Ad image

ಬೆಂಗಳೂರಿನಲ್ಲಿ ಕಸಕ್ಕೆ ಬೆಂಕಿ ಹಚ್ಚಿದರೆ ಕ್ರಿಮಿನಲ್ ಕೇಸ್, ಒಂದು ವರ್ಷ ಜೈಲು: BSWML ಅಧಿಕಾರಿಗಳಿಂದ ಖಡಕ್ ಎಚ್ಚರಿಕೆ

Team SanjeMugilu
2 Min Read

ಬೆಂಗಳೂರು: ಬೆಂಗಳೂರು ನಗರದಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡುವ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಇತ್ತೀಗಷ್ಟೇ ಬೆಂಗಳೂರು ಘನ ತ್ಯಾಜ್ಯ ನಿರ್ವಹಣೆ ನಿಗಮದ  ಅಧಿಕಾರಿಗಳು ರಸ್ತೆಯಲ್ಲಿ ಕಸ ಸುರಿಯುತ್ತಿದ್ದವರ ಮನೆ ಬಾಗಿಲಿಗೆ ಹೋಗಿ ಕಸ ಸುರಿದು ದಂಡ ವಸೂಲಿ ಮಾಡಲು ಶುರು ಮಾಡಿದ್ದರು. ಇದೀಗ ಎಫ್ಐಆರ್ ಫೈಲ್ ಮಾಡಿ ಜೈಲಿಗೆ ಕಳಿಸುವ ಎಚ್ಚರಿಕೆ ನೀಡುತ್ತಿದ್ದಾರೆ. ಮತ್ತೊಂದೆಡೆ, ನಗರದಲ್ಲಿ ಎಲ್ಲೆಂದರಲ್ಲಿ ಕಸ ಸುರಿದು ಬೆಂಕಿ ಹಾಕಲಾಗುತ್ತಿದೆ. ಇದರಿಂದ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ ಎನ್ನಲಾಗಿದೆ. ಈಗಾಗಲೇ ಕಸ ವಿಂಗಡಿಸಿ ಕೊಡಬೇಕು ಎಂಬ ನಿಯಮ ಜಾರಿಯಲ್ಲಿದೆ. ಆದರೂ ಕೂಡ ಜನ ಕಸ ಸುರಿದು ಬೆಂಕಿ ಇಡುತ್ತಿದ್ದಾರೆ. ಇದನ್ನು ತಡೆಗಟ್ಟಲು BSWML ಕಠಿಣ ಕ್ರಮಕ್ಕೆ ಮುಂದಾಗಿದ್ದು, ಒಂದು ವೇಳೆ ಕಸ ಸುರಿದು ಬೆಂಕಿ ಹಾಕಿದರೆ ಮೊದಲು ದಂಡ ಪ್ರಯೋಗ ಮಾಡಲಿದೆ. ನಂತರ ಕ್ರಿಮಿನಲ್ ಕೇಸ್ ದಾಖಲಿಸಿ ಜೈಲಿಗಟ್ಟಲಿದೆ.

ಬೆಂಗಳೂರಿನಲ್ಲಿ ಕಸಕ್ಕೆ ಬೆಂಕಿ ಹಚ್ಚಿದರೆ ದಂಡ ಎಷ್ಟು?
ಮೊದಲ ಬಾರಿ ಕಸಕ್ಕೆ ಬೆಂಕಿಯಿಟ್ಟರೆ 10 ಸಾವಿರ ರೂ. ದಂಡ. ಎರಡನೇ ಬಾರಿ 20 ಸಾವಿರ ರೂಪಾಯಿ ದಂಡ. ನಂತರ 5 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ. ಇದಕ್ಕೂ ಕ್ಯಾರೇ ಎನ್ನದಿದ್ದರೆ ಎಫ್ಐಆರ್ ದಾಖಲಿಸಿ ಜೈಲಿಗೆ ಕಳುಹಿಸಲಾಗುವುದು ಎಂದು BSWML ಸಿಇಒ ಕರಿಗೌಡ ಮಾಹಿತಿ ನೀಡಿದ್ದಾರೆ.

ಕಸ ಸುಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಘನತ್ಯಾಜ್ಯ ಘಟಕದ ಹೆಲ್ತ್‌ ಇನ್ಸ್​ಪೆಕ್ಟರ್​​ಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಎಲ್ಲೆಂದರಲ್ಲಿ ಕಸ ಸುರಿದು ಬೆಂಕಿ ಹಚ್ಚಿದ ವಿಡಿಯೋ ಮಾಡಿ ಕ್ರಿಮಿನಲ್ ಮೊಕದ್ದಮೆ ಹೂಡಿ, ಪುರಾವೆಗಳ ಅಧಾರದ ಮೇಲೆ ಪರಿಸರ ಸಂರಕ್ಷಣಾ ಕಾಯ್ದೆ ಅಡಿ ಕೇಸ್ ದಾಖಲಿಸಿ. ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆ 1981 ಸೆಕ್ಷನ್ 5ರ ಅಡಿ ಕೇಸ್ ದಾಖಲಿಸಿ ಎಂದು ಸೂಚನೆ ನೀಡಲಾಗಿದೆ.

ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆಯ ಸೆಕ್ಷನ್​ನಲ್ಲೇನಿದೆ?
ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆ 1981 ಸೆಕ್ಷನ್ 5ರ ಅಡಿಯಲ್ಲಿ ಕೇಸ್ ದಾಖಲಾದರೆ 6 ತಿಂಗಳಿಂದ 6 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಸದ್ಯ ಕಸ ಸುರಿದು ಬೆಂಕಿ ಹಚ್ಚಿದ ಪ್ರಕರಣಗಳನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ವರ್ಗವಣೆ ಮಾಡಲು ಬೆಂಗಳೂರು ಘನ ತ್ಯಾಜ್ಯ ನಿರ್ವಹಣೆ ನಿಗಮ ಮುಂದಾಗಿದೆ ಎನ್ನಲಾಗಿದೆ.

ಬೆಂಗಳೂರು ನಗರವಾಸಿಗಳಿಂದ ವಿರೋಧ
ಬೆಂಗಳೂರು ಘನ ತ್ಯಾಜ್ಯ ನಿರ್ವಹಣೆ ನಿಗಮದ ಕ್ರಮಕ್ಕೆ ಬೆಂಗಳೂರಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರಿಯಾಗಿ ನೀವು ಮನೆಗಳಿಂದ ಕಸ ಸಂಗ್ರಹಿಸಿದರೆ ಜನರು ಯಾಕೆ ಕಸವನ್ನು ರಸ್ತೆಗೆ ಸುರಿಯುತ್ತಾರೆ? ಅದಕ್ಕೆ ಬೆಂಕಿ ಹಾಕುತ್ತಾರೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

Share This Article