Ad image

ಜಾಹೀರಾತು ಮಾಫಿಯಾಗೆ ರತ್ನಗಂಬಳಿ ಹಾಸಿದ ರಾಜ್ಯ ಸರ್ಕಾರ: ಹೊಸ ನೀತಿ ಜಾರಿ ಮಾಡಿದ ಜಿಬಿಎ!

Team SanjeMugilu
3 Min Read

ಬೆಂಗಳೂರಿನಲ್ಲಿ ಜಾಹೀರಾತು ಮಾಫಿಯಾ ಚಟುವಟಿಕೆಗಳಿಗೆ ರಾಜ್ಯ ಸರ್ಕಾರ  ಮತ್ತೊಮ್ಮೆ ಮಣೆ ಹಾಕಿದೆ. ಜಾಹೀರಾತು ಮಾಫಿಯಾಗೆ ಗ್ರೇಟರ್‌‌ ಬೆಂಗಳೂರು ಪ್ರಾಧಿಕಾರ ಮತ್ತೆ ಮನ್ನಣೆ ನೀಡಿದೆ. ಕಾಂಗ್ರೆಸ್ ಸರ್ಕಾರ  ಜಾಹೀರಾತು ಬೈಲಾಗೆ ತಿದ್ದುಪಡಿ ಮಾಡಿ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಹೈಕೋರ್ಟ್‌ನಿಂದ ಕೂಡ ಈ ಕರಡಿಗೆ ಅನುಮತಿ ಪಡೆದ ನಂತರ, ಗ್ರೇಟರ್ ಬೆಂಗಳೂರು ಅಧಿಕಾರ ಸಂಸ್ಥೆ (ಜಿಬಿಎ) ಏಪ್ರಿಲ್‌ನಿಂದ ಹೊಸ ರೂಪದಲ್ಲಿ ಜಾಹೀರಾತು ನೀತಿ ಜಾರಿಗೊಳಿಸಲಿದೆ.
ಜಾಹೀರಾತು ಬೈಲಾಗೆ ತಿದ್ದುಪಡಿ ಮಾಡಿ ಹೊಸ ಬೈಲಾದೊಂದಿಗೆ ನಿಯಮ ಜಾರಿಗೊಳಿಸಲು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ. ಈ ಹೊಸ ನೀತಿಯಿಂದ ಜಿಬಿಎಗೆ ವಾರ್ಷಿಕವಾಗಿ ಸುಮಾರು 750 ಕೋಟಿ ರೂಪಾಯಿ ಆದಾಯ ಬರುವ ನಿರೀಕ್ಷೆಯಿದೆ.
ಜಾಹೀರಾತಿ ಮಾಫಿಯಾಗೆ ಮತ್ತೆ ಮನ್ನಣೆ!
ಹಿಂದೆ ಹೈಕೋರ್ಟ್ ಬೆಂಗಳೂರಿನ ಹಲವು ಪ್ರಮುಖ ರಸ್ತೆಗಳಲ್ಲಿ ಫ್ಲೆಕ್ಸ್ ಮತ್ತು ಬ್ಯಾನರ್‌ಗಳಿಗೆ ನಿಷೇಧ ಹೇರಿತ್ತು. ವಿಧಾನಸೌಧ, ಹೈಕೋರ್ಟ್, ರಾಜಭವನ, ಕುಮಾರ ಕೃಪಾ ರಸ್ತೆ, ಸ್ಯಾಂಕಿ ರಸ್ತೆ, ಪೋಸ್ಟ್ ಆಫೀಸ್ ರಸ್ತೆ, ಚಾಲುಕ್ಯ ವೃತ್ತ, ಮಹಾರಾಣಿ ಕಾಲೇಜು ರಸ್ತೆ, ಕೆಆರ್ ವೃತ್ತ, ಕಬ್ಬನ್ ಪಾರ್ಕ್, ಲಾಲ್‌ಬಾಗ್, ನೃಪತುಂಗ ರಸ್ತೆ, ಹಡ್ಸನ್ ವೃತ್ತ, ಅರಮನೆ ರಸ್ತೆ, ದೇವಸ್ಥಾನ, ಗುರುದ್ವಾರ, ಚರ್ಚ್ ಮತ್ತು ಮಸೀದಿಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಾಹೀರಾತು ಪ್ರದರ್ಶನಕ್ಕೆ ಸಂಪೂರ್ಣ ನಿಷೇಧ ಇದೆ. ಆದರೆ ನಗರದ ಇತರ ಭಾಗಗಳಲ್ಲಿ ಅನಧಿಕೃತ ಜಾಹೀರಾತುಗಳು ಇನ್ನೂ ಕಂಡುಬರುತ್ತಿವೆ. ಇವುಗಳನ್ನು ತೆರವು ಮಾಡಲು ಜಿಬಿಎ ಹಣ ವ್ಯಯಿಸುತ್ತಿದೆ.
