Ad image

ರಾಜ್ಯಪಾಲರ ವಿವಾದದ ನಡುವೆ ಅಬಕಾರಿ ಹಗರಣದ ಆರೋಪ; ತಿಮ್ಮಾಪುರ ರಾಜೀನಾಮೆಗೆ ಒತ್ತಾಯ

Team SanjeMugilu
2 Min Read
ಬೆಂಗಳೂರು: ವಿಧಾನಸಭೆಯಲ್ಲಿ ರಾಜ್ಯಪಾಲರ  ಭಾಷಣದ  ಮೇಲಿನ ಚರ್ಚೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರ ನಡೆ ವಿರುದ್ಧ ಮತ್ತೊಮ್ಮೆ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದರು. ವಿಪಕ್ಷ ನಾಯಕ ಆರ್. ಅಶೋಕ್  ಮಾತನಾಡುವ ಸಂದರ್ಭದಲ್ಲಿ ಎದ್ದು ನಿಂತ ಸಿಎಂ, ರಾಜ್ಯಪಾಲರು ನಮ್ಮವರು–ನಿಮ್ಮವರು ಎನ್ನುವ ಪ್ರಶ್ನೆಯೇ ಇಲ್ಲ. ಅವರು ರಾಜ್ಯದ ರಾಜ್ಯಪಾಲರು ಅಷ್ಟೇ” ಎಂದು ಸ್ಪಷ್ಟವಾಗಿ ಹೇಳಿದರು. ಈ ನಿಟ್ಟಿನಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ವಾಕ್ಸಮರ್​ ತೀವ್ರವಾಗಿ ನಡೆಯಿತು. ಅಲ್ಲದೇ ಸಚಿವ ಆರ್​.ಬಿ. ತಿಮ್ಮಾಪುರ ರಾಜೀನಾಮೆಗೆ ವಿರೋಧಪಕ್ಷ ಆಗ್ರಹಿಸಿ ಘಟನೆಯೂ ನಡೆದಿದೆ.
ರಾಜ್ಯಪಾಲರಿಗೆ ಅವಮಾನ ಮಾಡುವ ಪ್ರಶ್ನೆಯೇ ಇಲ್ಲ!
ನಿಮ್ಮ ರಾಜ್ಯಪಾಲ, ನಮ್ಮ ರಾಜ್ಯಪಾಲ ಎಂದು ವಿಭಜನೆ ಮಾಡುವ ಮನೋಭಾವ ಸಂವಿಧಾನಾತ್ಮಕವಲ್ಲ. ರಾಜ್ಯಪಾಲರಿಗೆ ಅವಮಾನ ಮಾಡುವ ಪ್ರಶ್ನೆಯೇ ಇಲ್ಲ. ನಾವು ಅವರನ್ನು ಸದಾ ಗೌರವದಿಂದಲೇ ನಡೆಸಿಕೊಂಡಿದ್ದೇವೆ ಎಂದು ಸಿದ್ದರಾಮಯ್ಯ ಸದನಕ್ಕೆ ತಿಳಿಸಿದರು. ಆದರೆ, ರಾಜ್ಯಪಾಲರು ಸರ್ಕಾರದಿಂದ ರಚಿಸಲಾದ ಭಾಷಣವನ್ನು ಸಂಪೂರ್ಣವಾಗಿ ಓದದೇ ನಡೆದುಕೊಂಡಿದ್ದು ಸಂವಿಧಾನ ವಿರೋಧಿ ಕ್ರಮ ಎಂದು ಸಿಎಂ ಟೀಕಿಸಿದ್ದಾರೆ.
ರಾಜ್ಯಪಾಲರಿಂದ ರಾಷ್ಟ್ರಗೀತೆಗೆ ಅವಮಾನ!

