Ad image

ನೀವ ನೀವೆ ಅಗ್ರಿಮೆಂಟ್ ಮಾಡಿಕೊಂಡರೆ ಇದೇನು ಕಾಂಟ್ರಾಕ್ಟಾ?- ಕುರ್ಚಿ ಕದನದಲ್ಲಿ ಸಿಎಂ ಪರ ರಾಯರೆಡ್ಡಿ ಬ್ಯಾಟಿಂಗ್

Team SanjeMugilu
2 Min Read

ಕೊಪ್ಪಳ: ರಾಜ್ಯ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಕುರ್ಚಿ ಕದನ ಕುರಿತು ಸಿಎಂ ಸಿದ್ದರಾಮಯ್ಯ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ‘ನೀವ್ ನೀವೆ ಅಗ್ರಿಮೆಂಟ್ ಮಾಡಿಕೊಂಡರೆ ಇದೇನು ಕಾಂಟ್ರಾಕ್ಟಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಕೊಪ್ಪಳದಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಬಣಗಳಿಲ್ಲ. ಸಿದ್ದರಾಮಯ್ಯ ಬಣ, ಡಿಕೆ ಶಿವಕುಮಾರ್ ಬಣಗಳಿಲ್ಲ. ನಾವೆಲ್ಲ ಕಾಂಗ್ರೆಸ್ ಪಾರ್ಟಿಯವರು. ಸಿಎಂ ಆಗಬೇಕು, ಸಚಿವರಾಗಬೇಕು ಅನ್ನೋ ಆಸೆ ಇರೋದು ಸಹಜ. ಎರಡೂವರೆ ವರ್ಷ ಆಯ್ತು, ಸಿದ್ದರಾಮಯ್ಯ ಮುಖ್ಯಮಂತ್ರಿ ಬಿಟ್ಟು ಬಿಡಬೇಕು ಅನ್ನೋ ತೀರ್ಮಾನ ಆಗಿರೋದು ನಮಗೆ ಗೊತ್ತಿಲ್ಲ. ಮೇ 20-2023 ರಲ್ಲಿ ಸಿದ್ದರಾಮಯ್ಯ ಪ್ರಮಾಣ ವಚನ ಮಾಡಿದ್ರು. ಅದಕ್ಕಿಂತ ಮುಂಚೆ ಶಾಸಕಾಂಗ ಸಭೆ ನಡೀತು. ಆವಾಗ ಸಿದ್ದರಾಮಯ್ಯಗೆ ಬಹುಮತ ಬಂತು, ಹೀಗಾಗಿ ಸಿದ್ದರಾಮಯ್ಯ ಆಯ್ಕೆಯಾದರು. ಇವಾಗ ಸಿದ್ದರಾಮಯ್ಯನ ತೆಗೆಯೋ ಮಾತು ಯಾಕೆ ಎಂದು ಕೇಳಿದರು.

ಮಾತುಕತೆ ಆಗಿದೆ ಅಂತಾರೆ ಅವರೇನು ನಮಗೆನು ಹೇಳಿದ್ರಾ? ಎರಡೂವರೆ ವರ್ಷ ಅವರು, ಎರಡು ವರ್ಷ ಇವರು ಅಂತಾ ನಮಗೆ ಹೇಳಿಲ್ಲ. ಹೀಗಾಗಿ ಸಿದ್ದರಾಮಯ್ಯ ಐದು ವರ್ಷ ಸಿಎಂ. ಡಿಕೆ ಶಿವಕುಮಾರ್ ಕೂಡಾ ಎಲ್ಲೂ ಸಿಂ ಆಗ್ತೀನಿ ಅಂದಿಲ್ಲ ಕೆಲವರಿಗೆ ಡಿಕೆ ಶಿವಕುಮಾರ್‌ಗೆ ಟಿಕೆಟ್ ಕೊಟ್ಟಿರ್ತಾನೆ. ಅದು ಸಹಜ ಅದರಲ್ಲಿ ಏನ ತಪ್ಪಿದೆ, ಅಭಿಮಾನಕ್ಕೆ ಹೇಳ್ತಾರೆ. ಏನೆ ಆಗಬೇಕಂದ್ರು, ಶಾಸಕಾಂಗ ಸಭೆ ಕರೆದು ಸಿದ್ದರಾಮಯ್ಯ ಬದಲಾವಣೆ ಮಾಡ್ತೀವಿ ಅಂತಾ ಹೇಳಬೇಕು. ಬದಾಲವಣೆ ಆಗಬೇಕು ಅಂದ್ರೆ, ಯಾಕೆ ಬದಲಾವಣೆ ಮಾಡ್ತೀರಿ ಅಂತಾ ನಾನು ಪ್ರಶ್ನೆ ಮಾಡುತ್ತೇನೆ ಎಂದು ತಿಳಿಸಿದರು.

