ಚಿಕ್ಕಬಳ್ಳಾಪುರ: ಆತ ತಾಯಿಗೆ ಇದ್ದ ಏಕೈಕ ಆಧಾರ. ಗಂಡ ಮತ್ತು ಹಿರಿಯ ಮಗನನ್ನ ಕಳೆದುಕೊಂಡು, ಚಿಕ್ಕ ಮಗನ ಬಗ್ಗೆ ನೂರಾರು ಕನಸು ಕಂಡಿದ್ದಳು. ಆದ್ರೆ ಮಗ ಪ್ರೀತಿ-ಪ್ರೇಮ ಅಂತ ಹೋಗಿ ಈಗ ಬೀದಿ ಹೆಣವಾಗಿದ್ದಾನೆ. ಪ್ರೀತಿಯ ವಿಚಾರದಲ್ಲಿ ಹಿಂದೆ ಗಲಾಟೆ ನಡೆದಿತ್ತಂತೆ. ಅದೇ ದ್ವೇಷದಿಂದ ಆಟೋದಲ್ಲಿ ಹೋಗುತ್ತಿದ್ದವನನ್ನ ಹಿಂದೆಯಿಂದ ಕಾರಿನಲ್ಲಿ ಅಡ್ಡಗಟ್ಟಿ, ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿ ಕೊಲೆ ಮಾಡಿದ್ದಾರೆ. ಅಷ್ಟಕ್ಕೂ ಕೊಲೆಯಾದವ ಯಾರು? ಎಲ್ಲಿ ಘಟನೆ ನಡೆದಿದ್ದು? ಅಂತಿರಾ ಮುಂದೆ ಓದಿ…
ಹೌದು. ಹೀಗೆ ರಕ್ತದ ಮಡುವಿನಲ್ಲಿ ಬಿದ್ದಿರುವ ಯುವಕ, ಮಗನ ಸಾವಿಗೆ ನ್ಯಾಯ ಬೇಕು ಎಂದು ಪೊಲೀಸ್ ಠಾಣೆಯ ಎದುರಿನಲ್ಲಿ ಆಕ್ರೋಶ ಹೊರ ಹಾಕುತ್ತಿರುವ ಕುಟುಂಬಸ್ಥರು, ಇದ್ದ ಒಬ್ಬ ಮಗನನ್ನು ಕಳೆದುಕೊಂಡು ಕುಸಿದು ಬಿದ್ದಿರುವ ತಾಯಿ, ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯ ಮುಂಭಾಗ.
ಪವನ್ (28) ಕೊಲೆಯಾದ ದುರ್ದೈವಿ. ಈತ ವೃತ್ತಿಯಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಮನೆಯಲ್ಲಿದ್ದವನಿಗೆ ಯಾವುದೋ ಕರೆ ಬಂತು ಎಂದು ಮನೆಯಿಂದ ಹೊರಬಂದಿದ್ದಾನೆ. ಈ ವೇಳೆ ದೊಡ್ಡಬಳ್ಳಾಪುರದ ಡಿ ಕ್ರಾಸ್‌ನಿಂದ ಟಿಬಿ ಸರ್ಕಲ್ ಕಡೆಗೆ ಬರುವ ವೇಳೆ ಕಾರಿನಿಂದ ಬಂದ ದುಷ್ಕರ್ಮಿಗಳು ಏಕಾಏಕಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಇನ್ನು, ಮೃತ ಪವನ್ ಮನೆಗೆ ಇದ್ದ ಏಕೈಕ ಆಧಾರ. ತಂದೆ ಮತ್ತು ಹಿರಿಯ ಸೋದರ ಸತ್ತ ನಂತರ ಮನೆಯ ಜವಾಬ್ದಾರಿಯನ್ನು ಆತನೇ ವಹಿಸಿಕೊಂಡಿದ್ದ. ಈಗ ಮಗನನ್ನು ಕಳೆದುಕೊಂಡ ತಾಯಿ ದಿಕ್ಕುದೋಚದ ಸ್ಥಿತಿಗೆ ಹೋಗಿದ್ದಾಳೆ. ಇನ್ನು ಕೊಲೆಯಾದವ ಎರಡು ದಿನದ ಹಿಂದೆಯಷ್ಟೇ ಅಯ್ಯಪ್ಪ ಸ್ವಾಮಿ ದರ್ಶನ ಪಡೆದು ವಾಪಸ್ ಆಗಿದ್ದ. ಆದರೆ ಈಗ ಪ್ರೀತಿ ವಿಚಾರಕ್ಕೆ ಬೀದಿ ಹೆಣವಾಗಿದ್ದಾನೆ ಎಂದು ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ. ಹುಡುಗಿ ವಿಚಾರವಾಗಿ ಮೃತ ಪವನ್ ಮತ್ತು ಆತನ ಕುಟುಂಬಸ್ಥರು ಹುಡುಗಿಗೆ ಬುದ್ಧಿವಾದ ಹೇಳಿದ್ದರಂತೆ. ಆಗ ಆಕೆ ನಾನು ಇನ್ನೂ ಆತನ ತಂಟೆಗೆ ಬರುವುದಿಲ್ಲ ಎಂದು ಹೇಳಿದ್ದರಂತೆ. ಆದರೆ ಈಗ ಆಕೆಯ ಕಡೆಯವರೆ ಕೊಲೆ ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ದೊಡ್ಡಬಳ್ಳಾಪುರ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಈಗಾಗಲೇ ಆರೋಪಿಗಳ ಪತ್ತೆಗಾಗಿ ಎರಡು ತಂಡಗಳ ರಚನೆ ಮಾಡಿದ್ದು, ಶೋಧ ಕಾರ್ಯ ಮುಂದುವರೆಸಿದ್ದಾರೆ.
ಒಟ್ಟಾರೆ, ಪ್ರೀತಿ-ಪ್ರೇಮ ಅಂತೇಳಿ, ಮಗ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದರೆ, ಇತ್ತ ಮನೆಯಲ್ಲಿ ಇದ್ದ ಎಲ್ಲಾ ಗಂಡಸರು ಸಾವನಪ್ಪಿದ ಕಾರಣ ತಾಯಿ ದಿಕ್ಕು ದೋಚದ ಸ್ಥಿತಿಗೆ ತಲುಪಿದ್ದಾರೆ. ಆರೋಪಿಗಳನ್ನ ಬಂಧಿಸಿದ ನಂತರ ಕೊಲೆಗೆ ನಿಖರ ಕಾರಣ ತಿಳಿದು ಬರಲಿದೆ. ಪ್ರೀತಿ ವಿಚಾರಕ್ಕೆ ಯುವಕ ಬೀದಿ ಹೆಣವಾಗಿದ್ದು ಮಾತ್ರ ವಿಪರ್ಯಾಸವೇ ಸರಿ.
