ಬೆಂಗಳೂರು : ಬೆಂಗಳೂರಿನ ಜೆ.ಜೆ.ನಗರದಲ್ಲಿ ಓಂ ಶಕ್ತಿ ಮಾಲಾಧಾರಿಗಳ ಮೇಲೆ ಅನ್ಯಕೋಮಿನವರು ಕಲ್ಲು ತೂರಾಟ ನಡೆಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ವಿ.ಎಸ್.ಗಾರ್ಡನ್ನ ಓಂ ಶಕ್ತಿ ದೇಗುಲ ಬಳಿ ಈ ಘಟನೆ ನಡೆದಿದ್ದು, ಕಿಡಿಗೇಡಿ ಕೃತ್ಯದಿಂದ ಓಂ ಶಕ್ತಿ ಮಾಲೆ ಧರಿಸಿದ್ದ ಪುಟ್ಟ ಮಗು ಕೂಡ ಕಲ್ಲೇಟಿನಿಂದ ಗಾಯಗೊಂಡಿದೆ. ಈ ಸಂಬಂಧ ಜೆಜೆಆರ್ ನಗರ ಠಾಣೆಯಲ್ಲಿ FIR ದಾಖಲಾಗಿದೆ. ತನಿಖೆ ಕೈಗೆತ್ತಿಕೊಂಡ ಪೊಲೀಸರು ಮೂವರನ್ನ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪ್ರಾಪ್ತರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಮೂವರು ಕೂಡ ಕೃತ್ಯದಲ್ಲಿ ಭಾಗಿಯಾಗಿದ್ದರು ಎನ್ನಲಾಗ್ತಿದೆ.
ಕಾನೂನು ಕ್ರಮಕ್ಕೆ ಸಿದ್ಧತೆ
ಮೂವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಇದೇ ವೇಳೆ ಜೆಜೆ ನಗರ ಪೊಲೀಸ್ ಠಾಣೆಗೆ ಡಿಸಿಪಿ ಯತೀಶ್ ಭೇಟಿ ನೀಡಿದ್ದಾರೆ. ಇಂದು ಠಾಣೆಯ ಮುಂದೆ ಹಿಂದೂ ಸಂಘಟನೆಯವರು ಜಮಾಯಿಸುವ ಸಾಧ್ಯತೆ ಇದ್ದು, ಹೀಗಾಗಿ ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ.
FIR ದಾಖಲು, ದೂರಿನಲ್ಲಿ ಏನಿದೆ?
ನಿನ್ನೆ (ಜನವರಿ 04) 8-9 ಗಂಟೆ ಸುಮಾರಿಗೆ ವಿ.ಎಸ್ ಗಾರ್ಡನ್ ಬಳಿಯ ಓಂ ಶಕ್ತಿ ದೇವಸ್ಥಾನದ ಬಳಿ ಕಲ್ಲು ತೂರಾಟ ನಡೆದಿದೆ. ಮೂರು-ನಾಲ್ಕು ಮುಸ್ಲಿಂ ಯುವಕರು ಕಲ್ಲು ತೂರಾಟ ಓ ಶಕ್ತಿ ಮಾಲಾಧಾರಿಗಳ ಮೆರವಣಿಗೆಯನ್ನೇ ಗುರಿಯಾಗಿಸಿಕೊಂಡು ಕಲ್ಲು ತೂರಾಟ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಂದು ಬೆಂಕಿ ಹಚ್ಚಿದ್ರು, ಇಂದು ಕಲ್ಲು ತೂರಿದ್ರು
ಅನ್ಯಕೋಮಿನವರು ನಡೆಸಿದ ಈ ದುಷ್ಕೃತ್ಯದಿಂದ ಓಂ ಮಾಲೆ ಧರಿಸಿದ್ದ ಬಾಲಕಿಯ ತಲೆಗೆ ಗಂಭೀರ ಗಾಯವಾಗಿದೆ. ಈ ರೀತಿಯ ಘಟನೆ ಹಿಂದಿನಿಂದಲೂ ನಡೆಯುತ್ತಿದ್ದು, ಹಿಂದೊಮ್ಮೆ ಮೆರವಣಿಗೆ ವೇಳೆ ಮೂರ್ನಾಲ್ಕು ಬಾರಿ ಬೆಂಕಿ ಹಾಕಿದ್ರು. ಇದು ಹಿಂದೂಗಳ ಭಾವನೆಗಳಿಗೆ ಧಕ್ಕೆ ಹಾಗೂ ದಲಿತರ ಮೇಲಾಗಿರುವ ದೌರ್ಜನ್ಯ ಎಂದು ದೂರು ನೀಡಲಾಗಿದೆ.
ಸೂಕ್ತ ಕ್ರಮಕ್ಕೆ ಆಗ್ರಹಿಸಿ ದೂರು
ಕಿಡಿಗೇಡಿಗಳ ವಿರುದ್ಧ ವಿರುದ್ದ ಸೂಕ್ತ ಕ್ರಮಕ್ಕಾಗಿ ಕೈಗೊಳ್ಳಬೇಕು ಎಂದು ಓಂ ಶಕ್ತಿ ಮಾಲಾಧಾರಿಗಳ ಅಧ್ಯಕ್ಷ ಶಶಿಕುಮಾರ್ ದೂರು ಮೂಲಕ ಆಗ್ರಹಿಸಿದ್ದಾರೆ. ದೂರಿನ ಮೇರೆಗೆ FIR ಕೂಡ ದಾಖಲಾಗಿದೆ.
ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ; ಮೂವರು ಅಪ್ರಾಪ್ತರು ಪೊಲೀಸ್ ವಶಕ್ಕೆ
