Ad image

ನಮ್ಮ ನಡುವೆ ಭಿನ್ನ ಇಲ್ಲ, ಹೈಕಮಾಂಡ್‌ ಹೇಳಿದಂತೆ ಕೇಳ್ತೇವೆ; ಸಿಎಂ-ಡಿಸಿಎಂ ಒಗ್ಗಟಿನ ಸಂದೇಶ

Team SanjeMugilu
2 Min Read

ಬೆಂಗಳೂರು: ನಾವಿಬ್ಬರು ಒಂದಾಗಿದ್ದೇವೆ, ಹೈಕಮಾಂಡ್‌ ಹೇಳಿದಂತೆ ಕೇಳುತ್ತೇವೆ. ಪಕ್ಷವನ್ನ ಇನ್ನಷ್ಟು ಶಕ್ತಿಶಾಲಿಗೊಳಿಸಿ 2028ಕ್ಕೆ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಅವರಿಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಘೋಷಣೆ ಮಾಡಿದ್ದಾರೆ.

ಡಿಕೆಶಿ ಮನೆಗೆ ಊಟಕ್ಕೆ ಹೋಗ್ತೀನಿ
ಬ್ರೇಕ್‌ ಫಾಸ್ಟ್‌ ಮೀಟಿಂಗ್‌ ಬಳಿಕ ಕಾವೇರಿ ನಿವಾಸದಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಮೊದಲಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾನು ಡಿಕೆ ಶಿವಕುಮಾರ್‌, ಪೊನ್ನಣ್ಣ ಬ್ರೇಕ್‌ಫಾಸ್ಟ್‌ನಲ್ಲಿ ಭಾಗಿಯಾಗಿದ್ವಿ. ಅಲ್ಲೇನು ಮಾತನಾಡಲಿಲ್ಲ, ‌ಬ್ರೇಕ್‌ಫಾಸ್ಟ್‌ ಮಾತ್ರ ಮಾಡಿದ್ವಿ, ಚೆನ್ನಾಗಿತ್ತು. ಡಿಕೆ ಶಿವಕುಮಾರ್‌ ಇವತ್ತು ನಮ್ಮ ಮನೆಗೇ ಊಟಕ್ಕೆ ಬನ್ನಿ ಅಂತ ಹೇಳಿದ್ರು. ಆದ್ರೆ ಕೆ.ಸಿ ವೇಣುಗೋಪಾಲ್‌ ಅವರು ಬ್ರೇಕ್‌ಫಾಸ್ಟ್‌ ಮೀಟಿಂಗ್‌ನಲ್ಲಿ ಮಾತನಾಡುವಂತೆ ಸೂಚನೆ ಕೊಟ್ಟಿದ್ರು. ಹಾಗಾಗಿ ಬ್ರೇಕ್‌ಫಾಸ್ಟ್‌ಗೆ ಇಲ್ಲಿಗೆ ಬನ್ನಿ, ಇನ್ನೊಂದು ದಿನ ಊಟಕ್ಕೆ ಬರ್ತೀನಿ ಅಂತ ಹೇಳಿದೆ ಎಂದು ತಿಳಿಸಿದರು.

ಅನಗತ್ಯವಾಗಿ ಕೆಲವು ಗೊಂದಲಗಳು ನಿರ್ಮಾಣ ಆಗಿವೆ. ನಾವಿಬ್ಬರೇ ಕೂತು ಮಾತನಾಡಿದ್ವಿ. 2028ರ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ನಮಗೆ ಬಹಳ ಮುಖ್ಯ. ಅದರ ಬಗ್ಗೆಯೂ ಚರ್ಚೆ ಮಾಡಿದ್ವಿ. 2028ರಲ್ಲೂ ಕಾಂಗ್ರೆಸ್‌ ಅಧಿಕಾರಕ್ಕೆ ತರಬೇಕು ಅನ್ನೋದ್ರೆ ಬಗ್ಗೆ ಚರ್ಚೆ ಮಾಡಿದ್ವಿ. 2023ರಲ್ಲಿ ಹೇಗೆ ನಾವಿಬ್ಬರು ಒಟ್ಟಿಗೆ ಕೆಲಸ ಮಾಡಿದ್ವೋ ಅದೇ ರೀತಿ ಮುಂದೆನೂ ಒಟ್ಟಿಗೆ ಕೆಲಸ ಮಾಡ್ತೀವಿ. ನನ್ನ – ಡಿಕೆ ನಡುವೆ ಭಿನ್ನ ಇಲ್ಲ. ನಾವು ಒಟ್ಟಾಗಿದ್ದೇವೆ ಎಂದು ಒಗ್ಗಟ್ಟಿನ ಸಂದೇಶ ಸಾರಿದರು.

