ಬೆಂಗಳೂರು: ರಾಜ್ಯದಲ್ಲಿ ಚಳಿ ತೀವ್ರತೆ ಮತ್ತಷ್ಟು ಹೆಚ್ಚಾಗಿದ್ದು, ಕಳೆದ ಎರಡು ದಿನಗಳಿಂದ ಕನಿಷ್ಠ ತಾಪಮಾನ ದಾಖಲೆಯ ಮಟ್ಟಕ್ಕೆ ಇಳಿದಿದೆ. ನಿನ್ನೆ ಹಾಗೂ ಇಂದು ಮುಂಜಾನೆ ರಾಜ್ಯದ ಹಲವು ಭಾಗಗಳಲ್ಲಿ ತಾಪಮಾನ ಒಂದಂಕಿಗೆ ಇಳಿಯುವ ಮೂಲಕ ಜನಜೀವನದ ಮೇಲೆ ಸ್ಪಷ್ಟ ಪರಿಣಾಮ ಬೀರಿದೆ. ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಭಾರೀ ಚಳಿ ಆವರಿಸಿಕೊಂಡಿದ್ದು, ಹವಾಮಾನ ಇಲಾಖೆ ಇನ್ನೂ ಎರಡು ದಿನಗಳ ಕಾಲ ಇದೇ ಪರಿಸ್ಥಿತಿ ಮುಂದುವರೆಯುವ ಮುನ್ಸೂಚನೆ ನೀಡಿದೆ. ಬೀದರ್ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಕನಿಷ್ಠ ತಾಪಮಾನ 7 ಡಿಗ್ರಿ ಸೆಲ್ಸಿಯಸ್ಗೆ ಇಳಿದಿದ್ದು, ಇದು ಈ ಋತುವಿನ ಅತ್ಯಂತ ಕಡಿಮೆ ಮಟ್ಟಗಳಲ್ಲಿ ಒಂದಾಗಿದೆ. ಅದೇ ರೀತಿ ಕಲಬುರಗಿ, ಯಾದಗಿರಿ, ವಿಜಯಪುರ ಮತ್ತು ರಾಯಚೂರು ಜಿಲ್ಲೆಗಳಲ್ಲಿ 10 ಡಿಗ್ರಿ ಸೆಲ್ಸಿಯಸ್ಗೆ ತಾಪಮಾನ ಇಳಿಕೆಯಾಗಿದೆ. ಬೆಳಗಿನ ಜಾವ ದಟ್ಟ ಮಂಜು, ತಣ್ಣನೆಯ ಗಾಳಿ ಮತ್ತು ಕಡಿಮೆ ತಾಪಮಾನದಿಂದ ಜನರು ಮನೆಯಿಂದ ಹೊರಬರಲು ಹಿಂಜರಿಯುತ್ತಿರುವುದು ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಹವಮಾನ ಇಲಾಖೆ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ನೀಡಿದೆ.
ಕೆಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!
ಹವಾಮಾನ ಇಲಾಖೆಯ ಪ್ರಕಾರ, ಉತ್ತರ ಒಳನಾಡು ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಬೀಸುತ್ತಿರುವ ಶೀತಗಾಳಿ ಈ ತಾಪಮಾನ ಕುಸಿತಕ್ಕೆ ಪ್ರಮುಖ ಕಾರಣ. ಈ ಹಿನ್ನೆಲೆಯಲ್ಲಿ ರಾಜ್ಯದ ಐದು ಜಿಲ್ಲೆಗಳಿಗೆ ಶೀತಗಾಳಿ ಎಚ್ಚರಿಕೆ ಮುಂದುವರಿಸಲಾಗಿದೆ. ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ ಮತ್ತು ರಾಯಚೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಜನರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ. ಕೃಷಿ ಕ್ಷೇತ್ರದ ಮೇಲೂ ಈ ತೀವ್ರ ಚಳಿಯ ಪರಿಣಾಮ ಕಂಡುಬರುತ್ತಿದೆ. ಕೆಲವು ಪ್ರದೇಶಗಳಲ್ಲಿ ಬೆಳೆಗಳ ಮೇಲೆ ಮಂಜಿನ ಪರಿಣಾಮ ಬೀರಿದ್ದು, ರೈತರು ಬೆಳೆ ರಕ್ಷಣೆಗೆ ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ತಜ್ಞರ ಪ್ರಕಾರ, ಬೆಳಗಿನ ಜಾವದ ತೀವ್ರ ಚಳಿ ತರಕಾರಿ ಮತ್ತು ಹೂ ಬೆಳೆಗಳಿಗೆ ಹಾನಿ ಮಾಡುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ಇರಬೇಕಾಗಿದೆ.
