Ad image

15 ದಿನ ಆಕ್ಷೇಪಣೆ, ಜನವರಿ ಅಂತ್ಯಕ್ಕೆ ಫೈನಲ್ ಲಿಸ್ಟ್! ಯಾವ ವರ್ಗಕ್ಕೆ ಎಷ್ಟು ಮೀಸಲು?

Team SanjeMugilu
2 Min Read

ಬೆಂಗಳೂರು: ಬಹು ದಿನಗಳಿಂದ ಕಾಯುತ್ತಿದ್ದ ಜಿಬಿಎ ಚುನಾವಣೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಜಿಬಿಎ ವ್ಯಾಪ್ತಿಯ 369 ವಾರ್ಡ್‌ಗಳ ಮೀಸಲಾತಿ ಕರಡು ಪಟ್ಟಿಯನ್ನು ನಗರಾಭಿವೃದ್ಧಿ ಇಲಾಖೆ ಅಧಿಕೃತವಾಗಿ ಪ್ರಕಟಿಸಿದೆ. ಈ ಮೂಲಕ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದ ಪ್ರಕ್ರಿಯೆ ಮತ್ತೊಂದು ಹಂತ ತಲುಪಿದ್ದು, ಚುನಾವಣೆ ನಡೆಯುವ ನಿರೀಕ್ಷೆಗೆ ಹೊಸ ವೇಗ ಸಿಕ್ಕಂತಾಗಿದೆ. ಈ ಮೀಸಲಾತಿ ಕರಡು ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಇರುವ ಕಾಲಾವಕಾಶ, ಈ ನಿಟ್ಟಿನಲ್ಲಿ ಎಷ್ಟು ವಾರ್ಡ್​ಗಳಿಗೆ ಮೀಸಲಾತಿ ನಿಗದಿಪಡಿಸಲಾಗಿದೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಆಕ್ಷೇಪಣೆ ಸಲ್ಲಿಸಲು ಕೊಟ್ಟಿರುವ ಕಾಲಾವಕಾಶ!
ಈ ಕರಡು ಮೀಸಲಾತಿ ಪಟ್ಟಿಗೆ ಸಾರ್ವಜನಿಕ ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶವನ್ನು ಜಿಬಿಎ ನೀಡಿದೆ. ಆಸಕ್ತ ನಾಗರಿಕರು, ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ತಮ್ಮ ಆಕ್ಷೇಪಣೆಗಳನ್ನು ಜನವರಿ 21ರ ಸಂಜೆ 5.30 ಗಂಟೆಯೊಳಗೆ* ಸಲ್ಲಿಸಬಹುದಾಗಿದೆ. ಆಕ್ಷೇಪಣೆಗಳ ಪರಿಶೀಲನೆಯ ಬಳಿಕ *ಜನವರಿ ಕೊನೆಯ ವೇಳೆಗೆ ಅಂತಿಮ ಮೀಸಲಾತಿ ಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.
ಇದ್ದ ಅಡೆತಡೆ ನಿವಾರಣೆ ಬಹುತೇಕ ನಿವಾರಣೆ!
ಈಗಾಗಲೇ ಜಿಬಿಎ ವ್ಯಾಪ್ತಿಯಲ್ಲಿ ವಾರ್ಡ್ ವಿಂಗಡಣೆ, ಗಡಿ ಗುರುತಿಸುವಿಕೆ ಹಾಗೂ ಭೌಗೋಳಿಕ ಪುನರ್ ರಚನೆ ಕಾರ್ಯಗಳು ಪೂರ್ಣಗೊಂಡಿದ್ದವು. ಮೀಸಲಾತಿ ಪಟ್ಟಿ ಪ್ರಕಟಗೊಳ್ಳುವುದು ಮಾತ್ರ ಬಾಕಿ ಇತ್ತು. ಇದೀಗ ಆ ಹಂತವೂ ಮುಗಿದಿರುವುದರಿಂದ ಚುನಾವಣೆ ಘೋಷಣೆಗೆ ಅಗತ್ಯವಿರುವ ಪ್ರಮುಖ ಅಡೆತಡೆ ನಿವಾರಣೆಯಾದಂತಾಗಿದೆ.
ಎಷ್ಟು ವಾರ್ಡ್​ಗಳಿಗೆ ಮೀಸಲಾತಿ ನಿಗದಿ!
ಪ್ರಕಟಿಸಿದ ಕರಡು ಪಟ್ಟಿಯ ಪ್ರಕಾರ, *ಒಟ್ಟು 369 ವಾರ್ಡ್‌ಗಳಿಗೆ ಮೀಸಲಾತಿ ನಿಗದಿಪಡಿಸಲಾಗಿದೆ. ಮಹಿಳಾ ಮೀಸಲಾತಿ, ಎಸ್‌ಸಿ/ಎಸ್‌ಟಿ, ಹಿಂದುಳಿದ ವರ್ಗಗಳು ಹಾಗೂ ಸಾಮಾನ್ಯ ವರ್ಗಗಳ ಅನುಪಾತದ ಆಧಾರದಲ್ಲಿ ಈ ಮೀಸಲಾತಿ ಮಾಡಲಾಗಿದೆ. ಈ ಪ್ರಕ್ರಿಯೆ ಸಂವಿಧಾನಾತ್ಮಕ ಮಾರ್ಗಸೂಚಿಗಳು ಮತ್ತು ಸರ್ಕಾರದ ನಿಯಮಾವಳಿಗಳನ್ನು ಅನುಸರಿಸಿ ರೂಪಿಸಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ಸ್ಪಷ್ಟಪಡಿಸಿದೆ.
5 ಮಹಾನಗರ ಪಾಲಿಕೆಗಳಿಗೆ ಪ್ರತ್ಯೇಕ ಮೀಸಲಾತಿ!
ಜಿಬಿಎ ವ್ಯಾಪ್ತಿಗೆ ಒಳಪಡುವ ಐದು ನಗರ ಪಾಲಿಕೆಗಳಿಗೂ ಪ್ರತ್ಯೇಕವಾಗಿ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಲಾಗಿದೆ. ಇದರಿಂದಾಗಿ ನಗರ ರಾಜಕಾರಣದಲ್ಲಿ ಚಟುವಟಿಕೆ ಹೆಚ್ಚಾಗಿದ್ದು, ರಾಜಕೀಯ ಪಕ್ಷಗಳು ಹಾಗೂ ಆಕಾಂಕ್ಷಿಗಳು ಈಗಿನಿಂದಲೇ ತಮ್ಮ ತಂತ್ರಗಳನ್ನು ರೂಪಿಸಿಕೊಳ್ಳಲು ಆರಂಭಿಸಿದ್ದಾರೆ. ಹಲವು ವಾರ್ಡ್‌ಗಳಲ್ಲಿ ಮೀಸಲಾತಿ ಬದಲಾಗಿರುವುದರಿಂದ, ಈಗಿನ ಸದಸ್ಯರು ಮತ್ತು ಹೊಸ ಮುಖಗಳ ನಡುವೆ ಸ್ಪರ್ಧೆ ತೀವ್ರವಾಗುವ ಸಾಧ್ಯತೆ ಇದೆ.

Share This Article