Ad image

ನಾಳೆ ಕನಕಪುರದ ಸೋಮನಹಳ್ಳಿಯಲ್ಲಿ ದೇವರಾಜ್‌ ಅಂತ್ಯಕ್ರಿಯೆ

Team SanjeMugilu
1 Min Read

ಬೆಂಗಳೂರು: ಕಾಂಗ್ರೆಸ್‌ ಮಾಜಿ‌ ಶಾಸಕ ಆರ್‌ವಿ ದೇವರಾಜ್‌ ಅಂತ್ಯಕ್ರಿಯೆಯನ್ನು ನಾಳೆ ನಡೆಸಲು ಕುಟುಂಬಸ್ಥರು ತೀರ್ಮಾನ ತೆಗೆದುಕೊಂಡಿದ್ದಾರೆ. ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿದ್ದ  ಮೃತದೇಹವನ್ನು ಇಂದು ಬೆಳಗ್ಗೆ ಅಂಬುಲೆನ್ಸ್‌ ಮೂಲಕ ಕಲಾಸಿಪಾಳ್ಯ ಬಳಿಯ ಮನೆಗೆ ತರಲಾಯಿತು.

ಹತ್ತು ಗಂಟೆಯ ನಂತರ ಜೆಸಿ ರಸ್ತೆಯ ಪಕ್ಷದ ಕಚೇರಿ ಬಳಿ ಸಾರ್ವಜನಿಕ ವ್ಯವಸ್ಥೆಗೆ ಸಿದ್ದತೆ ನಡೆಸಲಾಗಿದೆ. ನಾಳೆ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಂದೇ ಕನಕಪುರ ಸೋಮನಹಳ್ಳಿಯ ತೋಟದ ಮನೆಯಲ್ಲಿ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ಸಿದ್ಧತೆ ನಡೆಸಿದ್ದಾರೆ.

ಹುಟ್ಟುಹಬ್ಬ ಆಚರಣೆಗೂ ಮೊದಲು ದೇವರಾಜ್‌ ಅವರು ಚಾಮುಂಡಿ ತಾಯಿಯ ದರ್ಶನಕ್ಕೆಂದು ನಿನ್ನೆ(ಡಿ.1) ಮೈಸೂರಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗಲೇ ಅವರಿಗೆ ಹೃದಯಾಘಾತವಾಗಿದ್ದು ಕೂಡಲೇ ಅವರನ್ನು ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಆರ್‌ವಿ ದೇವರಾಜ್ ಕೊನೆಯುಸಿರೆಳೆದಿದ್ದಾರೆ.

1957 ರಲ್ಲಿ ಜನಿಸಿದ ಅವರು 3 ಬಾರಿ ಶಾಸಕ, ಒಂದು ಬಾರಿ ಪರಿಷತ್ ಸದಸ್ಯರಾಗಿದ್ದರು. 2004ರಲ್ಲಿ ಅವರು ಚಾಮರಾಜಪೇಟೆ ಕ್ಷೇತ್ರವನ್ನು ಎಸ್.ಎಂ. ಕೃಷ್ಣ ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟು ಸುದ್ದಿಯಾಗಿದ್ದರು. 1989ರಲ್ಲಿ ಮೊದಲ ಬಾರಿಗೆ ಶಾಸಕರಾದ ಅವರು 2 ಬಾರಿ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಹಾಗೂ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿದ್ದರು. ಆದರೆ ಕೊನೆಯವರೆಗೆ ಸಚಿವ ಸ್ಥಾನ ಒಲಿದಿರಲಿಲ್ಲ. 2018 ಹಾಗೂ 2023ರ ಚುನಾವಣೆಯಲ್ಲಿ ಚಿಕ್ಕಪೇಟೆ ಕ್ಷೇತ್ರದಲ್ಲಿ ಬಿಜೆಪಿಯ ಉದಯ್ ಗರುಡಾಚಾರ್ ವಿರುದ್ಧ ದೇವರಾಜ್‌ ಸೋತಿದ್ದರು.

Share This Article