ಸಮರ್ಥವಾಗಿ, ಒಟ್ಟಾಗಿ ಎದುರಿಸುತ್ತೇವೆ
ಮುಂದುವರಿದು.. ಇದೇ ಡಿಸೆಂಬರ್‌ 8ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶ ಶುರುವಾಗಲಿದೆ. ಸುಳ್ಳು ಅಪವಾದ ಮಾಡೋದು ಬಿಜೆಪಿ-ಜೆಡಿಎಸ್ ಚಾಳಿ. ಇದನ್ನ ಬಹಳ ಸಮರ್ಥವಾಗಿ ನಾವು ಮತ್ತು ನಮ್ಮ ಸರ್ಕಾರ ಸಮರ್ಥವಾಗಿ ಎದುರಿಸುತ್ತೇವೆ. ಅದಕ್ಕೆ ಬೇಕಾದ ತಂತ್ರಗಳನ್ನೂ ರೂಪಿಸಿದ್ದೇವೆ ಎಂದು ತಿಳಿಸಿದರು.

ನಾಳೆಯಿಂದ ಗೊಂದಲ ಇರಲ್ಲ
ನಾವು 142 ಜನ ಇದ್ದೇವೆ. ಅವರು 64 ಜನ ಮಾತ್ರ ಇದ್ದಾರೆ. ಜೆಡಿಎಸ್‌ ಇರೋದು 18 ಜನ ಮಾತ್ರ. ಅವರಿಬ್ಬರು ಸೇರಿ ಏನೇ ಆರೋಪ ಮಾಡಿದ್ರೂ ಅದೆಲ್ಲವನ್ನ ಸಮರ್ಥವಾಗಿ ಎದುರಿಸುವ ಕೆಲಸ ಮಾಡ್ತೇವೆ. ಬಹಳ ಮುಖ್ಯಮಾಗಿ ಹೈಕಮಾಂಡ್‌ ಏನ್‌ ಹೇಳ್ತಾರೆ ಅದನ್ನ ಕೇಳೋಕೆ ತೀರ್ಮಾನ ಮಾಡಿದ್ದೇವೆ ಎಂದರಲ್ಲದೇ, ಕೇಂದ್ರದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿರೋದ್ರಿಂದ ಹೈಕಮಾಂಡ್‌ ಇಲ್ಲಿನ ಗೊಂದಲಗಳನ್ನ ನಮಗೇ ಬಗೆಹರಿಸಲು ಹೇಳಿದ್ದಾರೆ. ನಾಳೆಯಿಂದ ಯಾವುದೇ ಗೊಂದಲ ಇರಲ್ಲ ಎಂದು ಕುರ್ಚಿ ಕದನಕ್ಕೆ ತೆರೆ ಎಳೆದರು.

ದೆಹಲಿಗೆ ಹೋಗಿದ್ದ ಕೆಲ ಶಾಸಕರು ನನ್ನ ಹತ್ರ ಬಂದು ಮಾತಾಡಿದ್ರು, ಯಾಕಾಗಿ ದೆಹಲಿಗೆ ಹೋಗಿದ್ವಿ ಅನ್ನೋದನ್ನ ಹೇಳಿದ್ರು ಎಂದು ಶಾಸಕರು, ಸಚಿವರ ದೆಹಲಿ ಪರೇಡ್‌ಗೆ ಸಮರ್ಥನೆ ನೀಡಿದರು.

Share This Article