ಹೊಸ ಜಾಹೀರಾತು ನೀತಿಯ ಮಾನದಂಡಗಳು ಏನು?
ಈ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಹೊಸ ಜಾಹೀರಾತು ನೀತಿ ರೂಪಿಸಿದೆ. ಹೊಸ ನೀತಿಯಲ್ಲಿ ಮಾರ್ಗಸೂಚಿ ದರದ ಆಧಾರದ ಮೇಲೆ ಜಾಹೀರಾತು ಶುಲ್ಕ ನಿಗದಿಪಡಿಸಲಾಗಿದೆ. ರಸ್ತೆ, ಸರ್ಕಲ್ ಮತ್ತು ವಲಯವಾರು ಟೆಂಡರ್ ಮೂಲಕ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಟೆಂಡರ್‌ನಲ್ಲಿ ಭಾಗವಹಿಸಲು ಕಡ್ಡಾಯವಾಗಿ 5 ಲಕ್ಷ ರೂಪಾಯಿ ಶುಲ್ಕ ಪಾವತಿಸಬೇಕು. ಪರಿಸರ ಸ್ನೇಹಿ ವಸ್ತುಗಳನ್ನು ಬಳಸುವುದು ಕಡ್ಡಾಯಗೊಳಿಸಲಾಗಿದೆ.
ಅನಧಿಕೃತ ಜಾಹೀರಾತು ಪ್ರದರ್ಶನಕ್ಕೆ ಗುತ್ತಿಗೆ ಪಡೆದ ದರದ ಎರಡು ಪಟ್ಟು ದಂಡ ವಿಧಿಸಲಾಗುವುದು. ಅನಧಿಕೃತ ಜಾಹೀರಾತು ತೆರವುಗೊಳಿಸುವ ಜವಾಬ್ದಾರಿಯನ್ನು ವಲಯ ಆಯುಕ್ತರಿಗೆ ವಹಿಸಲಾಗಿದೆ. ಬಸ್, ಆಟೋ, ಮೆಟ್ರೋ ರೈಲು, ವಿತರಣಾ ವಾಹನ, ಸೇವಾ ವಾಹನ, ಟ್ಯಾಕ್ಸಿ ಮತ್ತು ಸಾರ್ವಜನಿಕ ಸಂಚಾರಿ ವಾಹನಗಳಲ್ಲಿಯೂ ಜಾಹೀರಾತು ಪ್ರದರ್ಶನಕ್ಕೆ ಶುಲ್ಕ ನಿಗದಿಪಡಿಸಲಾಗಿದೆ. ಜಿಬಿಎಯಿಂದ ಅನುಮೋದನೆ ಪಡೆದು ಶುಲ್ಕ ಪಾವತಿಸಬೇಕು.
