Ad image

ಜಸ್ಟೀಸ್ ಫಾರ್ ಸಿದ್ದರಾಮಯ್ಯ – ಫೋಟೋ ಇಟ್ಟು ಸಿಎಂ ಪರ ಪೂಜೆ ಸಲ್ಲಿಸಿದ ಅಭಿಮಾನಿಗಳು

Team SanjeMugilu
2 Min Read

ಚಿಕ್ಕಮಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಗಲಾಟೆ ಜೋರಾಗಿದೆ. ಇದರ ನಡುವೆಯೇ ಸಿಎಂ ಸಿದ್ದರಾಮಯ್ಯ  ಅವರ ಅಭಿಮಾನಿಗಳು ಚಿಕ್ಕಮಗಳೂರಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯಲಿ ಎಂದು ಜಸ್ಟೀಸ್ ಫಾರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬ ಭಾವ ಚಿತ್ರ ಹಿಡಿದು ನಗರದ ತಾಲೂಕು ಆಫೀಸ್ ಬಳಿಯ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷದ ಹೆಸರಿನಲ್ಲಿ ಪೂಜೆ ನಡೆದಿದೆ. ಈ ವೇಳೆ ಅಭಿಮಾನಿಗಳು ತೆಂಗಿನಕಾಯಿ ಈಡುಗಾಯಿ ಒಡೆದಿದ್ದಾರೆ. ಅಲ್ಲದೇ ಉಳಿಯಲಿ ಉಳಿಯಲಿ ಸಿದ್ದರಾಮಯ್ಯ ಉಳಿಯಲಿ ಎಂದು ಘೋಷಣೆ ಕೂಗಿದ್ದಾರೆ.

ಇನ್ನೂ ಆದಿ ಚುಂಚನಗಿರಿ ಶ್ರೀಗಳು ಡಿ.ಕೆ ಶಿವಕುಮಾರ್  ಸಿಎಂ ಆಗಬೇಕು ಎಂದು ಹೇಳಿಕೆ ಕೊಟ್ಟ ಬೆನ್ನಲ್ಲೇ ಒಕ್ಕಲಿಗರ ಸಂಘ ಅಲರ್ಟ್ ಆಗಿ ಸ್ವಾಮೀಜಿಗಳ ಧ್ವನಿಗೆ ದನಿ ಗೂಡಿಸಿದ್ದಾರೆ. ಸಿಎಂ ತವರಿನಲ್ಲಿ ಒಕ್ಕಲಿಗ ಸಮುದಾಯದ  ಮುಖಂಡರು ಡಿ.ಕೆ ಶಿವಕುಮಾರ್ ಪರವಾಗಿ ಧ್ವನಿ ಜೋರು ಮಾಡಿದ್ದಾರೆ. ಡಿ.ಕೆ ಶಿವಕುಮಾರ್ ಪರವಾಗಿ ಒಕ್ಕಲಿಗ ಸಮುದಾಯದ ಮುಖಂಡರು ಫೀಲ್ಡಿಗಿಳಿದಿದ್ದು ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಿ ಡಿಕೆಶಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಮೈಸೂರು ಒಕ್ಕಲಿಗರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಒಕ್ಕಲಿಗ ಮುಖಂಡರ ಸಭೆ ನಡೆಸಿದ್ದು ಸಭೆಯಲ್ಲಿ 50ಕ್ಕೂ ಹೆಚ್ಚು ಒಕ್ಕಲಿಗ ಮುಖಂಡರು ಭಾಗಿಯಾಗಿದ್ದರು. ಸಭೆಯಲ್ಲಿ ಜೆಡಿಎಸ್ ಬಿಜೆಪಿ-ಕಾಂಗ್ರೆಸ್  ಪಕ್ಷದ ಒಕ್ಕಲಿಗ ಮುಖಂಡರು ಇದ್ದರು. ಡಿ.ಕೆ ಶಿವಕುಮಾರ್‌ಗೆ ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡಬೇಕು. ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಟ್ಟರೆ ಒಕ್ಕಲಿಗ ಸಮುದಾಯ ಸಿದ್ದರಾಮಯ್ಯ ಅವರನ್ನ ಗೌರವಿಸುತ್ತದೆ. ಡಿಕೆಶಿಗೆ ಅನ್ಯಾಯ ಆದ್ರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.

ಇದೆಲ್ಲದರ ಜೊತೆಗೆ ಬಜೆಟ್ ತನಕ ಯಾವುದೇ ಮಾತುಕತೆ ಬೇಡ. ಆಗಿನ ಪರಿಸ್ಥಿತಿ ಮತ್ತು ಈಗಿನ ಪರಿಸ್ಥಿತಿ ಬೇರೆಯಾಗಿದೆ. ಶಾಸಕರ ಅಭಿಪ್ರಾಯಗಳನ್ನೂ ಪಡೆದು ನಿರ್ಧಾರ ತೆಗೆದುಕೊಳ್ಳಿ. ಯಾವುದೇ ಅವಸರದ ನಿರ್ಧಾರ ತೆಗೆದುಕೊಳ್ಳಬೇಡಿ. ಯಥಾಸ್ಥಿತಿ ಹೀಗೆಯೇ ಮುಂದುವರಿಯಲಿ. ಎರಡ್ಮೂರು ತಿಂಗಳು ಸಮಯ ತೆಗೆದುಕೊಂಡು ನಿರ್ಧಾರ ಕೈಗೊಳ್ಳಿ ಎಂದು ಸಿಎಂ ಹೇಳಿದ್ದಾರೆ ಎನ್ನಲಾಗಿದೆ.

ಇನ್ನೂ ಡಿ.ಕೆ ಶಿವಕುಮಾರ್‌ ಅವರು, ಕೊಟ್ಟ ಮಾತು ಉಳಿಸಿಕೊಳ್ಳಬೇಕಾಗುತ್ತದೆ. ನಿಮ್ಮ ಮುಂದೆ ಆಗಿರುವ ಒಪ್ಪಂದ ಕ್ಲೀಯರ್‌ ಆಗಬೇಕು. ಬಜೆಟ್ ವರೆಗೆ ಕಾಯಲು ಸಾಧ್ಯವಿಲ್ಲ. ಬೇಕಿದ್ದರೆ ಜನವರಿ 14ರ ವರೆಗೆ ಸಮಯ ಕೊಡಿ. ಶಾಸಕರ ಅಭಿಪ್ರಾಯಗಳನ್ನೂ ಪಡೆಯಿರಿ ಎಂಬ ಅಭಿಪ್ರಾಯ ಮುಂದಿಟ್ಟಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.

Share This Article