ನವದೆಹಲಿ: ರಾಜ್ಯ ಕಾಂಗ್ರೆಸ್ನಲ್ಲಿ ಅಧಿಕಾರ ಹಂಚಿಕೆ ಸಮರ, ಬಣ ಬಡಿದಾಟಗಳು ಗರಿಗೆದರಿರುವಂತೆ ಬಿಜೆಪಿ ಪಾಳಯದಲ್ಲೂ ರಾಜ್ಯಾಧ್ಯಕ್ಷ ಸ್ಥಾನದ ಬದಲಾವಣೆ ಸದ್ದು ಇನ್ನೂ ಕಡಿಮೆಯಾಗಿಲ್ಲ. ತೆರೆಮರೆಯಲ್ಲಿ ಮತ್ತೆ ಬಿಜೆಪಿ ರೆಬೆಲ್ ನಾಯಕರು ತಮ್ಮ ತಂತ್ರಗಾರಿಕೆ ಶುರುಮಾಡಿಕೊಂಡಿದ್ದರೆ. ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮತ್ತೆ ರೇಸ್ ಆರಂಭವಾಗಿರುವ ನಡುವೆ ಕೇಂದ್ರ ಸಚಿವ ವಿ. ಸೋಮಣ್ಣ ಜೊತೆಗೆ ರೆಬೆಲ್ ಲೀಡರ್ಸ್ ಮಹತ್ವದ ಸಭೆ ನಡೆಸಿದ್ದಾರೆ.
ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ರೇಸ್ನಲ್ಲಿರುವ ವಿ. ಸೋಮಣ್ಣ ರನ್ನು ಭೇಟಿ ಮಾಡಿ ರೆಬೆಲ್ ನಾಯಕರು ಮಹತ್ವದ ಸಭೆ ನಡೆಸಿದ್ದಾರೆ. ಇದಾದ ನಂತರ ಸೋಮಣ್ಣಗೆ ಬಿಜೆಪಿ ರೆಬೆಲ್ ತಂಡದ ಬೆಂಬಲ ಸಿಗುತ್ತದಾ ಎಂಬ ಪ್ರಶ್ನೆ ಮೂಡಿದ್ದು, ದೆಹಲಿಯಲ್ಲಿ ನಡೆದ ರಹಸ್ಯ ಭೇಟಿಯೊಂದು ರಾಜ್ಯ ಬಿಜೆಪಿಯಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಸೋಮಣ್ಣ ಭೇಟಿಯಾದ ರೆಬೆಲ್ ಲೀಡರ್ಸ್: ಮಹತ್ವದ ಚರ್ಚೆ!
ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್ ನೇತೃತ್ವದ ರೆಬೆಲ್ ತಂಡವು ಕೇಂದ್ರ ಸಚಿವ ವಿ. ಸೋಮಣ್ಣ ಅವರನ್ನು ದೆಹಲಿಯಲ್ಲಿಯೇ ಭೇಟಿಯಾಗಿದೆ. ಸೋಮಣ್ಣ ಅವರ ಅಧಿಕೃತ ಕಚೇರಿಯಲ್ಲೇ ನಡೆದ ಈ ಮಾತುಕತೆಯಲ್ಲಿ “ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿ. ಸೋಮಣ್ಣ ಅವರಿಗೆ ರೆಬೆಲ್ ತಂಡದ ಬೆಂಬಲ” ಎಂಬ ವಿಷಯವೇ ಪ್ರಮುಖವಾಗಿ ಚರ್ಚೆಯಾಗಿದೆ ಎನ್ನಲಾಗಿದೆ. ಇದರಿಂದ ಮತ್ತೆ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನದ ಗದ್ದಲ ಶುರುವಾಗುವಂತಿದೆ.
ರೆಬೆಲ್ ತಂಡದ ಹೊಸ ತಂತ್ರ!
ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನಿರಾಕರಣೆಯಿಂದ ಸಿಡಿಮಿಡಿಗೊಂಡಿದ್ದ ಜಾರಕಿಹೊಳಿ, ಸಿದ್ದೇಶ್ವರ್, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಮಾಜಿ ಶಾಸಕ ಸಂಜಯ್ಯ ಶಿವರಾಜ್ ಪಾಟೀಲ್ ಸೇರಿದಂತೆ ಹಲವು ರೆಬೆಲ್ ನಾಯಕರು ಈಗಾಗಲೇ ಪಕ್ಷದ ವಿರುದ್ಧ ಗುಡುಗುತ್ತಿದ್ದಾರೆ. ಆದರೆ ಈ ತಂಡ ಈಗ ಪಕ್ಷದೊಳಗೆ ತಮ್ಮ ಪ್ರಾಬಲ್ಯ ತೋರಿಸುವ ಹೊಸ ತಂತ್ರಕ್ಕೆ ಮುಂದಾಗಿದೆ ಎನ್ನಲಾಗುತ್ತಿದೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಹೈಕಮಾಂಡ್ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಬಿ.ವೈ. ವಿಜಯೇಂದ್ರ ಬದಲಿಗೆ ನೂತನ ಅಧ್ಯಕ್ಷರ ನೇಮಕಕ್ಕೆ ದೆಹಲಿಯಲ್ಲಿ ತೀವ್ರ ಲಾಬಿ ನಡೆಯುತ್ತಿದೆ. ಈ ನಡುವೆ ವಿ. ಸೋಮಣ್ಣ ಅವರ ಹೆಸರು ಗಟ್ಟಿಯಾಗಿ ಕೇಳಿಬರುತ್ತಿದೆ. ಒಕ್ಕಲಿಗ ಸಮುದಾಯದ ಹಿರಿಯ ನಾಯಕ, ಕೇಂದ್ರ ಸಚಿವ ಸ್ಥಾನ ಇದೆಲ್ಲ ಸೋಮಣ್ಣ ಅವರ ಬಲವಾಗಿದೆ.
ರೆಬೆಲ್ ತಂಡಕ್ಕೆ ಏನು ಲಾಭ?
ರೆಬೆಲ್ ತಂಡಕ್ಕೆ ಸೋಮಣ್ಣ ಅವರನ್ನು ಬೆಂಬಲಿಸುವುದರಿಂದ ತಮ್ಮ ಮೌಲ್ಯ ಹೆಚ್ಚಿಸಿಕೊಳ್ಳಬಹುದು ಎಂಬ ಲೆಕ್ಕಾಚಾರ ಇದೆ ಎನ್ನಲಾಗಿದೆ. ನಾವು ಸೋಮಣ್ಣ ಅವರಿಗೆ ಬೆಂಬಲ ನೀಡಿದ್ರೆ, ಭವಿಷ್ಯದಲ್ಲಿ ಟಿಕೆಟ್, ಸ್ಥಾನಮಾನಗಳಲ್ಲಿ ಭಾಗ ದೊರೆಯಬಹುದು ಎಂಬ ಆಲೋಚನೆ ರೆಬೆಲ್ ತಂಡದಲ್ಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ
ವಿಜಯೇಂದ್ರ ವಿರುದ್ಧ ನಿಂತ ರೆಬೆಲ್ಸ್ ತಂಡ!
ಭೇಟಿಯ ಬಳಿಕ ಸೋಮಣ್ಣ ಭೇಟಿ ಮಾಡಿದ್ರು, ಚರ್ಚೆ ನಡೆದಿದೆ. ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ ಎಂದಿದ್ದಾರೆ. ಆದರೆ ರೆಬೆಲ್ ತಂಡದ ಬೆಂಬಲವು ಸೋಮಣ್ಣ ಅವರ ಲಾಬಿಯನ್ನು ಗಟ್ಟಿಗೊಳಿಸಿದೆ ಎಂಬುದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
ಈಗಾಗಲೇ ಬಿಜೆಪಿಯಲ್ಲಿ ವಿಜಯೇಂದ್ರ ಪರ-ವಿರೋಧಿ ಗುಂಪುಗಳಿವೆ. ಈ ನಡುವೆ ರೆಬೆಲ್ ತಂಡ ಸೋಮಣ್ಣ ಪರವಾಗಿ ನಿಂತರೆ ಪಕ್ಷದೊಳಗೆ ಹೊಸ ಬಣಬಡಿದಾಟ ಉಂಟಾಗುವ ಸಾಧ್ಯತೆ ಇದೆ. ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ನಡೆಯುತ್ತಿರುವ ಈ ದೆಹಲಿ ಲಾಬಿ ಬಿಜೆಪಿಯನ್ನು ಮತ್ತೊಮ್ಮೆ ಸಂಕಷ್ಟಕ್ಕೆ ದೂಡಿದೆ ಎನ್ನಲಾಗಿದೆ.
