Ad image

ಬೆಳಗಾವಿ ಡಿಸಿ ವಿರುದ್ಧ ಸ್ಪೀಕರ್‌ಗೆ ದೂರು; ಮಹಾರಾಷ್ಟ್ರ ಸಂಸದನಿಂದ ಬೆದರಿಕೆಯ ರಾಜಕೀಯ?

Team SanjeMugilu
2 Min Read

ಬೆಳಗಾವಿ: ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದದ ನೆರಳಿನಲ್ಲಿ ಬೆಳಗಾವಿ ಮತ್ತೆ ರಾಜಕೀಯ ಸಂಘರ್ಷದ ಕೇಂದ್ರಬಿಂದುವಾಗುತ್ತಿದೆ. ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಕೈಗೊಂಡ ಕ್ರಮ ಇದೀಗ ಮಹಾರಾಷ್ಟ್ರದ ಸಂಸದರಿಂದಲೇ ಪ್ರಶ್ನೆಗೆ ಒಳಗಾಗಿದೆ. ಮಹಾರಾಷ್ಟ್ರದ ಲೋಕಸಭಾ ಸಂಸದ ದೈರ್ಯಶೀಲ ಮಾನೆ ಅವರು ಜಿಲ್ಲಾಧಿಕಾರಿ ವಿರುದ್ಧ ಲೋಕಸಭೆ ಸ್ಪೀಕರ್ ಓಂ ಬಿರ್ಲಾಗೆ ದೂರು ಸಲ್ಲಿಸುವ ಮೂಲಕ ಹೊಸ ವಿವಾದಕ್ಕೆ ಕಾರಣರಾಗಿದ್ದಾರೆ.
ಕಾನೂನು ಸುವ್ಯವಸ್ಥೆಗಾಗಿ ಸಂಸದನಿಗೆ ನಿರ್ಬಂಧ!
ನವೆಂಬರ್ 1ರಂದು ಬೆಳಗಾವಿಯಲ್ಲಿ ರಾಜ್ಯ ಸರ್ಕಾರ ಹಾಗೂ ಕನ್ನಡಪರ ಸಂಘಟನೆಗಳು ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲು ಸಿದ್ಧತೆ ನಡೆಸಿತ್ತು. ಅದೇ ದಿನ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಬೆಳಗಾವಿಯಲ್ಲಿ ‘ಕರಾಳ ದಿನ’ ಆಚರಿಸುವುದಾಗಿ ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಎಂಇಎಸ್ ಹಾಗೂ ಗಡಿ ಸಮಿತಿಯ ನಾಯಕ, ಮಹಾರಾಷ್ಟ್ರದ ಸಂಸದ ದೈರ್ಯಶೀಲ ಮಾನೆ ಅವರಿಗೆ ಬೆಳಗಾವಿ ಗಡಿ ಪ್ರವೇಶಕ್ಕೆ ನಿರ್ಬಂಧ ಹೇರಿದ್ದರು.
ದೂರು ನೀಡದ ಸಂಸದ!
ಜಿಲ್ಲಾಧಿಕಾರಿಯ ಈ ಕ್ರಮವನ್ನು ಪ್ರಶ್ನಿಸಿರುವ ದೈರ್ಯಶೀಲ ಮಾನೆ, ನಮ್ಮ ಹಕ್ಕಿಗೆ ಜಿಲ್ಲಾಧಿಕಾರಿ ಅಡ್ಡಿ ತಂದಿದ್ದಾರೆ ಎಂದು ಆರೋಪಿಸಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾಗೆ ದೂರು ನೀಡಿದ್ದಾರೆ. ಈ ಮೂಲಕ ಆಡಳಿತಾತ್ಮಕ ನಿರ್ಧಾರವನ್ನು ರಾಜಕೀಯ ಅಸ್ತ್ರವಾಗಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಮಾನೆ ಅವರು ಮಹಾರಾಷ್ಟ್ರ ಗಡಿ ಸಮಿತಿಯ ಅಧ್ಯಕ್ಷರಾಗಿದ್ದು, ಅವರ ಬೆಳಗಾವಿ ಪ್ರವೇಶದಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂಬ ಗುಪ್ತಚರ ಮಾಹಿತಿಯ ಹಿನ್ನೆಲೆ ಜಿಲ್ಲಾಧಿಕಾರಿ ಈ ನಿರ್ಧಾರ ಕೈಗೊಂಡಿದ್ದರು.
