Ad image

ಚಿಕ್ಕಮಗಳೂರಲ್ಲಿ ದತ್ತಜಯಂತಿ ಸಂಭ್ರಮ – ಬೃಹತ್ ಶೋಭಾಯಾತ್ರೆಗೆ ಶಾಂತಿಯುತ ತೆರೆ

Team SanjeMugilu
1 Min Read

ಚಿಕ್ಕಮಗಳೂರು: ಆರು ಸಾವಿರಕ್ಕೂ ಅಧಿಕ ಪೊಲೀಸರ ಸರ್ಪಗಾವಲು. 10 ಡ್ರೋನಿನ ಹದ್ದಿನ ಕಣ್ಣು. ಡಿಜೆ ಸೌಂಡ್‌ಗೆ ಐದು ಗಂಟೆ ಕುಣಿದು ಕುಪ್ಪಳಿಸಿದ ಯುವಕ ಯುವತಿಯರು. ವಿವಿಧ ಕಲಾತಂಡದೊಂದಿಗೆ ಸಾಗಿದ ದತ್ತ ಜಯಂತಿಯ ಎರಡನೇ ದಿನ ಶೋಭಾಯಾತ್ರೆ ಶಾಂತಿಯುತವಾಗಿ ತೆರೆಬಿದ್ದಿದೆ

ಇನಾಂ ದತ್ತಾತ್ರೇಯ ಪೀಠದಲ್ಲಿ ವಿಎಚ್‌ಪಿ, ಬಜರಂಗದಳದ ನೇತೃತ್ವದಲ್ಲಿ ನಡೆಯುತ್ತಿರುವ ದತ್ತಜಯಂತಿ ಅಂಗವಾಗಿ ಎರಡನೇ ದಿನ ಅದ್ದೂರಿಯಾಗಿ ಬೃಹತ್ ಶೋಭಾಯಾತ್ರೆ ನಡೆಯಿತು. ನಗರದ ಕಾಮಧೇನು ಮಹಾಗಣಪತಿ ದೇವಸ್ಥಾನದಲ್ಲಿ ಟ್ರಾಕ್ಟರ್‌ನಲ್ಲಿ ಕುಳ್ಳಿರಿಸಿದ್ದ ದತ್ತಾತ್ರೇಯ ದೇವರ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು.

ಹಿಂದುತ್ವದ ಫೈರ್ ಬ್ರಾಂಡ್‌ಗಳಾದ ಸಿ.ಟಿ.ರವಿ  ಹಾಗೂ ಪ್ರಮೋದ್ ಮುತಾಲಿಕ್ ಶೋಭಾಯಾತ್ರೆಗೆ ಚಾಲನೆ ನೀಡಿದರು. ಗೊಂಬೆಗಳ ಕುಣಿತ, ಚಂಡೆ, ನಾಸಿಕ್ ಡೋಲ್, ಹಳ್ಳಿ ವಾದ್ಯ ಸೇರಿದಂತೆ ವಿವಿಧ ಕಲಾತಂಡಗಳು ಭಾಗಿಯಾದವು. ಬಸವನಹಳ್ಳಿ ಮುಖ್ಯ ರಸ್ತೆ, ಹನುಮಂತಪ್ಪ ಸರ್ಕಲ್ ಎಂ.ಜಿ ರಸ್ತೆ ಮೂಲಕ ಆಜಾದ್ ಪಾರ್ಕ್‌ವರೆಗೆ ಬೃಹತ್ ಶೋಭಾಯಾತ್ರೆ ನಡೆಯಿತು.

ಹಳ್ಳಿ ವಾದ್ಯಕ್ಕೆ ಸಿ.ಟಿ.ರವಿ ಹಾಗೂ ಹಲವರು ಫುಲ್ ಡಾನ್ಸ್ ಮಾಡಿದರು. ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಡಿಜೆ ಸೌಂಡ್ಸ್ ಏರ್ಪಡಿಸಲಾಗಿತ್ತು. ಹನುಮಂತಪ್ಪ ವೃತ್ತಕ್ಕೆ ಆಗಮಿಸ್ತಿದ್ದಂತೆ ಕಲರ್-ಕಲರ್ ದೀಪಕ್ಕೆ ಯುವಕ-ಯುವತಿಯರು ಮೈ ಚಳಿ ಬಿಟ್ಟು ಕುಣಿದು ಕುಪ್ಪಳಿಸಿದರು.

ಕೇಸರಿ ಶಾಲು ಕೈಯಲ್ಲಿ ಹಿಡಿದು ಕುಣಿದ್ರೆ ಮೊಬೈಲ್ ಲೈಟ್ ಹಿಡಿದು ಕೆಲ ಕಾಲ ಭರ್ಜರಿ ಡ್ಯಾನ್ಸ್ ಮಾಡಿದರು. ಡಿಜೆ ಸೌಂಡ್‌ನಲ್ಲಿ ಕುಣಿಯುತ್ತಿದ್ದ ವೇಳೆ ಆಂಬುಲೈನ್ಸ್ ಬರುತ್ತಿದ್ದಂತೆ ದಾರಿ ಮಾಡಿಕೊಟ್ಟರು. ಸತತ ಐದು ಗಂಟೆ ಬೃಹತ್ ಶೋಭಾಯಾತ್ರೆ ನಡೆದಿದ್ದು ಎಲ್ಲವೂ ಡ್ರೋನ್‌ನಲ್ಲಿ ಸೆರೆಯಾಗಿದೆ.
ಸುಮಾರು 15 ಸಾವಿರ ಮಂದಿ ಭಾಗಿಯಾಗಿದ್ದ ಶೋಭಾಯಾತ್ರೆಯ ಬಳಿಕ ಆಜಾದ್ ಪಾರ್ಕ್‌ನಲ್ಲಿ ಧಾರ್ಮಿಕ ಸಭೆ ನಡೆಯಿತು. ಶೋಭಾಯಾತ್ರೆ ಶಾಂತಿಯುತವಾಗಿ ಮುಗಿದಿದ್ದು ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ.

Share This Article