Ad image

ರಾಯಚೂರು ಜಿಲ್ಲಾ ಉತ್ಸವ | 3,500 ರೂ.ಗೆ ಹೆಲಿ ರೈಡ್‌, ಮುಗಿಬಿದ್ದ ಜನ – ಯಾರಿಗೆಲ್ಲ ಉಚಿತ?

Team SanjeMugilu
2 Min Read

ರಾಯಚೂರು: ಬಿಸಿಲನಾಡು ರಾಯಚೂರಿನಲ್ಲಿ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಉತ್ಸವದ 2ನೇ ದಿನಕ್ಕೆ ಜಿಲ್ಲಾಡಳಿತ ನಾನಾ ಕಾರ್ಯಕ್ರಮಗಳನ್ನ ಆಯೋಜಿಸಿದೆ. ಹೆಲಿಕ್ಯಾಪ್ಟರ್ ರೈಡ್‌ ಜಿಲ್ಲೆಯ ಜನರನ್ನ ಆಕರ್ಷಿಸುತ್ತಿದೆ.

ಜಿಲ್ಲಾ ಉತ್ಸವ ಹಿನ್ನೆಲೆ ಸಾರ್ವಜನಿಕರಿಗಾಗಿ ಹೆಲಿಕ್ಯಾಪ್ಟರ್ ರೈಡ್‌ ಆಯೋಜನೆ ಮಾಡಲಾಗಿದ್ದು 500 ಅಡಿ ಎತ್ತರದಿಂದ ರಾಯಚೂರು ನಗರ ವೀಕ್ಷಿಸಿ ಜನ ಸಂಭ್ರಮಿಸುತ್ತಿದ್ದಾರೆ. ಆನ್‌ಲೈನ್ ಬುಕ್ಕಿಂಗ್ ಇದ್ದರೂ ರಾಯಚೂರು ಬೈಸ್ಕೈ ಹೆಲಿ ರೈಡ್‌ಗೆ ಜನ ಮುಗಿಬಿದ್ದಿದ್ದಾರೆ. 3 ವರ್ಷದವರೆಗಿನ ಮಕ್ಕಳಿಗೆ ಉಚಿತವಿದ್ದು, ವಯಸ್ಕರಿಗೆ ತಲಾ 3,500 ರೂಪಾಯಿ ಟಿಕೆಟ್ ದರ ನಿಗದಿ ಮಾಡಲಾಗಿದೆ. ಪ್ರತಿನಿತ್ಯ 25 ಟ್ರಿಪ್ ಹೆಲಿಕಾಪ್ಟರ್ ರೈಡ್ ನಡೆಸಲಾಗುತ್ತಿದೆ. ಪ್ರತಿ ಟ್ರಿಪ್‌ಗೆ 6 ಜನರಿಗೆ ಮಾತ್ರ ಅವಕಾಶವಿದೆ‌. ಫೆಬ್ರವರಿ 7ಕ್ಕೆ ಜಿಲ್ಲಾ ಉತ್ಸವ ಮುಕ್ತಾಯವಾಗುತ್ತಿದ್ದರೂ ಬೇಡಿಕೆ ಹೆಚ್ಚಾಗಿರುವುದರಿಂದ ಫೆಬ್ರವರಿ 10 ರ ವರೆಗೆ ಜಿಲ್ಲೆಯ ಜನರಿಗೆ ಹೆಲಿಕಾಪ್ಟರ್ ಜಾಲಿ ರೈಡ್‌ಗೆ ಅವಕಾಶವಿದೆ.

450 ಕೆ.ಜಿಯಷ್ಟು ಭಾರ ಮಾತ್ರ ಹೆಲಿಕ್ಯಾಪ್ಟರ್ ಹೊರುತ್ತಿದ್ದು 1 ಬಾರಿಗೆ 6 ಜನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಒಂದು ಟ್ರಿಪ್‌ನಲ್ಲಿ 6 ರಿಂದ 7 ನಿಮಿಷ ಕಾಲ ಹೆಲಿಕಾಪ್ಟರ್‌ನಲ್ಲಿ ಸುತ್ತಾಡಿ ಜನ ನಗರದ ಕೋಟೆ, ಮಾವಿನಕೆರೆ, ಜಿಲ್ಲಾಡಳಿತ ಭವನ, ವೈಟಿಪಿಎಸ್, ಆರ್‌ಟಿಪಿಎಸ್ ಸೇರಿದಂತೆ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನ ಸುಮಾರು 500 ಅಡಿ ಎತ್ತರದಿಂದ ವೀಕ್ಷಿಸಬಹುದು. ರಾಯಚೂರು ಜನರಿಗೆ ಹೆಲಿಕಾಪ್ಟರ್ ರೈಡ್ ಹೊಸದಾಗಿರುವುದರಿಂದ ವಯಸ್ಸಿನ ಭೇದವಿಲ್ಲದೇ ಚಿಕ್ಕಮಕ್ಕಳಿಂದ ವೃದ್ಧ ರವರೆಗೆ ಜನ ಆಸಕ್ತಿಯಿಂದ ಮುಂದೆ ಬರುತ್ತಿದ್ದಾರೆ. ನಗರದ ಕಿಲ್ಲೆಬೃಹನ್ ಮಠ ಹಾಗೂ ಸೋಮವಾರ ಪೇಟೆ ಮಠದ ಶ್ರೀಗಳು ಸಹ ಹೆಲಿಕಾಪ್ಟರ್ ಹತ್ತಿ ಹೊಸ ಅನುಭವಕ್ಕೆ ತಮ್ಮನ್ನ ಒಡ್ಡಿಕೊಂಡಿದ್ದಾರೆ.

ಇನ್ನೂ ಉತ್ಸವದ ಎರಡನೇ ದಿನವಾದ ಇಂದು ಗ್ರಾಮೀಣ ಕ್ರೀಡೆಗಳಾದ ಕುಸ್ತಿ, ಸಾಂಗ್ರಾಣಿ ಕಲ್ಲು ಉಸುಕಿನ ಮೂಟೆ ಎತ್ತುವ ಸ್ಪರ್ಧೆ ಏರ್ಪಡಿಸಲಾಗಿದೆ. ಶ್ವಾನ ಪ್ರದರ್ಶನ, ಉದ್ಯೋಗ ಮೇಳ ಆಯೋಜಿಸಲಾಗಿದೆ. ಸಂಜೆ ಕಲಾ ತಂಡಗಳಿಂದ ನೃತ್ಯ ಪ್ರದರ್ಶನ, ಗಾಯಕ ರಾಜೇಶ್ ಕೃಷ್ಣನ್ ತಂಡದಿಂದ ಸಂಗೀತ ಕಾರ್ಯಕ್ರಮವಿದೆ. ಜಿಲ್ಲಾ ಉತ್ಸವ ಹಿನ್ನೆಲೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಜನ ರಾಯಚೂರು ನಗರಕ್ಕೆ ಬರುತ್ತಿದ್ದಾರೆ.

Share This Article