ರಾಜಧಾನಿಯಲ್ಲಿ 14 ಡಿಗ್ರಿ ಸೆಲ್ಸಿಯಸ್ಗೆ ತಾಪಮಾನ ಇಳಿಕೆ!
ಇತ್ತ ರಾಜಧಾನಿ ಬೆಂಗಳೂರುದಲ್ಲೂ ತಾಪಮಾನ 14 ಡಿಗ್ರಿ ಸೆಲ್ಸಿಯಸ್ಗೆ ಇಳಿಕೆಯಾಗಿದ್ದು, ನಗರವಾಸಿಗಳು ಈ ಚಳಿಯನ್ನು ಸ್ಪಷ್ಟವಾಗಿ ಅನುಭವಿಸುತ್ತಿದ್ದಾರೆ. ಬೆಳಗ್ಗೆ ಹಾಗೂ ರಾತ್ರಿ ಸಮಯದಲ್ಲಿ ಚಳಿ ಹೆಚ್ಚಾಗಿದ್ದು, ಮುಂದಿನ ಇನ್ನೆರಡು ದಿನಗಳ ಕಾಲ ಇದೇ ವಾತಾವರಣ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಕರ್ನಾಟಕದಿಂದ ಬೀಸುತ್ತಿರುವ ತಣ್ಣನೆಯ ಗಾಳಿಯ ಪ್ರಭಾವ ಬೆಂಗಳೂರಿನ ಮೇಲೂ ಬೀರುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇನ್ನು ಕೆಲದಿನ ಮುಂದುವರೆಯುವ ಸಾಧ್ಯತೆ!
ಹವಾಮಾನ ತಜ್ಞರ ಪ್ರಕಾರ, ಈ ಚಳಿ ಏರಿಕೆಯು ಡಿಸೆಂಬರ್ ಅಂತ್ಯ ಮತ್ತು ಜನವರಿ ಆರಂಭದವರೆಗೆ ಕೆಲವೊಂದು ದಿನಗಳ ಕಾಲ ಮುಂದುವರೆಯುವ ಸಾಧ್ಯತೆ ಇದೆ. ವಿಶೇಷವಾಗಿ ಬೆಳಗ್ಗೆ ಮತ್ತು ರಾತ್ರಿ ಸಮಯದಲ್ಲಿ ವೃದ್ಧರು, ಮಕ್ಕಳು ಮತ್ತು ಅನಾರೋಗ್ಯದಿಂದ ಬಳಲುತ್ತಿರುವವರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಲಾಗಿದೆ. ಅಗತ್ಯವಿಲ್ಲದೆ ತಡರಾತ್ರಿ ಅಥವಾ ಮುಂಜಾನೆ ಹೊರಗೆ ಹೋಗುವುದನ್ನು ತಪ್ಪಿಸಲು ಸೂಚಿಸಲಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಒಂದಂಕಿಗೆ ಸಮೀಪಿಸಿದ ತಾಪಮಾನ ಮುಂದಿನ ಎರಡು ದಿನಗಳ ಕಾಲ ಇನ್ನಷ್ಟು ತೀವ್ರವಾಗುವ ಸಾಧ್ಯತೆ ಇದೆ. ಜನರು ಚಳಿ ಸಂಬಂಧಿತ ಆರೋಗ್ಯ ಸಮಸ್ಯೆಗಳಿಂದ ದೂರವಿರಲು ಹವಾಮಾನ ಇಲಾಖೆಯ ಮುನ್ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು, ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಅತ್ಯಗತ್ಯವಾಗಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.
ದಟ್ಟ ಮಂಜು, ತಣ್ಣನೆಯ ಗಾಳಿ; ರಾಜ್ಯದಲ್ಲಿ ಚಳಿ ತೀವ್ರತೆಗೆ ಹವಾಮಾನ ಇಲಾಖೆ ಎಚ್ಚರಿಕೆ!
