್ಷದೊಳಗಿನ ಸಾಮರಸ್ಯಕ್ಕೆ ಎಐಸಿಸಿ ಹೈ ಕಮಾಂಡ್ ಗಂಭೀರವಾಗಿ ಪ್ರತಿಕ್ರಿಯೆ ನೀಡುವ ಸಾಧ್ಯತೆ ಇದೆ. ವೇಣುಗೋಪಾಲ್ ಅವರ ಈ ಭೇಟಿಯು ರಾಜ್ಯದ ಭವಿಷ್ಯದ ರಾಜಕೀಯ ದಿಕ್ಕುಗಳನ್ನು ನಿರ್ಧರಿಸುವಲ್ಲಿ ಮಹತ್ವದ ಪಾತ್ರ ವಹಿಸಬಹುದು.
ರಾತ್ರೋರಾತ್ರಿ ಬೆಂಗಳೂರಿಗೆ ಬಂದ ಎಐಸಿಸಿ ಕಾರ್ಯದರ್ಶಿ ವೇಣುಗೋಪಾಲ್, ಡಿಕೆಶಿ ಭೇಟಿ