ಹೊಸ ನೀತಿಯ ಮುಖ್ಯ ಮಾನದಂಡಗಳು ಈ ಕೆಳಗಿನಂತಿವೆ:
ಚದರಡಿಗೆ ಮಾರ್ಗಸೂಚಿ ದರ 3,000 ರೂ.ಗಿಂತ ಕಡಿಮೆ ಇರುವ ಜಾಗದಲ್ಲಿ Sqftಗೆ 45
3,000ರಿಂದ 5,000 ರೂ.ಗಿಂತ ಕಡಿಮೆ ಇರುವ ಜಾಗದಲ್ಲಿ Sqftಗೆ 55
5,000ರಿಂದ 10,000 ರೂ.ಗಿಂತ ಕಡಿಮೆ ಇರುವ ಜಾಗದಲ್ಲಿ Sqftಗೆ 65
10,000ರಿಂದ 20,000 ರೂ.ಗಿಂತ ಕಡಿಮೆ ಇರುವ ಜಾಗದಲ್ಲಿ Sqftಗೆ 75
20,000ರಿಂದ 50,000 ರೂ.ಗಿಂತ ಕಡಿಮೆ ಇರುವ ಜಾಗದಲ್ಲಿ Sqftಗೆ 80
50,000ರಿಂದ 1 ಲಕ್ಷ ರೂ.ಗಿಂತ ಕಡಿಮೆ ಇರುವ ಜಾಗದಲ್ಲಿ Sqftಗೆ 90
1 ಲಕ್ಷದಿಂದ 2 ಲಕ್ಷ ರೂ.ಗಿಂತ ಕಡಿಮೆ ಇರುವ ಜಾಗದಲ್ಲಿ Sqftಗೆ 100
2 ಲಕ್ಷ ರೂ.ಗಿಂತ ಹೆಚ್ಚಿರುವ ಜಾಗದಲ್ಲಿ Sqftಗೆ 110
ಬಸ್ ಮತ್ತು ಆಟೋಗಳಲ್ಲಿ 10 ಅಡಿ ಪ್ರದರ್ಶನಕ್ಕೆ ಪ್ರತಿ ಚದರಡಿಗೆ 50 ಅಥವಾ ಮಾಸಿಕ 500 ಶುಲ್ಕ ನಿಗದಿಯಾಗಿದೆ. ಮೆಟ್ರೋ ರೈಲಿನಲ್ಲಿ ಪ್ರತಿ ಚದರಡಿಗೆ 50 ಅಥವಾ ಇಡೀ ಬೋಗಿಗೆ ಮಾಸಿಕ 750 ಶುಲ್ಕವಿದೆ. ವಿತರಣಾ ಮತ್ತು ಸೇವಾ ವಾಹನಗಳಲ್ಲಿ 6 ಅಡಿ ಪ್ರದರ್ಶನಕ್ಕೆ ಪ್ರತಿ ಚದರಡಿಗೆ 75 ಅಥವಾ ಮಾಸಿಕ 750 ಶುಲ್ಕ ನಿಗದಿಯಾಗಿದೆ. ಟ್ಯಾಕ್ಸಿ ಮತ್ತು ಸಾರ್ವಜನಿಕ ಸಂಚಾರಿ ವಾಹನಗಳಲ್ಲಿ 6 ಅಡಿ ಪ್ರದರ್ಶನಕ್ಕೆ ಪ್ರತಿ ಚದರಡಿಗೆ 50 ಅಥವಾ ಮಾಸಿಕ 500 ಶುಲ್ಕ ಇದೆ.
ಈ ಹೊಸ ನೀತಿಯಿಂದ ಅನಧಿಕೃತ ಜಾಹೀರಾತುಗಳ ಸಮಸ್ಯೆಗೆ ಪರಿಹಾರ ಸಿಗುವ ನಿರೀಕ್ಷೆಯಿದೆ. ಜಿಬಿಎಗೆ ದೊಡ್ಡ ಮಟ್ಟದ ಆದಾಯ ಬರುವುದರಿಂದ ನಗರದ ಸೌಂದರ್ಯ ಮತ್ತು ಭದ್ರತೆಗೆ ಒತ್ತು ನೀಡಲು ಸಾಧ್ಯವಾಗುತ್ತದೆ. ಆದರೆ ನಿಗದಿತ ಶುಲ್ಕಗಳು ಜಾಹೀರಾತುದಾರರ ಮೇಲೆ ಹೆಚ್ಚು ಭಾರ ಹಾಕಬಹುದು ಎಂಬ ಆತಂಕವೂ ಇದೆ. ಈ ನೀತಿಯು ನಗರದ ಜಾಹೀರಾತು ವ್ಯವಹಾರವನ್ನು ನಿಯಂತ್ರಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

Share This Article