Ad image

ಹೊಸ ವರ್ಷಾಚರಣೆಗೆ ಹೊಸ ರೂಲ್ಸ್‌ – ಹೋಟೆಲ್, ಬಾರ್, ಪಬ್, ರೆಸ್ಟೋರೆಂಟ್‌ಗೆ ಪೊಲೀಸ್‌ ಗೈಡ್‌ಲೈನ್ಸ್‌ ರಿಲೀಸ್‌

Team SanjeMugilu
2 Min Read

ಬೆಂಗಳೂರು: ಈ ಬಾರಿ ಹೊಸ ವರ್ಷ ಸ್ವಾಗತಿಸಲು ಬೆಂಗಳೂರು ನಗರ ಸಜ್ಜಾಗಿದ್ದು, ಪೊಲೀಸ್‌ ಇಲಾಖೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ.

ಗೋವಾದ ನೈಟ್‌ಕ್ಲಬ್‌ ಅಗ್ನಿ ದುರಂತದಲ್ಲಿ 20ಕ್ಕೂ ಹೆಚ್ಚು ಜನ ಮೃತಪಟ್ಟ ಘಟನೆಯ ನಂತರ ಇದೀಗ ಸುರಕ್ಷತೆಯ ದೃಷ್ಠಿಯಿಂದ ಸರ್ಕಾರ, ಪೊಲೀಸ್ ಇಲಾಖೆ ಹಾಗೂ ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ ಬೆಂಗಳೂರಿನ ಪಬ್, ಬಾರ್, ಕ್ಲಬ್​ಗಳಿಗೆ 19 ಅಂಶಗಳ ಮಾರ್ಗಸೂಚಿ  ಬಿಡುಗಡೆ ಮಾಡಿವೆ. ಧ್ವನಿವರ್ಧಕ ಸೌಂಡ್ ಎಷ್ಟಿರಬೇಕು? ಏನೆಲ್ಲ ಮುನ್ನೆಚ್ಚರಿಕೆ ಕ್ರಮ ತಗೆದುಕೊಳ್ಳಬೇಕು? ಎಲ್ಇಡಿ ಸ್ಕ್ರೀನ್ ಹಾಗೂ ಸುರಕ್ಷಿತಾ ಮಾನದಂಡಗಳ ಕುರಿತು ಸಲಹೆ ಸೂಚನೆ ನೀಡಲಾಗಿದೆ.

