Ad image

ಬಿಡಿಎಗೆ ವ್ಯಾಪಾರ-ಬ್ರೋಕರೇಜ್ ಕಳಂಕ ಬೇಡ:DCM ಡಿ.ಕೆ.ಶಿವಕುಮಾರ್

Team SanjeMugilu
1 Min Read

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) 50 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಸಂಸ್ಥೆಯ ಘನತೆ ಮತ್ತು ಜನ ವಿಶ್ವಾಸವನ್ನು ಮರುಸ್ಥಾಪಿಸುವ ಅಗತ್ಯವಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು. ಬಿಡಿಎ ಆಡಳಿತ ಸುಧಾರಣೆ ಹಾಗೂ ಸಾರ್ವಜನಿಕ ಅಹವಾಲು ನಿರ್ವಹಣೆ ಕುರಿತು ನೌಕರರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

“ಬಿಡಿಎ ಎಂದರೆ ವ್ಯಾಪಾರ, ಬ್ರೋಕರೇಜ್ ಎಂಬ ಕಳಂಕ ಹೋಗಬೇಕು. ಸಂಸ್ಥೆಯೊಳಗಿನ ಸಂತೆ, ದಂಧೆಗಳ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇದೆ. ಕೇವಲ 10% ಜನರಿಂದ ಇಡೀ ಸಂಸ್ಥೆಗೆ ಕೆಟ್ಟ ಹೆಸರು ಬರುತ್ತಿದೆ. ಇದನ್ನು ಬದಲಾಯಿಸಲೇಬೇಕು,” ಎಂದು ಡಿಕೆಶಿ ಎಚ್ಚರಿಕೆ ನೀಡಿದರು.

ಬಿಡಿಎಯಲ್ಲಿನ ಎಲ್ಲಾ ದಾಖಲೆಗಳನ್ನು ಡಿಜಿಟಲ್ ಸ್ಕ್ಯಾನ್ ಮಾಡುವ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ ಅವರು, “ಕೆಲವರಿಗೆ ಇದು ಇಷ್ಟವಾಗದಿರಬಹುದು. ಆದರೆ ಪಾರದರ್ಶಕತೆ ಇಲ್ಲದೆ ಸಂಸ್ಥೆಗೆ ಗೌರವ ಸಿಗುವುದಿಲ್ಲ,” ಎಂದರು.

AI, ಡ್ರೋನ್ ತಂತ್ರಜ್ಞಾನಗಳ ಬಳಕೆಯ ಅಗತ್ಯವಿದೆ ಎಂದು ಹೇಳಿದ ಡಿಸಿಎಂ, ಭೂ ಮಾಪನಕ್ಕೆ ಈಗ ಟೇಪ್ ಅಗತ್ಯವಿಲ್ಲ, ಡ್ರೋನ್ ಮೂಲಕವೇ ಅಳತೆ ಸಾಧ್ಯ ಎಂದು ತಿಳಿಸಿದರು. ತಪ್ಪು ಮಾಡಿದರೆ ಕಾನೂನು ಕ್ರಮ ತಪ್ಪುವುದಿಲ್ಲ ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.

ಬೆಂಗಳೂರು ಜಾಗತಿಕ ನಗರವಾಗುತ್ತಿರುವ ಹಿನ್ನೆಲೆಯಲ್ಲಿ ಯೋಜಿತ ಅಭಿವೃದ್ಧಿ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟ ಅವರು, ಟೌನ್ ಪ್ಲಾನಿಂಗ್‌ಗೆ ಹೊಸ ಕಾಲೇಜು ಆರಂಭಿಸುವ ಚಿಂತನೆ ಇದೆ ಎಂದರು. ಪೆರಿಫೆರಲ್ ರಿಂಗ್ ರಸ್ತೆ ಯೋಜನೆಯನ್ನು ಬೆಂಗಳೂರು ಬಿಸ್ನೆಸ್ ಕಾರಿಡಾರ್ ಆಗಿ ರೂಪಿಸಲಾಗುವುದು ಎಂದು ತಿಳಿಸಿದರು.

“ಟೀಕೆಗಳು ಸಾಯುತ್ತವೆ, ನಮ್ಮ ಕೆಲಸಗಳು ಉಳಿಯುತ್ತವೆ. ಬೆಂಗಳೂರನ್ನು ಮುಂದಿನ 50 ವರ್ಷಗಳಿಗೆ ಸಿದ್ಧಗೊಳಿಸುವ ಹೊಣೆ ನಮ್ಮದು,” ಎಂದು ಡಿಕೆಶಿ ಹೇಳಿದರು.

Share This Article