ರಾಜ್ಯಪಾಲರು ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂಬ ಆರೋಪಕ್ಕೂ ಸಿಎಂ ಪ್ರತಿಕ್ರಿಯಿಸಿ, “ರಾಜ್ಯಪಾಲರ ಗೌರವಕ್ಕೆ ಧಕ್ಕೆಯಾಗುವಂತೆ ಸರ್ಕಾರ ಯಾವುದೇ ನಡೆ ತೆಗೆದುಕೊಂಡಿಲ್ಲ. ಅವರನ್ನು ಗೌರವಪೂರ್ವಕವಾಗಿ ಸ್ವಾಗತಿಸಿದ್ದೇವೆ, ಗೌರವಪೂರ್ವಕವಾಗಿ ಬೀಳ್ಕೊಟ್ಟಿದ್ದೇವೆ” ಎಂದು ಸರ್ಕಾರದ ನಡೆ ಸಮರ್ಥಿಸಿಕೊಂಡರು. ಈ ವೇಳೆ ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಬಿಜೆಪಿ ಸದಸ್ಯರು ಸರ್ಕಾರದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿ, ರಾಜ್ಯಪಾಲರ ನಡೆ ಬಗ್ಗೆ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು. ಇದರಿಂದ ಸದನದಲ್ಲಿ ಕೆಲಕಾಲ ಗದ್ದಲ ಉಂಟಾಗಿ, ವಾಕ್ಸಮರ ತೀವ್ರಗೊಂಡಿತು. ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ತೀವ್ರ ವಾದ–ಪ್ರತಿವಾದ ನಡೆಯಿತು.
ರಾಜ್ಯಪಾಲರು ಸಂವಿಧಾನಾತ್ಮಕ ಮಿತಿಯಲ್ಲಿರಲಿ!

ಸಿಎಂ ಸಿದ್ದರಾಮಯ್ಯ ಮಾತನಾಡುತ್ತಾ, “ಸಂವಿಧಾನಾತ್ಮಕ ಮಿತಿಯಲ್ಲಿ ರಾಜ್ಯಪಾಲರು ನಡೆದುಕೊಳ್ಳಬೇಕು. ಜನರಿಂದ ಆಯ್ಕೆಯಾದ ಸರ್ಕಾರದ ನೀತಿಗಳನ್ನು ಪ್ರತಿಬಿಂಬಿಸುವ ಭಾಷಣವನ್ನು ಓದದೇ ಇರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುತ್ತದೆ” ಎಂದು ಅಭಿಪ್ರಾಯಪಟ್ಟರು. ರಾಜ್ಯಪಾಲರ ಪಾತ್ರದ ಬಗ್ಗೆ ಸಂವಿಧಾನ ಸ್ಪಷ್ಟತೆ ನೀಡಿದೆ ಎಂದು ಅವರು ಹೇಳಿದರು.
ತಿಮ್ಮಾಪುರ ರಾಜೀನಾಮೆಗೆ ಆಗ್ರಹ!

ಕರ್ನಾಟಕದ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರದ ಆರೋಪಗಳು ಸರ್ಕಾರಕ್ಕೆ ಮತ್ತೊಂದು ಸಂಕಷ್ಟವನ್ನು ತಂದೊಡ್ಡಿವೆ. ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಸಚಿವರ ತಕ್ಷಣದ ರಾಜೀನಾಮೆಗೆ ಒತ್ತಾಯಿಸಿವೆ. ವಿರೋಧ ಪಕ್ಷಗಳ ನಾಯಕರು, “ಗಂಭೀರ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಸಚಿವರು ರಾಜೀನಾಮೆ ನೀಡಬೇಕು. ತನಿಖೆಗೆ ಸರ್ಕಾರ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ. ಸರ್ಕಾರವು ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿ ಹೊಂದಿದೆ ಎಂದು ಹೇಳಿಕೊಳ್ಳುವ ಕಾಂಗ್ರೆಸ್, ಈ ಪ್ರಕರಣದಲ್ಲಿ ಸ್ಪಷ್ಟ ನಿಲುವು ಪ್ರಕಟಿಸಬೇಕೆಂದು ವಿರೋಧ ಪಕ್ಷಗಳು ಒತ್ತಡ ಹೇರುತ್ತಿವೆ.
Share This Article