Ad image

ಆಳಂದ ವೋಟ್ ಚೋರಿ ಕೇಸ್ ತನಿಖೆ ಚುರುಕು – ಸಾವಿರಕ್ಕೂ ಅಧಿಕ ಜನರ ಹೇಳಿಕೆ ದಾಖಲಿಸಿದ ಎಸ್‌ಐಟಿ

Team SanjeMugilu
2 Min Read

ಕಲಬುರಗಿ: 2023ರ ಆಳಂದ ವಿಧಾನಸಭಾ ಚುನಾವಣೆಯಲ್ಲಿ ವೋಟ್ ಚೋರಿ  ಯತ್ನ ಪ್ರಕರಣ ಸಂಬಂಧ ಸರ್ಕಾರ ಎಸ್‌ಐಟಿ  ರಚನೆ ಮಾಡಿತ್ತು. ಎಸ್‌ಐಟಿ ತನಿಖಾ ತಂಡ ಮೊದಲ ಹಂತವಾಗಿ ವೋಟ್ ಚೋರಿ ಯತ್ನ ಸಂಬಂಧಿಸಿದಂತೆ ಐವರು ಆರೋಪಿಗಳನ್ನ ಬಂಧಿಸಿ ವಿಚಾರಣೆ ನಡೆಸಿದೆ. ಇದೀಗ ಎರಡನೇ ಹಂತದಲ್ಲಿ ತನಿಖೆಗೆ ಇಳಿದ ಎಸ್‌ಐಟಿ ಅಧಿಕಾರಿಗಳ ತಂಡ ಕಳೆದ ಒಂದು ತಿಂಗಳಿನಿಂದ ಆಳಂದದಲ್ಲೇ ಬೀಡುಬಿಟ್ಟು ತನಿಖೆ ನಡೆಸಲು ಮುಂದಾಗಿದೆ. ವೋಟ್ ಚೋರಿಗೆ ಸಂಬಂಧಿಸಿದಂತೆ ಮತಗಳ ಡಿಲೀಟ್ ಪ್ರಪೋಸಲ್ ಸಲ್ಲಿಕೆ ಆಗಿದ್ದ ಮತದಾರರ ಹೇಳಿಕೆ ಪಡೆಯೋದಕ್ಕೆ ಎಸ್‌ಐಟಿ ಮುಂದಾಗಿದೆ.

ರಾಷ್ಟ್ರ ರಾಜಕೀಯದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಆಳಂದ ವೋಟ್ ಚೋರಿ ಯತ್ನ ಪ್ರಕರಣದ ಎರಡನೇ ಹಂತದ ತನಿಖೆ ಚುರುಕಾಗಿದೆ. ಕಳೆದ ಒಂದು ತಿಂಗಳಿನಿಂದ ಎಸ್‌ಐಟಿ ತನಿಖಾ ತಂಡ ಆಳಂದದಲ್ಲೇ ಬೀಡುಬಿಟ್ಟಿದೆ. 2023ರ ಚುನಾವಣೆ ಸಂಧರ್ಭದಲ್ಲಿ 6,018 ಮತಗಳನ್ನು ಡಿಲೀಟ್ ಮಾಡೋದಕ್ಕೆ ಫಾರ್ಮ್ ನಂಬರ್ 7 ಸಲ್ಲಿಕೆಯಾಗಿತ್ತು. 6,018 ಮತದಾರರ ಮತಗಳನ್ನ ಡಿಲೀಟ್ ಪ್ರಪೋಸಲ್ ಅರ್ಜಿ ಸಲ್ಲಿಕೆಯಾಗಿದ್ದ ಹಿನ್ನೆಲೆ ಇದೀಗ ಆಳಂದದಲ್ಲೇ ಬೀಡು ಬಿಟ್ಟ ತನಿಖಾ ತಂಡ ಅರ್ಜಿದಾರರ ಹೇಳಿಕೆ ಪಡೆದುಕೊಳ್ಳುತ್ತಿದೆ.

ಆಳಂದ ವಿಧಾನಸಭಾ ಕ್ಷೇತ್ರದ 6,018 ಮತಗಳನ್ನ ಡಿಲೀಟ್ ಪ್ರಪೋಸಲ್ ಸಂಬಂಧಿಸಿದಂತೆ ಎಸ್‌ಐಟಿ ತನಿಖಾ ತಂಡ ಕಳೆದ ಒಂದು ತಿಂಗಳಲ್ಲಿ ಸಾವಿರಕ್ಕೂ ಅಧಿಕ ಜನರ ಹೇಳಿಕೆ ಪಡೆದುಕೊಂಡಿದೆ. ದುರಂತ ಅಂದರೆ ವೋಟ್ ಡಿಲೀಟ್ ಸಂಬಂಧಿಸಿದಂತೆ ಅರ್ಜಿದಾರರು ತಮಗೆ ಮಾಹಿತಿಯೇ ಇಲ್ಲದೆ ಅರ್ಜಿ ಸಲ್ಲಿಕೆಯಾಗಿದೆ, ಕೊನೆ ಹಂತದಲ್ಲಿ ನಮಗೆ ನಮ್ಮ ವೋಟ್ ಡಿಲೀಟ್ ಮಾಡೋದಕ್ಕೆ ಮುಂದಾಗಿರುವ ವಿಚಾರ ಗೊತ್ತಾಗಿದೆ. ಅದಾದ ಬಳಿಕ ಅದನ್ನ ತಡೆ ಹಿಡಿಯಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ಸುಮಾರು 250 ಅಂಗನವಾಡಿ ಕಾರ್ಯಕರ್ತರ ಹೇಳಿಕೆಯನ್ನೂ ಎಸ್‌ಐಟಿ ಪಡೆದುಕೊಂಡಿದೆ. ಇವರು ಸಹ ಈ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದಿದ್ದಾರೆ. ಎಲ್ಲರ ಹೇಳಿಕೆಗಳ ಪರಿಶೀಲನೆ ಬಳಿಕ ಮೂರನೆ ಹಂತದ ತನಿಖೆ ಆರಂಭವಾಗಲಿದೆ.

ಒಟ್ಟಿನಲ್ಲಿ ವೋಟ್ ಚೋರಿಗೆ ಸಂಬಂಧಿಸಿದಂತೆ ನೂರಕ್ಕೂ ಅಧಿಕ ಜನರ ಸಿಮ್ ಕಾರ್ಡ್ ಬಳಸಿ ಒಬ್ಬೊಬ್ಬರ ಹೆಸರಲ್ಲಿ ಆರೇಳು ಜನರ ಮತ ಡಿಲೀಟ್‌ಗೆ ಪ್ರಪೋಸಲ್ ಸಲ್ಲಿಕೆ ಮಾಡಿರೋದು ಸೇರಿದಂತೆ ಒಂದೊಂದು ವೋಟ್ ಡಿಲೀಟ್‌ಗೆ ಸಂಬಂಧಿಸಿದಂತೆ 80 ರೂ. ನೀಡಿರುವ ವಿಚಾರ ಕೂಡ ಬೆಳಕಿಗೆ ಬಂದಿದೆ. ತನಿಖೆಯಲ್ಲಿ ಪ್ರಕರಣದ ಹಿಂದಿರುವ ಕಾಣದ ಕೈಗಳು ಯಾರು ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ.

Share This Article