Ad image

ಸಿಸಿಬಿ ಪೊಲೀಸರ ಬೇಟೆ – ಹೊಸ ವರ್ಷಕ್ಕೆ ತಂದಿದ್ದ 4.20 ಕೋಟಿ ಮೌಲ್ಯದ ಮಾದಕ ಪದಾರ್ಥ ಜಪ್ತಿ

Team SanjeMugilu
1 Min Read

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಡ್ರಗ್ಸ್ ವಿರುದ್ಧದ ಹೋರಾಟ ಮುಂದುವರಿಸಿರುವ ಸಿಸಿಬಿ ಪೊಲೀಸರು ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಇಬ್ಬರು ವಿದೇಶಿ ಪ್ರಜೆಗಳ ಸಹಿತ ಮೂವರು ಡ್ರಗ್ ಪೆಡ್ಲರ್‌ಗಳನ್ನ  ಬಂಧಿಸಿದ್ದಾರೆ.

ನೈಜೀರಿಯಾ ಒಬೈಯಸಿ ಚಿಗೋಜಿ ದವಿ, ಸನಿ ಸಾದಿಕ್ ಹಾಗೂ ಕೇರಳ ಮೂಲದ ಮೊಹಮ್ಮದ್ ಮುಸ್ತಫಾ ಬಂಧಿತ ಆರೋಪಿಗಳು. ಬಾಗಲೂರು ಹಾಗೂ ಅಶೋಕನಗರ ಠಾಣೆಗಳ ವ್ಯಾಪ್ತಿಯಲ್ಲಿ ಆರೋಪಿಗಳನ್ನ ಬಂಧಿಸಲಾಗಿದ್ದು, 4.20 ಕೋಟಿ ರೂ. ಮೌಲ್ಯದ ವಿವಿಧ ಮಾದಕ ಪದಾರ್ಥಗಳನ್ನ ವಶಪಡಿಸಿಕೊಳ್ಳಲಾಗಿದೆ.

ಬಂಧಿತ ನೈಜೀರಿಯಾ ಪ್ರಜೆಗಳು 2024ರಲ್ಲಿ ವಿದ್ಯಾರ್ಥಿ ವೀಸಾ ಪಡೆದು ಭಾರತಕ್ಕೆ ಬಂದು ಉತ್ತರ ಪ್ರದೇಶದ ಖಾಸಗಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ನಂತರ ಬೆಂಗಳೂರಿಗೆ ಬಂದು ಬಾಗಲೂರಿನ ಮೋಹನ್ ಕುಮಾರ್ ಲೇಔಟ್‌ನಲ್ಲಿ ವಾಸವಾಗಿದ್ದುಕೊಂಡು ಮಾದಕ ಪದಾರ್ಥಗಳ ಮಾರಾಟ ಮಾಡಲಾರಂಭಿಸಿದ್ದರು. ಆರೋಪಿಗಳ ವಶದಲ್ಲಿದ್ದ 2.20 ಕೋಟಿ ರೂ. ಮೌಲ್ಯದ 1 ಕೆ.ಜಿ 120 ಗ್ರಾಂ ಎಂಡಿಎಂಎ ಕ್ರಿಸ್ಟಲ್‌ಗಳು, 2 ಮೊಬೈಲ್ ಫೋನ್‌ಗಳು, 1 ಎಲೆಕ್ಟ್ರಾನಿಕ್ ತೂಕದ ಯಂತ್ರ ಮತ್ತು ಕೃತ್ಯಕ್ಕೆ ಬಳಸಿದ ಇತರೆ ವಸ್ತುಗಳನ್ನು ಸೀಜ್ ಮಾಡಲಾಗಿದೆ.

ಇನ್ನು ಸಣ್ಣ ಮಟ್ಟದ ಬೀದಿ ವ್ಯಾಪಾರ ಮಾಡಿಕೊಂಡಿದ್ದ ಮೊಹಮ್ಮದ್ ಮುಸ್ತಫಾ, ಕೇರಳದಿಂದ ಹೈಡ್ರೋ ಗಾಂಜಾ ಖರೀದಿಸಿ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ. ಆತನ ವಶದಲ್ಲಿದ್ದ 2 ಕೋಟಿ ರೂ. ಮೌಲ್ಯದ 2 ಕೆ.ಜಿ ಹೈಡ್ರೋ ಗಾಂಜಾ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Share This Article