ಆನೇಕಲ್: ಸಿಗರೇಟ್ ಹಾಗೂ ನಿಷೇಧಿತ ಮಾದಕ ವಸ್ತುಗಳು ಪತ್ತೆಯಾದ ಹಿನ್ನೆಲೆ ಪರಪ್ಪನ ಅಗ್ರಹಾರ ಜೈಲು ವಾರ್ಡರ್‌ನನ್ನ ಬಂಧಿಸಿರುವ ಘಟನೆ ನಡೆದಿದೆ.
ರಾಹುಲ್ ಪಾಟೀಲ್ ಬಂಧನಕ್ಕೊಳಗಾದ ವಾರ್ಡರ್. ಜೈಲು ಅಧೀಕ್ಷಕ ಪರಮೇಶ್ ಅವರ ದೂರನ್ನ ಆಧರಿಸಿ ರಾಹುಲ್‌ನನ್ನ ಬಂಧಿಸಲಾಗಿದೆ.
ಬಂಧನಕ್ಕೆ ಕಾರಣ ಏನು?
2018 ರಲ್ಲಿ ವಾರ್ಡರ್ ಆಗಿ ಕಾರಾಗೃಹ ಇಲಾಖೆಗೆ ಸೇರ್ಪಡೆಯಾಗಿದ್ದ ರಾಹುಲ್ ಈ ಹಿಂದೆ ಬೆಳಗಾವಿ ಕಾರಾಗೃಹದಲ್ಲಿ ಸೇವೆ ಸಲ್ಲಿಸಿದ್ದರು. ಪ್ರಸಕ್ತ ವರ್ಷದ ಜೂನ್ 29 ರಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಾರ್ಡನ್ ಆಗಿ ಕೆಲಸ ಮಾಡುತ್ತಿದ್ದರು. ಇದನ್ನೂ ಓದಿ: ಸಿಲ್ಕ್ ಬೋರ್ಡ್ ಪ್ರಯಾಣಿಕರಿಗೆ ಗುಡ್‌ನ್ಯೂಸ್ – ಶೀಘ್ರದಲ್ಲೇ ಕಡಿಮೆಯಾಗಲಿದೆ ಟ್ರಾಫಿಕ್ ಬಿಸಿ
ಎಂದಿನಂತೆ ಕರ್ತವ್ಯ ನಿರ್ವಹಿಸುತ್ತಿದ್ದ ರಾಹುಲ್ ಶುಕ್ರವಾರ ಸಂಜೆ 6:50 ರ ಸುಮಾರಿಗೆ ಮಹಾದ್ವಾರದ ಬಳಿ ತಪಾಸಣೆಗೆ ಬಂದಿದ್ದರು. KSESF ಸಿಬ್ಬಂದಿ ತಪಾಸಣೆ ವೇಳೆ 2 ಸಿಗರೇಟ್ ಪ್ಯಾಕ್, 60 ಗ್ರಾಮ್‌ನಷ್ಟು ಮಾದಕ ವಸ್ತು ರೀತಿಯ ವಸ್ತು ಪತ್ತೆಯಾಗಿತ್ತು. ಸಿಬ್ಬಂದಿ ಕೂಡಲೇ ಈ ಮಾಹಿತಿಯನ್ನ ಜೈಲು ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಜೈಲು ಅಧೀಕ್ಷಕ ಪರಮೇಶ್ ಅವರು ನೀಡಿದ ದೂರನ್ನು ಆಧರಿಸಿ ರಾಹುಲ್‌ನನ್ನ ಬಂಧಿಸಲಾಗಿದೆ.