ಹೊಸ ವರ್ಷಕ್ಕೆ ಹೊಸ ರೂಲ್ಸ್‌ – ಏನಿದೆ ಮಾರ್ಗಸೂಚಿಯಲ್ಲಿ?
1. ಕಾರ್ಯಕ್ರಮಗಳಿಗೆ ಸಂಬಂಧ ಪಟ್ಟ ಇಲಾಖೆಗಳಿಂದ ಅನುಮತಿ ಕಡ್ಡಾಯ ಹಾಗೂ ನಿಯಮ ಪಾಲಿಸಬೇಕು.
2. ಹೊಸ ವರ್ಷಾಚರಣೆ ಸಂಬಂಧ ನಿಗಧಿತ ಸಮಯವನ್ನ ಪಾಲಿಸಬೇಕು.
3. ಕಡ್ಡಾಯವಾಗಿ ಧ್ವನಿವರ್ಧಕ ಪರವಾನಗಿ ಪಡೆದುಕೊಂಡ ನಂತರ ನಿಗದಿತ ಶಬ್ಧ ಮಿತಿ ಇರಬೇಕು.
4. ಸ್ಥಳಾವಕಾಶಕ್ಕೆ ತಕ್ಕಂತೆ ಟಿಕೆಟ್/ಪಾಸ್‌ಗಳನ್ನು ವಿತರಿಸಬೇಕು. ಹಾಗೂ ನೆಲಮಹಡಿ, ಪಾರ್ಕಿಂಗ್ ಸ್ಥಳಗಳು, ಟೆರೆಸ್‌ನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ.
5. ಕಾರ್ಯಕ್ರಮದ ಸ್ಥಳಗಳಲ್ಲಿ ಸ್ಕ್ರೀನ್‌ಗಳನ್ನು ಸಾರ್ವಜನಿಕರಿಗೆ ಕಾಣುವಂತೆ ಸ್ಕ್ರೀನಿಂಗ್ ಮಾಡಬಾರದು.
6. ಕಾರ್ಯಕ್ರಮಕ್ಕೆ ಬರುವವರ ತಪಾಸಣೆ ನಡೆಸಿ ಸಂಶಯಾಸ್ಪದ ವಸ್ತು/ವ್ಯಕ್ತಿಗಳು ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡುಬೇಕು.
7. ಅಗ್ನಿ ನಂದಿಸುವ ವಸ್ತುಗಳನ್ನ ಅಳವಡಿಸಿಕೊಳ್ಳಬೇಕು, ನಿರ್ಗಮನ ದ್ವಾರಗಳು ದೊಡ್ಡದಾಗಿರಬೇಕು.
8. ಕಾರ್ಯಕ್ರಮದ ಪ್ರತಿ ಜಾಗದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ 30 ದಿನಗಳವರೆಗೆ ಸ್ಟೋರೆಜ್ ಮಾಡಬೇಕು.
9. ಮಾದಕ ವಸ್ತುಗಳ ಬಳಕೆ‌ ಕಂಡು ಬಂದರೆ ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು. ಪೊಲೀಸರೇ ದಾಳಿ ನಡೆಸಿದಾಗ ಸಿಕ್ಕಿಬಿದ್ದರೆ ಕಾರ್ಯಕ್ರಮದ ಕಟ್ಟಡದ ಮಾಲೀಕರು/ಮ್ಯಾನೇಜರ್‌ ವಿರುದ್ಧ ಕೇಸ್.
10. ಸಾರ್ವಜನಿಕರ ವಾಹನಗಳಿಗೆ ತಮ್ಮ ಪಾರ್ಕಿಂಗ್ ಸ್ಥಳದಲ್ಲಿಯೇ ವ್ಯವಸ್ಥೆ ಮಾಡಿಸಬೇಕು.
11. ಹೊಸ ವರ್ಷಾಚರಣೆಯ ಕಾರ್ಯಕ್ರಮಗಳಿಗೆ ಸೆಲೆಬ್ರಿಟಿಗಳು, ಡಿಜೆಗಳು, ನಟ ನಟಿಯರನ್ನ ಆಹ್ವಾನಿಸಿದ್ದಲ್ಲಿ ಅವರ ಮಾಹಿತಿಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ನೀಡಬೇಕು.
12. ಪಾರ್ಕಿಂಗ್ ಸ್ಥಳ ಮತ್ತು ಮಹಿಳೆಯರಿರುವ ಸ್ಥಳಗಳ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಖಾಸಗಿ ಭದ್ರತಾ ಸಿಬ್ಬಂದಿ ನೇಮಿಸಬೇಕು.
13. ಸೆಕ್ಯೂರಿಟಿ ಸಿಬ್ಬಂದಿ ಹಾಗೂ ಬೌನ್ಸರ್‌ಗಳನ್ನು ನಿಯೋಜಿಸಿ ಕೊಳ್ಳುವ ಏಜೆನ್ಸಿಗಳು ‘PSARA’ ದಲ್ಲಿ ನೊಂದಣಿ ಮಾಡಬೇಕು.
14. ಪಾರ್ಟಿ ವೇಳೆ ಇರುವ ಕೆಲಸಗಾರರ ಮಾಹಿತಿಯನ್ನ ಧೃಢೀಕೃತ ಐ.ಡಿ ಕಾರ್ಡ್‌ನೊಂದಿಗೆ ನೀಡಬೇಕು.
15. ಲೈಸೆನ್ಸ್ ಇಲ್ಲದ ಔಟ್ ಡೋರ್ ಸ್ಥಳಗಳಲ್ಲಿ ಮದ್ಯ ಸರಬರಾಜಿಗೆ ಅವಕಾಶವಿಲ್ಲ.
16. ಹೋಟೆಲ್‌ಗಳ ರೂಮ್‌ಗಳಲ್ಲಿ ಗುಂಪು ಸೇರಿ ನಿಯಮ ಬಾಹಿರವಾಗಿ ಖಾಸಗಿ ಪಾರ್ಟಿ ನಡೆಸಲು ಅವಕಾಶ ನೀಡಬಾರದು.
17. ಕಾರ್ಯಕ್ರಮದ ಸ್ಥಳದಲ್ಲಿ ಗಲಾಟೆ ನಡೆದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು.
18. ಕಾರ್ಯಕ್ರಮದ ವೇಳೆ ಪಟಾಕಿ ಸಿಡಿಸುವುದನ್ನ ಸಂಪೂರ್ಣವಾಗಿ ನಿಷೇಧಿಸಿದೆ.
19. ಯಾವುದೇ ಅಹಿತಕರವಾದ ಘಟನೆಗಳು ನಡೆಯದಂತೆ ಕ್ರಮಗಳನ್ನ ಕೈಗೊಳ್ಳಬೇಕು.

ಒಂದು ವೇಳೆ ಮಾರ್ಗಸೂಚಿ ಉಲ್ಲಂಘಿಸಿದ್ರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

Share This Article