ಉಸ್ತುವಾರಿಗಳನ್ನ ನಾನು ಪ್ರಶ್ನೆ ಮಾಡುತ್ತೀನಿ. ಸಿದ್ದರಾಮಯ್ಯ ಭ್ರಷ್ಟಾಚಾರ ಮಾಡಿದ್ರಾ ಜನ ವಿರೋಧಿ ಕೆಲಸ ಮಾಡಿದ್ದಾರಾ ಅಂತಾ ಕೇಳುತ್ತೇನೆ. ಎರಡೂವರೆ ವರ್ಷ ಮಾತು ಕೊಟ್ಟಿದ್ದೇವೆ ಅಂದ್ರೆ. ಆಗ ನಾನು ಮೊದಲೇ ಯಾಕೆ ಹೇಳಿಲ್ಲ ಅಂತಾ ಕೇಳುತ್ತೇನೆ. ಮೊದಲೇ ಹೇಳಬೇಕಲ್ಲಾ? ನೀವ್ ನೀವೆ ಅಗ್ರಿಮೆಂಟ್ ಮಾಡಕೊಂಡ್ರೆ ಇದೇನು ಕಾಂಟ್ರಾಕ್ಟ್? ಡಿಕೆ ಶಿವಕುಮಾರ್ ಹತ್ರ ಗೊಂದಲ ಇಲ್ಲ. ಸಿದ್ದರಾಮಯ್ಯ ಹತ್ರ ಗೊಂದಲ ಇಲ್ಲ. ಕರ್ನಾಟಕ ಸರ್ಕಾರ ಅಸ್ಥಿರ ಗೊಳಿಸೋ ಕೆಲಸ ನಡೀತಿದೆ. ನನಗೆ ಗೊತ್ತಿರೋ ಪ್ರಕಾರ ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿ ಇರ್ತಾರೆ ಎಂದು ಭವಿಷ್ಯ ನುಡಿದರು.

ಎಲ್ಲ ಲಿಂಗಾಯತ ನಾಯಕರ ಬೆಂಬಲ ಸಿದ್ದರಾಮಯ್ಯಗೆ ಇದೆ. ಸಿದ್ದರಾಮಯ್ಯ ಅವರಿಗೆ ಲಿಂಗಾಯತ ಸಮಾಜ ಸಪೋರ್ಟ್ ಕೊಡ್ತಾ ಇದೆ. ಲಿಂಗಾಯತ ಸಮಾಜದ ಯಾರಾದರೂ ಸಿದ್ದರಾಮಯ್ಯರನ್ನ ತೆಗೀರಿ ಎಂದಿದ್ದಾರಾ? ಮೊನ್ನೆ ಎಲ್ಲಾ ಸ್ವಾಮೀಜಿಗಳು ಸಿದ್ದರಾಮಯ್ಯಗೆ ವಿಭೂತಿ ಹಚ್ಚಿ ಕೂರಿಸಿದ್ದು ಗೊತ್ತಿದೆ ಅಲ್ವಾ. ಸಿದ್ದರಾಮಯ್ಯ ಒಬ್ಬ ಸಾಮಾಜಿಕ ವ್ಯಕ್ತಿ, ಬಸವಣ್ಣನ ಪರ ಇರೋ ವ್ಯಕ್ತಿ. ಬಸವಣ್ಣನ ಪರ ಲಿಂಗಾಯತರಗಿಂತ ಹೆಚ್ಚು ಪ್ರಚಾರ ಮಾಡೋದೆ ಸಿದ್ದರಾಮಯ್ಯ. ಹೀಗಾಗಿ, ಸಿದ್ದರಾಮಯ್ಯ ಅವರನ್ನು ಎಲ್ಲ ಲಿಂಗಾಯತರು ಇಷ್ಟ ಪಡ್ತಾರೆ. ನನ್ನನ್ನು ಸೇರಿ ಎಲ್ಲ ಲಿಂಗಾಯತರು ಇಷ್ಟ ಪಡ್ತಾರೆ ಎಂದರು.

Share This Article