Ad image

ಕಬ್ಬನ್ ಪಾರ್ಕ್​ ಬಾಲಭವನದಲ್ಲಿ ಆರಂಭವಾಗಲಿದೆ ಸ್ಕೇಟಿಂಗ್ ಬೋರ್ಡ್ ಪಾರ್ಕ್

Team SanjeMugilu
1 Min Read

ಬೆಂಗಳೂರು: ನೈಸರ್ಗಿಕ ಸೌಂದರ್ಯದಿಂದ ಮನಸೂರೆಗೊಳ್ಳುವ ಕಬ್ಬನ್ ಪಾರ್ಕ್ ಆವರಣದಲ್ಲಿರುವ ಬಾಲಭವನವು ಚಿಣ್ಣರು ಹಾಗೂ ಯುವಕರಿಗೆ ಅಚ್ಚುಮೆಚ್ಚಿನ ತಾಣವಾಗಿದೆ. ವಾರಾಂತ್ಯಗಳಲ್ಲಿ ಸಾವಿರಾರು ಜನರು ಕುಟುಂಬ ಸಮೇತರಾಗಿ ಭೇಟಿ ನೀಡುವ ಈ ಸ್ಥಳದಲ್ಲಿ ಈಗ ಮತ್ತೊಂದು ಪ್ರಮುಖ ಆಕರ್ಷಣೆ ಸೇರ್ಪಡೆಯಾಗಲು ಸಿದ್ಧವಾಗಿದೆ. ಬಾಲಭವನದಲ್ಲಿ ಅತಿ ಶೀಘ್ರದಲ್ಲೇ ಆಧುನಿಕ ಸ್ಕೇಟಿಂಗ್ ಬೋರ್ಡ್ ಪಾರ್ಕ್ ನಿರ್ಮಾಣವಾಗಲಿದೆ.

ಒಂದೂವರೆ ಕೋಟಿ ವೆಚ್ಚದ ಪ್ರಾಜೆಕ್ಟ್
ಬಾಲಭವನ ಸೊಸೈಟಿ ಹಾಗೂ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದೊಂದಿಗೆ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಸುಮಾರು 1.5 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಕೇಟಿಂಗ್ ಬೋರ್ಡ್ ಪಾರ್ಕ್ ನಿರ್ಮಾಣವಾಗಲಿದೆ. ವಿಶ್ವೇಶ್ವರಯ್ಯ ಮ್ಯೂಸಿಯಂ ಹಿಂಭಾಗದಲ್ಲಿರುವ ಬೋಟಿಂಗ್ ಪ್ರದೇಶದ ಬಳಿ, ಬಾಲಭವನದ ಅರ್ಧ ಎಕರೆ ಜಾಗದಲ್ಲಿ ಈ ಪಾರ್ಕ್ ರೂಪುಗೊಳ್ಳಲಿದೆ.

ಹೈಬ್ರಿಡ್ ಮಾದರಿಯಲ್ಲಿ ನಿರ್ಮಾಣವಾಗುವ ಈ ಸ್ಕೇಟಿಂಗ್ ಪಾರ್ಕ್‌ನಲ್ಲಿ ಒಂದೇ ಸಮಯದಲ್ಲಿ ಸುಮಾರು 40 ಮಂದಿ ಸ್ಕೇಟಿಂಗ್ ಬೋರ್ಡ್ ಬಳಸುವ ಅವಕಾಶವಿರಲಿದೆ. ಒಲಿಂಪಿಕ್ಸ್ ಮಟ್ಟದ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಈ ಪಾರ್ಕ್ ವಿನ್ಯಾಸಗೊಳ್ಳುತ್ತಿದ್ದು, ಐದು ವರ್ಷ ಮೇಲ್ಪಟ್ಟ ಮಕ್ಕಳಲ್ಲಿ ಕ್ರೀಡಾ ಪ್ರತಿಭೆಯನ್ನು ಬೆಳೆಸುವ ಗುರಿ ಹೊಂದಲಾಗಿದೆ.

ಮೇ ನಂತರ ಪಾರ್ಕ್​ ಲೋಕಾರ್ಪಣೆ
ಜನವರಿಯ ಅಂತ್ಯದೊಳಗೆ ಕಾಮಗಾರಿ ಆರಂಭವಾಗಲಿದ್ದು, ಮೇ ತಿಂಗಳ ವೇಳೆಗೆ ಸ್ಕೇಟಿಂಗ್ ಪಾರ್ಕ್‌ ಲೋಕಾರ್ಪಣೆಗೊಳ್ಳುವ ಸಾಧ್ಯತೆಯಿದೆ. ಬಾಲಭವನದಲ್ಲಿ ಮತ್ತೊಂದು ಕ್ರೀಡಾ ಚಟುವಟಿಕೆ ಆರಂಭವಾಗುತ್ತಿರುವುದು ಪೋಷಕರು ಹಾಗೂ ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ.

Share This Article