ನವದೆಹಲಿ: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತ-ರಷ್ಯಾ ಒಟ್ಟಾಗಿ ಸಾಗಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ನವದೆಹಲಿಯಲ್ಲಿ ಪ್ರಧಾನಿ ಮೋದಿ ಹಾಗೂ ಪುಟಿನ್ ನಡುವಿನ ಜಂಟಿ ಸುದ್ದಿಗೋಷ್ಠಿಯಲ್ಲಿ ಏಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿ ಉಲ್ಲೇಖಿಸಿ ಅವರು ಮಾತನಾಡಿದರು.
ಭಯೋತ್ಪಾದನೆಯನ್ನು ಎದುರಿಸುವ ಭಾರತದ ಎಲ್ಲ ಪ್ರಯತ್ನಗಳಿಗೆ ರಷ್ಯಾ ಬಲವಾದ ಬೆಂಬಲ ನೀಡುತ್ತಿದೆ. ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕ್ ಉಗ್ರರ ಗುಂಪು ದಾಳಿ ನಡೆಸಿತ್ತು. ಪಹಲ್ಗಾಮ್‌ನಲ್ಲಿ ನಡೆದ ದಾಳಿ ಹಾಗೂ ಮಾಸ್ಕೋದ ಕ್ರೋಕಸ್ ಸಿಟಿ ಹಾಲ್‌ನಲ್ಲಿ ನಡೆದ ಉಗ್ರರ ದಾಳಿ ಹಿಂಸಾತ್ಮಕ ಹಾಗೂ ಉಗ್ರವಾದದ ಮೂಲವೇ ಆಗಿದೆ. ಇದು ಮಾನವೀಯ ಮೌಲ್ಯಗಳ ಮೇಲಿನ ದಾಳಿ ಎಂಬುದನ್ನ ಭಾರತ ದೃಢವಾಗಿ ನಂಬುತ್ತದೆ. ಹೀಗಾಗಿ ರಷ್ಯಾ ಭಯೋತ್ಪಾದನೆಯನ್ನ ಮೂಲದಿಂದಲೇ ನಿರ್ಮೂಲನೆ ಮಾಡಲು ಭಾರತದೊಂದಿಗೆ ಯಾವಾಗಲೂ ಒಗಟ್ಟಾಗಿ ನಿಲ್ಲುತ್ತದೆ. ಆಪರೇಷನ್ ಸಿಂಧೂರ ಕಾರ್ಯಾಚರಣೆ ಸಂದರ್ಭದಲ್ಲೂ ರಷ್ಯಾ, ಭಾರತದ ಬೆಂಬಲಕ್ಕೆ ನಿಂತಿತ್ತು ಎಂದ ಮೋದಿ ಎಲ್ಲಾ ದೇಶಗಳು ಭಯೋತ್ಪಾದನೆ ವಿರುದ್ಧ ಒಂದಾದಾಗ ಜಗತ್ತು ಬಲಿಷ್ಠ ವಾಗಿರುತ್ತದೆ ಎಂದು ಒತ್ತಿ ಹೇಳಿದ್ರು.
ಭಾರತ ಮತ್ತು ರಷ್ಯಾ ಈಗಾಗಲೇ ವಿಶ್ವಸಂಸ್ಥೆ, G20, ಬ್ರಿಕ್ಸ್ , SCO ನಂತಹ ಒಕ್ಕೂಟಗಳಲ್ಲಿ ಸಹಕರಿಸುತ್ತಿವೆ. ಇದರ ಹೊರತಾಗಿಯೂ ಎರಡೂ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡುವುದನ್ನು ಜೊತೆಗೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪರಸ್ಪರ ಚರ್ಚಿಸುವುದನ್ನು ಮುಂದುವರಿಸುತ್ತವೆ ಎಂದು ತಿಳಿಸಿದರು.
ಭಾರತ ಶಾಂತಿಯ ಪರ
ಇದೇ ವೇಳೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮತ್ತೆ ಉಕ್ರೇನ್ ಶಾಂತಿ ಸಂದೇಶ ನೀಡಿದರು. ಉಕ್ರೇನ್ ವಿಷಯದಲ್ಲಿ ಭಾರತ ಯಾವಾಗಲೂ ಶಾಂತಿಯನ್ನ ಬೆಂಬಲಿಸುತ್ತದೆ. ಈ ಸಮಸ್ಯೆಗೆ ಶಾಂತಿಯುತ ಮತ್ತು ಶಾಶ್ವತ ಪರಿಹಾರ ಕಂಡುಕೊಳ್ಳಲು ಮಾಡುವ ಪ್ರತಿಯೊಂದು ಪ್ರಯತ್ನವನ್ನೂ ನಾವು ಸ್ವಾಗತಿಸುತ್ತೇವೆ ಎಂದು ಹೇಳಿದರು.
ಅಲ್ಲದೇ ಕಳೆದ 8 ದಶಕಗಳಲ್ಲಿ ಇಡೀ ವಿಶ್ವ ಅನೇಕ ಏರಿಳಿತಗಳನ್ನು ಕಂಡಿದೆ. ಮಾನವೀಯತೆಯು ಅನೇಕ ಸವಾಲುಗಳನ್ನು ಮತ್ತು ಕಠಿಣ ಸಮಯಗಳನ್ನು ಎದುರಿಸಿದೆ. ಇದೆಲ್ಲರದ ನಡುವೆಯೂ ಭಾರತ -ರಷ್ಯಾದ ಸ್ನೇಹವು ಧ್ರುವ ನಕ್ಷತ್ರದಂತೆ ಸ್ಥಿರ ಮತ್ತು ಬಲವಾಗಿ ಉಳಿದಿದೆ ಎಂದು ಶ್ಲಾಘಿಸಿದರು.
ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ಮುನ್ನ ಭಾರತ-ರಷ್ಯಾ ನಡುವೆ ಹಲವು ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಉಭಯ ದೇಶಗಳ ನಡುವಿನ ಪರಿಸ್ಪರ ಸಹಕಾರ ಬಲಪಡಿಸುವ ನಿಟ್ಟಿನಲ್ಲಿ ಸಹಕಾರ ಮತ್ತು ವಲಸೆ, ಆರೋಗ್ಯ ರಕ್ಷಣೆ ಮತ್ತು ವೈದ್ಯಕೀಯ ಶಿಕ್ಷಣ, ಆಹಾರ ಸುರಕ್ಷತೆ, ಧ್ರುವ ಹಡಗುಗಳು ಮತ್ತು ಕಡಲ ಸಹಕಾರ ಹಾಗೂ ರಸಗೊಬ್ಬರ ಸೇರಿದಂತೆ ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಾಯಿತು.
