Ad image

ಜೈ ಬಾಂಗ್ಲಾ ಎಂದ ಮಹಿಳೆ ಅಂದರ್, ಅಷ್ಟಕ್ಕೂ ಆಕೆ ಈ ಘೋಷಣೆ ಕೂಗಿದ್ದೇಕೆ ಗೊತ್ತಾ?

Team SanjeMugilu
2 Min Read

ಬೆಂಗಳೂರು: ದೇಶ  ವಿರೋಧಿ ಘೋಷಣೆ ಕೂಗಿದ ಆರೋಪದ ಹಿನ್ನೆಲೆಯಲ್ಲಿ ಹೆಬ್ಬಗೋಡಿ ಪೊಲೀಸರು ಮಹಿಳೆಯೊಬ್ಬರನ್ನು ಬಂಧಿಸಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ  ಉಪವಿಭಾಗದಲ್ಲಿ ಸಂಚಲನ ಮೂಡಿಸಿದೆ. ಬಂಧಿತ ಮಹಿಳೆಯನ್ನು ಸರ್ಬಾನು ಖಾತುನ್  (25) ಎಂದು ಗುರುತಿಸಲಾಗಿದ್ದು, ಅವರು ಪಶ್ಚಿಮ ಬಂಗಾಳ ಮೂಲದ ಮುಸ್ಲಿಂ ಮಹಿಳೆ  ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರು ಅಕ್ರಮ ಬಾಂಗ್ಲಾ ವಲಸಿಗರ ಬಂಧನ!
ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹುಲಿಮಂಗಲದ ಪೋಡು ಬಳಿಯ ಶೇಡ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಅಕ್ರಮ ವಲಸಿಗರ ವಿಚಾರವಾಗಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಮೂರು ದಿನಗಳ ಹಿಂದೆ, ಕೆಲವು ಹಿಂದೂ ಕಾರ್ಯಕರ್ತರು ಈ ಶೇಡ್‌ಗಳ ಮೇಲೆ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಜಹಿದುಲ್ ಇಸ್ಲಾಂ (35) ಮತ್ತು ಫಿರ್ದೋಸ್ (32) ಎಂಬ ಇಬ್ಬರು ಅಕ್ರಮ ಬಾಂಗ್ಲಾ ವಲಸಿಗರನ್ನು ವಶಕ್ಕೆ ಪಡೆದಿದ್ದರು.
ಮಹಿಳೆ ಹೇಳಿಕೆ ವೈರಲ್!
ಬಂಧಿತ ಮಹಿಳೆ ಸರ್ಬಾನು ಖಾತುನ್, ಆ ದಾಳಿಗೆ ಒಳಗಾದ ಶೇಡ್‌ಗಳ ಪಕ್ಕದ ಮತ್ತೊಂದು ಶೇಡ್‌ನಲ್ಲಿ ವಾಸವಿದ್ದವರು ಎಂದು ತಿಳಿದುಬಂದಿದೆ. ಪೊಲೀಸರು ಮತ್ತು ಸ್ಥಳೀಯ ಆಡಳಿತ ಶೇಡ್‌ಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದ ವೇಳೆ, ಸರ್ಬಾನು ಖಾತುನ್ ಅಲ್ಲಿಂದ ನಡೆದುಕೊಂಡು ಬಂದಿದ್ದಾರೆ ಎನ್ನಲಾಗಿದೆ. ಈ ವೇಳೆ ಸ್ಥಳದಲ್ಲಿದ್ದ ಕೆಲವು ಹಿಂದೂ ಕಾರ್ಯಕರ್ತರು ‘ಭಾರತ್ ಮಾತಾಕಿ ಜೈ’ ಎಂದು ಘೋಷಣೆ ಕೂಗಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮಹಿಳೆ, ಉದ್ದಟತನದಿಂದ ‘ಜೈ ಬಾಂಗ್ಲಾ’ ಎಂದು ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ದೃಶ್ಯವನ್ನು ಸ್ಥಳದಲ್ಲಿದ್ದವರು ಮೊಬೈಲ್‌ನಲ್ಲಿ ದಾಖಲಿಸಿಕೊಂಡಿದ್ದು, ಆ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ವಿಚಾರಣೆ ನಡೆಸಿದ ಪೊಲೀಸರು!
ವಿಡಿಯೋ ಆಧಾರವಾಗಿ ಕಾರ್ಯಾಚರಣೆ ನಡೆಸಿದ ಹೆಬ್ಬಗೋಡಿ ಪೊಲೀಸರು, ಮಹಿಳೆಯ ವಿರುದ್ಧ ದೇಶ ವಿರೋಧಿ ಘೋಷಣೆ ಕೂಗಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಂತರ ಸರ್ಬಾನು ಖಾತುನ್ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಈ ಪ್ರಕರಣವು ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ಸಾಧ್ಯತೆ ಇರುವುದರಿಂದ ಗಂಭೀರವಾಗಿ ಪರಿಗಣಿಸಲಾಗಿದೆ. ಘಟನೆಗೆ ಸಂಬಂಧಿಸಿದ ಎಲ್ಲ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ. ವಿಡಿಯೋ ದೃಶ್ಯಗಳು, ಸಾಕ್ಷಿಗಳ ಹೇಳಿಕೆಗಳು ಮತ್ತು ಮಹಿಳೆಯ ಹಿನ್ನೆಲೆಯ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೆಚ್ಚಿದ ತಾತ್ಕಾಲಿಕ ಭದ್ರತೆ!
ಈ ಘಟನೆಯಿಂದಾಗಿ ಆ ಪ್ರದೇಶದಲ್ಲಿ ತಾತ್ಕಾಲಿಕವಾಗಿ ಭದ್ರತೆ ಹೆಚ್ಚಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮತ್ತು ಚರ್ಚೆಗಳು ನಡೆಯುತ್ತಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಈ ಘಟನೆ ಕುರಿತಂತೆ ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಪೊಲೀಸರು ಸಾರ್ವಜನಿಕರಲ್ಲಿ ಶಾಂತಿ ಕಾಪಾಡಿಕೊಳ್ಳುವಂತೆ ಮನವಿ ಮಾಡಿದ್ದು, ಯಾವುದೇ ಪ್ರಚೋದನಕಾರಿ ಘೋಷಣೆಗಳು ಅಥವಾ ಕಾನೂನು ಕೈಗೆತ್ತಿಕೊಳ್ಳುವ ಪ್ರಯತ್ನಗಳು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಪ್ರಸ್ತುತ ಸರ್ಬಾನು ಖಾತುನ್ ಪೊಲೀಸ್ ವಶದಲ್ಲಿದ್ದು, ಮುಂದಿನ ತನಿಖೆ ಮತ್ತು ಕಾನೂನು ಕ್ರಮಗಳ ಪ್ರಕಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Share This Article