ದೈರ್ಯಶೀಲ ಪ್ರತಿಕೃತಿ ಸುಟ್ಟು ಆಕ್ರೋಶ!
ಈ ಬೆಳವಣಿಗೆಗೆ ಬೆಳಗಾವಿಯ ಕನ್ನಡಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಕರವೇ ವಿವಿಧ ಬಣಗಳು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದ್ದು, ದೈರ್ಯಶೀಲ ಮಾನೆ ಅವರ ಪ್ರತಿಕೃತಿಯನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿವೆ. ಕರ್ನಾಟಕದ ಭೂಭಾಗದ ಮೇಲೆ ಹಕ್ಕು ಹೇಳುವ ಯಾರಿಗೂ ಇಲ್ಲಿ ರಾಜಕೀಯ ಪ್ರಚೋದನೆಗೆ ಅವಕಾಶ ನೀಡಬಾರದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಶೆಟ್ಟರ್​ ಮಧ್ಯಸ್ಥಿಕೆ!
ಈ ನಡುವೆ ಬೆಳಗಾವಿ ಸಂಸದ ಹಾಗೂ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡುವ ಭರವಸೆ ನೀಡಿದ್ದಾರೆ. ಜಿಲ್ಲಾಧಿಕಾರಿ ವಿರುದ್ಧದ ಆರೋಪಗಳು, ಕಾನೂನು ಸುವ್ಯವಸ್ಥೆಯ ವಾಸ್ತವ ಸ್ಥಿತಿ ಮತ್ತು ಆಡಳಿತ ಕೈಗೊಂಡ ಕ್ರಮಗಳ ಕುರಿತು ಲೋಕಸಭೆ ಸ್ಪೀಕರ್ ಅವರಿಗೆ ಪತ್ರ ಬರೆಯುವುದಾಗಿ ಶೆಟ್ಟರ್ ಹೇಳಿದ್ದಾರೆ. ಇದು ರಾಜಕೀಯ ವಿಷಯವಲ್ಲ, ಇದು ರಾಜ್ಯದ ಶಾಂತಿ ಮತ್ತು ಭದ್ರತೆಗೆ ಸಂಬಂಧಿಸಿದ ಆಡಳಿತಾತ್ಮಕ ನಿರ್ಧಾರ ಎಂದೂ ಸಹ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ. ಒಟ್ಟಿನಲ್ಲಿ, ಕನ್ನಡ ರಾಜ್ಯೋತ್ಸವದ ದಿನವೇ ಕರಾಳ ದಿನ ಆಚರಣೆ ಮಾಡುವ ಎಂಇಎಸ್ ಘೋಷಣೆ, ಮಹಾರಾಷ್ಟ್ರ ಸಂಸದನ ಗಡಿ ಪ್ರವೇಶ ವಿವಾದ ಮತ್ತು ಜಿಲ್ಲಾಧಿಕಾರಿಯ ನಿರ್ಬಂಧ ಈ ಎಲ್ಲ ಅಂಶಗಳು ಬೆಳಗಾವಿಯಲ್ಲಿ ಮತ್ತೊಮ್ಮೆ ಉದ್ವಿಗ್ನ ವಾತಾವರಣ ಸೃಷ್ಟಿಸಿವೆ. ಮುಂದಿನ ದಿನಗಳಲ್ಲಿ ಸ್ಪೀಕರ್ ಮಟ್ಟದಲ್ಲಿ ಈ ವಿಚಾರ ಯಾವ ತಿರುವು ಪಡೆಯಲಿದೆ ಎಂಬುದರತ್ತ ರಾಜ್ಯದ ರಾಜಕೀಯ ವಲಯದ ಕಣ್ಣು ನೆಟ್ಟಿದೆ.

Share This Article