ತುಮಕೂರು/ ದಾವಣಗೆರೆ: ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರ ಅಂತ್ಯಕ್ರಿಯೆಗೆ ಸಿದ್ದಗಂಗಾ ಮಠದಿಂದ ಸುಮಾರು 100 ವಿಶೇಷ ವಿಭೂತಿ ಗಟ್ಟಿಯನ್ನು ರವಾನಿಸಲಾಗಿದೆ. ಮಠಾಧ್ಯಕ್ಷ ಸಿದ್ದಲಿಂಗಾ ಸ್ವಾಮಿಜಿಗಳು ತಮ್ಮ ವಾಹನದಲ್ಲೇ ದಾವಣಗೆರೆಯತ್ತ ವಿಶೇಷ ವಿಭೂತಿ ಗಟ್ಟಿಗಳನ್ನು ತೆಗೆದುಕೊಂಡು ಹೋಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೀಗಳು, ಶಿವಶಂಕರಪ್ಪನವರು ನಮ್ಮ ಸಮಾಜದ ಮುಖಂಡರು. ಸುಧೀರ್ಘ ಸಾಮಾಜಿಕ ಶೈಕ್ಷಣಿಕ ರಾಜಕೀಯ ಸೇವೆ ಕೈಗೊಂಡವರು. ಇಡೀ ನಾಡಿಗೆ, ಜಗತ್ತಿಗೆ ಶಾಮನೂರು ಶಿವಶಂಕರಪ್ಪ ಪರಿಚಯವಾಗಿದ್ದಾರೆ. ವಾಣಿಜ್ಯ ನಗರಿ ದಾವಣಗೆರೆಯನ್ನು ಶೈಕ್ಷಣಿಕ ನಗರಿಯಾಗಿಯೂ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದಿದ್ದಾರೆ.
ಒಂದೇ ಪಕ್ಷದಲ್ಲಿ ಇದ್ದು ಅವರು ಛಾಪು ಮೂಡಿಸಿದ್ದಾರೆ. ಪಕ್ಷ ನಿಷ್ಠೆಯಿಂದ ಇದ್ದು, ಪಕ್ಷ ಬೆಳೆಸಿದವರು. ವೀರಶೈವ ಮಹಾಸಭಾದ ಅಧ್ಯಕ್ಷರಾಗಿ ಸಮಾಜದ ಸೇವೆ ಸಲ್ಲಿಸಿದ್ದಾರೆ. ವೀರಶೈವ ಮಹಾಸಭಾವನ್ನು ಸಾಮಾಜಿಕ, ಆರ್ಥಿಕವಾಗಿ ಬಲಗೊಳಿಸಿದ ಕೀರ್ತಿ ಅವರದ್ದು. ಸಮಾಜದ ಐಕ್ಯತೆ, ಒಗ್ಗಟ್ಟನ್ನು ಮನಸಲ್ಲಿ ಇಟ್ಟುಕೊಂಡು ಕೆಲಸ ಮಾಡಿದವರು. ಸಮಾಜದ ಜನರು ರಾಜಕೀಯವಾಗಿ ಆರ್ಥಿಕವಾಗಿ ಮುಂದೆ ಬರಬೇಕು ಎನ್ನುವ ಕನಸು ಕಂಡಿದ್ದರು.
ಶಾಮನೂರು ಶಿವಶಂಕರಪ್ಪ ರಾಜಕೀಯ ಸಾಮಾಜಿಕ ಸೇವೆಯಲ್ಲಿ ವೀರ ಮತ್ತು ಧೀರ. ಅವರು ಸಮಾಜದ ಅವಿಸ್ಮರಣೀಯ ನಾಯಕರು. ಅವರು ಬಿಟ್ಟು ಹೋದ ಮಾದರಿ ಆದರ್ಶ ಅನುಕರಣೀಯವಾಗಿದೆ. ಸಿದ್ದಗಂಗಾ ಮಠದಿಂದ ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತೇನೆ. ಅವರು 6-7 ಬಾರಿ ಶಾಸಕರಾದವರು. ಸಿಎಂ ಆಗುವ ಕನಸು ಕಂಡಿದ್ದರೂ ಕಂಡಿರಬಹುದು. ಅದರ ಬಗ್ಗೆ ನನಗೆ ಗೊತ್ತಿಲ್ಲ ಎಂದಿದ್ದಾರೆ.
