Ad image

ಉಬರ್-ಓಲಾ-ರ್ಯಾಪಿಡೋಗೆ ಕೇಂದ್ರ ಸರ್ಕಾರದ ಹೊಸ ನಿಯಮ

Team SanjeMugilu
2 Min Read

ನವದೆಹಲಿ: ರೈಡ್-ಹೇಲಿಂಗ್ ವಲಯದಲ್ಲಿ ಮಹತ್ವದ ಬದಲಾವಣೆ ತಂದಿರುವ ಕೇಂದ್ರ ಸರ್ಕಾರ, ಮುಂಗಡ ಟಿಪ್ಪಿಂಗ್ ಪದ್ಧತಿಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಇನ್ನು ಮುಂದೆ ಉಬರ್ , ಓಲಾ , ರ್ಯಾಪಿಡೋ  ಸೇರಿದಂತೆ ಎಲ್ಲಾ ಸಂಗ್ರಾಹಕ ವೇದಿಕೆಗಳಲ್ಲಿ ರೈಡ್ ಬುಕ್ ಮಾಡುವಾಗ ಪ್ರಯಾಣಿಕರು ಟಿಪ್ ನೀಡುವ ಅಗತ್ಯ ಇರುವುದಿಲ್ಲ.

ಡಿಸೆಂಬರ್ 15ರಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮೋಟಾರು ವಾಹನ ಸಂಗ್ರಾಹಕ ಮಾರ್ಗಸೂಚಿಗಳು–2025ಕ್ಕೆ ತಿದ್ದುಪಡಿ ಪ್ರಕಟಿಸಿದೆ. ಈ ತಿದ್ದುಪಡಿ ಪ್ರಕಾರ, ಸ್ವಯಂಪ್ರೇರಿತ ಟಿಪ್ಪಿಂಗ್ ಆಯ್ಕೆಯಿದ್ದರೂ ಅದು ಪ್ರಯಾಣ ಪೂರ್ಣಗೊಂಡ ಬಳಿಕ ಮಾತ್ರ ಗೋಚರಿಸಬೇಕು. ಬುಕಿಂಗ್ ಅಥವಾ ಸರ್ಚ್ ಹಂತದಲ್ಲಿ ಟಿಪ್ ಆಯ್ಕೆಯನ್ನು ತೋರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪ್ರಯಾಣಿಕರು ನೀಡುವ ಟಿಪ್ ಸಂಪೂರ್ಣವಾಗಿ ಚಾಲಕನಿಗೆ ಸಿಗಬೇಕು; ಯಾವುದೇ ಪ್ಲಾಟ್‌ಫಾರ್ಮ್ ಅದರಿಂದ ಕಡಿತ ಮಾಡಿಕೊಳ್ಳುವಂತಿಲ್ಲ.

ಈ ನಿರ್ಧಾರಕ್ಕೆ ಗ್ರಾಹಕರ ದೂರುಗಳೇ ಪ್ರಮುಖ ಕಾರಣ. ಮೇ 2025ರಲ್ಲಿ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವು ಮುಂಗಡ ಟಿಪ್ಪಿಂಗ್ ಅನ್ನು “ಅನ್ಯಾಯವಾದ ವ್ಯಾಪಾರ ಪದ್ಧತಿ” ಎಂದು ಘೋಷಿಸಿತ್ತು. ಟಿಪ್ ಆಯ್ಕೆಯಿಂದ ರೈಡ್ ಬುಕ್ಕಿಂಗ್ ಬಿಡ್ಡಿಂಗ್ ಪ್ರಕ್ರಿಯೆಯಾಗಿ ಮಾರ್ಪಟ್ಟಿದ್ದು, ಹೆಚ್ಚು ಪಾವತಿಸುವವರಿಗೆ ಮಾತ್ರ ಕ್ಯಾಬ್ ಸಿಗುತ್ತಿದೆ ಎಂದು ಗ್ರಾಹಕರು ಆರೋಪಿಸಿದ್ದರು.

ಗ್ರಾಹಕ ವ್ಯವಹಾರಗಳ ತಜ್ಞ ಬಿಜನ್ ಮಿಶ್ರಾ, “ಟಿಪ್ ಕೃತಜ್ಞತೆಯ ಸಂಕೇತ, ಅದು ಕಡ್ಡಾಯವಾಗಬಾರದು. ಸೇವೆಗಿಂತ ಮುನ್ನ ಟಿಪ್ ಕೇಳುವುದು ಬಳಕೆದಾರರ ಮೇಲೆ ಪ್ಲಾಟ್‌ಫಾರ್ಮ್ ಹೊಣೆಗಾರಿಕೆಯನ್ನು ತಳ್ಳುವಂತಾಗಿದೆ” ಎಂದು ಹೇಳಿದ್ದಾರೆ.

ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್ ಅಕ್ಷಯ್ ಮೆಹ್ರಾ, “ಪೀಕ್ ಅವರ್‌ನಲ್ಲಿ 50 ರೂ. ಟಿಪ್ ಸೇರಿಸಿದಾಗ ಮಾತ್ರ ರೈಡ್ ಸಿಕ್ಕಿತು” ಎಂದು ಆರೋಪಿಸಿದ್ದಾರೆ. ಮುಂಬೈ ಸರ್ಕಾರಿ ಉದ್ಯೋಗಿ ಜಿತೇಂದ್ರ, “ಹೆಚ್ಚು ಹಣ ಕೊಟ್ಟರೂ ಉತ್ತಮ ಸೇವೆ ಸಿಗುವುದಕ್ಕೆ ಗ್ಯಾರಂಟಿ ಇಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇತ್ತ ಚಾಲಕರು ಟಿಪ್ಸ್ ಪಡೆಯುವುದನ್ನು ನಿರಾಕರಿಸಿದ್ದು, ಪ್ಲಾಟ್‌ಫಾರ್ಮ್‌ಗಳ ಮೇಲೆಯೇ ಹೊಣೆ ಹಾಕಿದ್ದಾರೆ. ಓಲಾ-ರ್ಯಾಪಿಡೋ ಚಾಲಕ ಲಲಿತ್ ಕುಮಾರ್, “ನಮಗೆ 70% ದರ ಮಾತ್ರ ಸಿಗುತ್ತದೆ. ಟಿಪ್ ಸೇರಿಸಿರುವುದೇ ನಮಗೆ ಗೊತ್ತಾಗುವುದಿಲ್ಲ” ಎಂದು ತಿಳಿಸಿದ್ದಾರೆ.

ಡಿಜಿಟಲ್ ಬ್ಲ್ಯಾಕ್‌ಮೇಲಿಂಗ್ ಎಂದು ಈ ಪದ್ಧತಿಯನ್ನು ಕರೆದಿರುವ ದೆಹಲಿ ಸಾರಿಗೆ ಇಲಾಖೆಯ ಮಾಜಿ ಉಪಾಧ್ಯಕ್ಷ ಅನಿಲ್ ಚಿಕಾರ, “ಇದು ಗ್ರಾಹಕ ಸಂರಕ್ಷಣಾ ಕಾಯ್ದೆಯ ಉಲ್ಲಂಘನೆ” ಎಂದು ಸ್ಪಷ್ಟಪಡಿಸಿದ್ದಾರೆ.

Share This Article