ಬೆಂಗಳೂರು: ಪ್ರತೀ ವರ್ಷದಂತೆ ಈ ವರ್ಷವೂ ಬೆಂಗಳೂರು ಪೊಲೀಸರು ಡ್ರಗ್ ಮಾಫಿಯಾ ವಿರುದ್ಧ ಭರ್ಜರಿ ಬೇಟೆ ನಡೆಸಿದ್ದಾರೆ. ಸಿಸಿಬಿ ಸೇರಿದಂತೆ ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳ ತಂಡಗಳು ನಡೆಸಿದ ಸತತ ಕಾರ್ಯಾಚರಣೆಯ ಪರಿಣಾಮವಾಗಿ 2025ರಲ್ಲಿ 146 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ. ನಗರದಲ್ಲಿ 11 ತಿಂಗಳಲ್ಲಿ ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ನೂರಾರು ಆರೋಪಿಗಳ ಬಂಧನವಾಗಿದೆ. ವಿಶೇಷವಾಗಿ ಸಿಸಿಬಿ ಪೊಲೀಸರ ಕಾರ್ಯಾಚರಣೆಗಳು ಗಮನಸೆಳೆದಿವೆ. ಒಂದೊಂದು ಪ್ರಕರಣವೂ ವಿಭಿನ್ನ ರೀತಿಯಿದ್ದು, ಪೆಡ್ಲರ್ಗಳು ಹೊಸ ಹೊಸ ಸಂಚು ರೂಪಿಸಿದರೂ ಪ್ರತಿಯೊಂದು ಹಂತದಲ್ಲೂ ಪೊಲೀಸರು ಯಶಸ್ವಿಯಾಗಿ ಬಲೆ ಬೀಸಿದ್ದಾರೆ.
ಚಾಕಲೆಟ್, ಕಾಫಿ ಪುಡಿ ಹೆಸರಿನಲ್ಲಿ ಡ್ರಗ್ಸ್ ಸಾಗಾಟ
ಚಾಕಲೆಟ್, ಕಾಫಿ ಪುಡಿ, ಪಾರ್ಸೆಲ್, ಗಿಫ್ಟ್ ಬಾಕ್ಸ್ ಜತೆಗೆ ಇಟ್ಟುಕೊಂಡು ಸಾಗಿಸುವುದೂ ಸೇರಿದಂತೆ ಅನೇಕ ಮಾದರಿಯಲ್ಲಿ ಡ್ರಗ್ಗಳನ್ನು ಸಾಗಿಸಲು ಪೆಡ್ಲರ್ಗಳು ಯತ್ನಿಸಿದ ಘಟನೆಗಳು ಬೆಳಕಿಗೆ ಬಂದಿವೆ. ದೇಶ-ವಿದೇಶಗಳ ಪೆಡ್ಲರ್ಗಳು, ವಿಶೇಷವಾಗಿ ನೈಜೀರಿಯನ್ನರು, ಕೇರಳ ಮೂಲದವರು, ಪೆಡ್ಲಿಂಗ್ನಲ್ಲಿ ಸಕ್ರಿಯರಾಗಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
19 ರಿಂದ 35 ವರ್ಷದ ಯುವಕ, ಯುವತಿಯರೇ ಟಾರ್ಗೆಟ್
19 ರಿಂದ 35 ವರ್ಷದ ಯುವಕರು, ಯುವತಿಯರೇ ಡ್ರಗ್ ಮಾಫಿಯಾದ ಪ್ರಮುಖ ಟಾರ್ಗೆಟ್ ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ನಗರದ ಹೊರವಲಯಕ್ಕೆ ಸೇರಿದ ಪ್ರದೇಶಗಳಲ್ಲಿ ಪೆಡ್ಲರ್ಗಳು ಹೆಚ್ಚು ಸಕ್ರಿಯರಾಗಿರುವುದನ್ನು ಪೊಲೀಸರು ಗುರುತಿಸಿದ್ದಾರೆ.
1000 ಕೆಜಿಗೂ ಹೆಚ್ಚು ಗಾಂಜಾ, ಹೈಡ್ರೋ ಗಾಂಜಾ ವಶ
ಡ್ರಗ್ ಮಾತ್ರವಲ್ಲದೆ ಸಾವಿರ ಕೆಜಿಗೂ ಅಧಿಕ ಗಾಂಜಾ ಮತ್ತು ಹೈಡ್ರೋ ಗಾಂಜಾ ಕೂಡ ಈ ಅವಧಿಯಲ್ಲಿ ಜಪ್ತಿ ಮಾಡಲಾಗಿದೆ. ಪೊಲೀಸರ ಕಣ್ತಪ್ಪಿಸಲು ಹೊಸ ಹೊಸ ಐಡಿಯಾಗಳನ್ನು ಡ್ರಗ್ ಪೆಡ್ಲರ್ಗಳು ಬಳಸಿದರೂ, ಮಾಫಿಯಾ ಬೆನ್ನಟ್ಟುವಲ್ಲಿ ಬೆಂಗಳೂರು ಪೊಲೀಸರು ಸತತ ಯಶಸ್ಸು ಸಾಧಿಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಡ್ರಗ್ ಮಾಫಿಯಾದ ಅಟ್ಟಹಾಸ ಕಡಿಮೆ ಮಾಡಲು ಇನ್ನಷ್ಟು ಚುರುಕಿನ ಕಾರ್ಯಾಚರಣೆ ನಡೆಸಲಾಗುವುದು. ಮಾಫಿಯಾವನ್ನು ಮಟ್ಟಹಾಕಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
