Ad image

ಸೆರೆ ಸಿಕ್ಕಿದ್ದ 4 ಹುಲಿ ಮರಿಗಳು ಸಾವು

Team SanjeMugilu
1 Min Read

ಮೈಸೂರು: ಜಿಲ್ಲೆಯ ಹುಣಸೂರು  ತಾಲೂಕಿನ ಗೌಡನಕಟ್ಟೆ ಬಳಿ ಸೆರೆ ಸಿಕ್ಕಿದ್ದ ನಾಲ್ಕು ಹುಲಿ ಮರಿಗಳು ಸಾವನ್ನಪ್ಪಿವೆ. ಹುಲಿ ಮರಿಗಳನ್ನು ಕೂರ್ಗಳ್ಳಿ ಪುನರ್ವಸತಿ ಕೇಂದ್ರದಲ್ಲಿದ್ದಲ್ಲಿರಿಸಲಾಗಿತ್ತು. ನಾಲ್ಕು ದಿನಗಳ ಅಂತರದಲ್ಲಿ ಸಾವಿಗೀಡಾಗಿವೆ. ಹುಲಿ ಮರಿಗಳ ಸಾವಿಗೆ ಕಾರಣ ತಿಳಿದು ಬಂದಿಲ್ಲ.

ಗೌಡನಕಟ್ಟೆಯ ಪ್ರಕಾಶ್‌ ಜೋಳದ ಹೊಲದಲ್ಲಿ ನ.28ರಂದು ನಾಲ್ಕು ಮರಿಗಳೊಂದಿಗೆ ತಾಯಿ ಹುಲಿ ಕಾಣಿಸಿಕೊಂಡಿತ್ತು. ಮಧ್ಯರಾತ್ರಿ ತಾಯಿ ಹುಲಿ ಸೆರೆಯಾಗಿತ್ತು. ಎರಡು ದಿನಗಳ ನಂತರ ನ.30ರಂದು ನಾಲ್ಕು ಹುಲಿ ಮರಿಗಳು ಪತ್ತೆಯಾಗಿದ್ದವು. ಸೆರೆ ಹಿಡಿಯುವ ವೇಳೆ ಜನರ ಕಿರುಚಾಟದಿಂದ ಹುಲಿ ಮರಿಗಳು ಗಾಬರಿಯಾಗಿದ್ದವು. ಎರಡು ದಿನ ತಾಯಿಯಿಂದ ದೂರವಾಗಿದ್ದ ಮರಿಗಳು ಆಹಾರವಿಲ್ಲದೇ ಬಳಲಿದ್ದವು. ಜನರ ಕೂಗಾಟದಿಂದ ಅತ್ತಿಂದಿತ್ತ ಓಡಾಡಿ ಸೆರೆ ಹಿಡಿಯುವ ವೇಳೆ ನಿತ್ರಾಣಗೊಂಡಿದ್ದವು.

ತಕ್ಷಣವೇ ಸೂಕ್ತ ಚಿಕಿತ್ಸೆಗಾಗಿ ಪುನರ್ವಸತಿ ಕೇಂದ್ರಕ್ಕೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಗಾಬರಿಗೊಳಗಾಗಿದ್ದ ಮರಿಗಳು ಸರಿಯಾಗಿ ಆಹಾರ ಸೇವಿಸುತ್ತಿರಲಿಲ್ಲ. ಅಸ್ವಸ್ಥಗೊಂಡಿದ್ದ ಹುಲಿ ಮರಿಗಳು ಸಾವನ್ನಪ್ಪಿವೆ. ಪಶುವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ನ.29 ಹಾಗೂ 30ರಂದು ಸೆರೆ ಸಿಕ್ಕಿದ್ದ ನಾಲ್ಕು ಹುಲಿ ಮರಿಗಳು ಸಾವನ್ನಪ್ಪಿವೆ. ಆದರೆ, ತಾಯಿ ಹುಲಿ ಆರೋಗ್ಯದಿಂದಿದೆ.

ಹುಲಿ ಮರಿಗಳ ಅಂಗಾಂಗಗಳನ್ನು ಪರೀಕ್ಷೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ. ಹುಲಿ ಮರಿಗಳ ಸಾವಿನ ಬಗ್ಗೆ ಅರಣ್ಯ ಇಲಾಖೆ ಯಾರಿಗೂ ಮಾಹಿತಿ ನೀಡಿಲ್ಲ.

Share This Article