Ad image

ಹಳ್ಳಿ ಸಮಸ್ಯೆ ಹೇಳಿದ್ದಕ್ಕೆ ವ್ಯಕ್ತಿಯ ಬೆನ್ನು ಕಚ್ಚಿದ ಪಂಚಾಯತ್ ಅಧ್ಯಕ್ಷ.. ತಾಯಿಯ ತಾಳಿ ಸರವನ್ನೂ ಕಿತ್ತ ಆರೋಪ !

Team SanjeMugilu
2 Min Read

ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲೂಕಿನ ಶಿಂಧೋಗಿ ಗ್ರಾಮದಲ್ಲಿ ಅಮಾನವೀಯ ಹಾಗೂ ಅಚ್ಚರಿಯ ಘಟನೆಯೊಂದು ನಡೆದಿದೆ. ಗ್ರಾಮದ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತರಲು ಹೋದ ಯುವಕನ ಮೇಲೆ ಗ್ರಾಮ ಪಂಚಾಯತ್ ಅಧ್ಯಕ್ಷರು ತನ್ನ ಸಂಬಂಧಿಕರೊಂದಿಗೆ ಸೇರಿ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ, ಯುವಕನ ಬೆನ್ನು ಕಚ್ಚಿ ವಿಕೃತಿ ಮೆರೆದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಘಟನೆಯ ಹಿನ್ನೆಲೆ
ಶಿಂಧೋಗಿ ಗ್ರಾಮದ ಹನುಮಂತ ಕರಿಕಟ್ಟಿ (30) ಎಂಬಾತನೇ ಹಲ್ಲೆಗೊಳಗಾದ ವ್ಯಕ್ತಿ. ಗ್ರಾಮದ ಶಾಲೆಯ ಪಕ್ಕದಲ್ಲಿರುವ ರಸ್ತೆಯ ಮೇಲೆ ಚರಂಡಿ ನೀರು ನಿಲ್ಲುತ್ತಿದ್ದು, ಇದರಿಂದ ಶಾಲಾ ಮಕ್ಕಳು, ಅಂಗನವಾಡಿ ಮಕ್ಕಳು ಮತ್ತು ಸಾರ್ವಜನಿಕರು ಓಡಾಡಲು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಈ ಬಗ್ಗೆ ಹನುಮಂತ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO)ಗೆ ದೂರು ನೀಡಲು ಹೋಗಿದ್ದರು.

ಬೆನ್ನು ಕಚ್ಚಿ ವಿಕೃತಿ
ಹನುಮಂತ ಪಿಡಿಓ ಅವರಿಗೆ ಚರಂಡಿ ಸಮಸ್ಯೆಯ ಬಗ್ಗೆ ವಿವರಿಸುತ್ತಿದ್ದ ವೇಳೆ ಏಕಾಏಕಿ ಅಲ್ಲಿಗೆ ಬಂದ ಶಿಂಧೋಗಿ ಗ್ರಾಮ ಪಂಚಾಯತ್ ಅಧ್ಯಕ್ಷ ದುರ್ಗಪ್ಪ ಟೋಪೋಜಿ ಹಾಗೂ ಆತನ ಸಂಬಂಧಿಕರು ಗಲಾಟೆ ಆರಂಭಿಸಿದ್ದಾರೆ. ಮಾತಿಗೆ ಮಾತು ಬೆಳೆದು, ಅಧ್ಯಕ್ಷ ದುರ್ಗಪ್ಪ ಹನುಮಂತನ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದಲ್ಲದೆ, ಆತನ ಬೆನ್ನಿಗೆ ಬಲವಾಗಿ ಕಚ್ಚಿದ್ದಾರೆ ಎನ್ನಲಾಗಿದೆ. ಪಿಡಿಓ ಕಣ್ಣೆದುರೇ ಈ ಘಟನೆ ನಡೆದಿದೆ ಎಂದು ಸಂತ್ರಸ್ತ ಆರೋಪಿಸಿದ್ದಾರೆ.

ಮನೆಗೆ ನುಗ್ಗಿ ಅಟ್ಟಹಾಸ
ಇಷ್ಟಕ್ಕೇ ಸುಮ್ಮನಾಗದ ಅಧ್ಯಕ್ಷ ಮತ್ತು ಆತನ ಬೆಂಬಲಿಗರು ಹನುಮಂತನ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಮನೆಯಲ್ಲಿದ್ದ ಹನುಮಂತನ ತಾಯಿ ಮತ್ತು ಅಜ್ಜಿಯ ಮೇಲೆ ಬಡಿಗೆ ಹಾಗೂ ಸಲಕೆಯಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ವೇಳೆ ಹನುಮಂತನ ತಾಯಿಯ ಕೊರಳಲ್ಲಿದ್ದ ತಾಳಿಯನ್ನು ಕಿತ್ತುಹಾಕಿದ್ದಾರೆ ಎಂದು ದೂರಲಾಗಿದೆ.

ಹಳೆಯ ದ್ವೇಷದ ಹಿನ್ನೆಲೆ?
ಈ ಹಿಂದೆ ಗ್ರಾಮ ಪಂಚಾಯತ್‌ನಲ್ಲಿ ನಡೆದಿದ್ದ ಕೆಲವು ಅಕ್ರಮಗಳ ಬಗ್ಗೆ ಹನುಮಂತ ಪ್ರಶ್ನೆ ಮಾಡಿದ್ದರು ಎನ್ನಲಾಗಿದೆ. ಅದೇ ಹಳೆಯ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು, ಈಗ ಸಮಸ್ಯೆ ಹೇಳಲು ಹೋದಾಗ ಈ ರೀತಿ ಹಲ್ಲೆ ನಡೆಸಲಾಗಿದೆ ಎಂಬುದು ಹನುಮಂತನ ಆರೋಪ. ಸದ್ಯ ಗಾಯಗೊಂಡ ಹನುಮಂತ ಹಾಗೂ ಹಲ್ಲೆಗೊಳಗಾದ ವೃದ್ಧ ಮಹಿಳೆಯನ್ನು ಸವದತ್ತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ. ಗ್ರಾಮದ ಅಭಿವೃದ್ಧಿ ಬಗ್ಗೆ ಧ್ವನಿ ಎತ್ತಿದ ವ್ಯಕ್ತಿಯ ಮೇಲೆ ಜನಪ್ರತಿನಿಧಿಯೇ ಈ ರೀತಿ ಹಲ್ಲೆ ನಡೆಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Share This Article