Ad image

ಟಿಪ್ಪರ್‌ ಡಿಕ್ಕಿ – ಒಂದೇ ಬೈಕಿನಲ್ಲಿದ್ದ ನಾಲ್ವರು ಬಲಿ

Team SanjeMugilu
1 Min Read

ಚಿಕ್ಕಬಳ್ಳಾಪುರ: ಟಿಪ್ಪರ್ ಹಾಗೂ ಬೈಕ್  ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಒಂದೇ ಗ್ರಾಮದ ನಾಲ್ವರು ಯುವಕರು ಮೃತಪಟ್ಟಿರುವಂತಹ ಹೃದಯವಿದ್ರಾವಕ ಘಟನೆ ಚಿಕ್ಕಬಳ್ಳಾಪುರ  ತಾಲೂಕಿನ ಅಜ್ಜವಾರ ಗೇಟ್ ಬಳಿ ನಡೆದಿದೆ.

ಅಜ್ಜವಾರ ಗ್ರಾಮದ ಅಣ್ಣ ತಮ್ಮಂದಿರಾದ ನರಸಿಂಹಮೂರ್ತಿ ಹಾಗೂ ನಂದೀಶ್ ಸೇರಿದಂತೆ ಅರುಣ್, ಮನೋಜ್ ಮೃತಪಟ್ಟಿದ್ದಾರೆ. ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ ಈ ನಾಲ್ವರು ಚಿಕ್ಕಬಳ್ಳಾಪುರ ನಗರದ ಚರ್ಚ್‌ಗಳಿಗೆ ಭೇಟಿ ನೀಡಿ ಮರಳಿ ಸ್ವಗ್ರಾಮದತ್ತ ಹೊರಟಿದ್ದರು.

ಮೃತ ನಾಲ್ವರು ಯುವಕರು ನರಸಿಂಹಮೂರ್ತಿಗೆ ಸೇರಿದ ಸಿಟಿ 100 ಬೈಕಿನಲ್ಲಿ ಹೊರಟಿದ್ದು ಇನ್ನೇನು ಅಜ್ಜವಾರ ಗ್ರಾಮಕ್ಕೆ ಹೈವೇಯಿಂದ ಬಲತಿರುವು ಪಡೆದುಕೊಳ್ಳಬೇಕಿತ್ತು. ಅಷ್ಟರಲ್ಲೇ ಯಮಸ್ವರೂಪಿಯಂತೆ ಟಿಪ್ಪರ್ ಲಾರಿ ಅಡ್ಡ ಬಂದಿದ್ದು ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ನಾಲ್ವರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದು ಬೈಕ್‌ ಅಪ್ಪಚ್ಚಿಯಾಗಿದೆ. ಇಬ್ಬರು ಮಕ್ಕಳನ್ನು ಕಳೆದುಕೊಂಡಿರುವ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ಮತ್ತೊಂದೆಡೆ ಮೃತ ನರಸಿಂಹಮೂರ್ತಿ ಕಳೆದ ಆರು ತಿಂಗಳ ಹಿಂದೆಯಷ್ಟೇ ಪ್ರೇಮ ವಿವಾಹವಾಗಿದ್ದರು.

ಅಪಘಾತದ ವಿಚಾರ ತಿಳಿದು ಸ್ಥಳಕ್ಕೆ ಎಸ್‌ಪಿ ಕುಶಲ್ ಚೌಕ್ಸಿ ಸೇರಿದಂತೆ ಚಿಕ್ಕಬಳ್ಳಾಪುರ ಪೊಲೀಸರು ಭೇಟಿ ಮಾಡಿ ಮೃತ ದೇಹಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಿದ್ದಾರೆ.

ಟಿಪ್ಪರ್ ಚಾಲಕ ಪರಾರಿಯಾಗಿದ್ದಾನೆ. ಸದ್ಯ ಟಿಪ್ಪರ್ ವಶಕ್ಕೆ ಪಡೆದಿರುವ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಒಂದೇ ಗ್ರಾಮದ ನಾಲ್ವರು ಯುವಕರ ಸಾವಿನಿಂದ ಇಡೀ ಗ್ರಾಮದಲ್ಲಿ ಸೂತಕದ ವಾತಾವರಣ ಮನೆ ಮಾಡಿದೆ.

Share This Article