Ad image

ತಡರಾತ್ರಿ ಮಲ್ಲಿಕಾರ್ಜುನ ಖರ್ಗೆ, ಕೆಸಿ ವೇಣುಗೋಪಾಲ್ ಭೇಟಿಯಾದ ಡಿಕೆ ಸಹೋದರರು: ಕಾಂಗ್ರೆಸ್ ಕುರ್ಚಿ ಕದನಕ್ಕೆ ರಂಗು

Team SanjeMugilu
2 Min Read

ನವದೆಹಲಿ: ಕರ್ನಾಟಕ ಕಾಂಗ್ರೆಸ್‌ನಲ್ಲಿ ಕುರ್ಚಿ ಕದನ ದಿನಕ್ಕೊಂದು ರಂಗುಪಡೆಯುತ್ತಿದೆ. ಮಾಜಿ ಸಚಿವ ಕೆಎನ್‌ ರಾಜಣ್ಣ ಹೇಳಿದ ಸೆಪ್ಟೆಂಬರ್‌ ಕ್ರಾಂತಿ ನಡೆಯಲಿಲ್ಲ. ಬಳಿಕ ನವೆಂಬರ್ ಕ್ರಾಂತಿಯೂ ಆಗಲಿಲ್ಲ. ಡಿಸೆಂಬರ್‌ ಕ್ರಾಂತಿ, ಹೊಸ ವರ್ಷ, ಸಂಕ್ರಾಂತಿಯ ಕೊಡುಗೆ ಎಲ್ಲವೂ ಮುಗಿದವು. ವಿಧಾನಮಂಡಲ ಅಧಿವೇಶನದ ಬಳಿಕ ಹೈಕಮಾಂಡ್‌ ದೆಹಲಿಗೆ ಕರೆಯಲಿದೆ ಎಂದು ಹೇಳಲಾಯಿತು. ಈಗ ಬಜೆಟ್‌ ಅಧಿವೇಶನದ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿ ರಾಜಕೀಯ ಕ್ರಾಂತಿಯಾಗಲಿದೆ ಎಂದು ಹೇಳಲಾಗುತ್ತಿದೆ. ಇದೀಗ ದೆಹಲಿಯಲ್ಲಿ ಡಿಕೆ ಸಹೋದರರು ದಾಳ ಉರುಳಿಸಿದ್ದು ಸಂಚಲನಕ್ಕೆ ಕಾರಣವಾಗಿದೆ.

ತಡರಾತ್ರಿ ಖರ್ಗೆ ನಿವಾಸದಲ್ಲಿ ಮಹತ್ವದ ಮಾತುಕತೆ
ಹೈಕಮಾಂಡ್ ನಾಯಕರ ಭೇಟಿಗಾಗಿ 2 ದಿನಗಳಿಂದ ದೆಹಲಿ ಪ್ರವಾಸದಲ್ಲಿರುವ ಡಿಸಿಎಂ ಡಿಕೆ ಶಿವಕುಮಾರ್ ಸಕ್ರಿಯರಾಗಿದ್ದಾರೆ. ಶತಾಯಗತಾಯ ಅಧಿಕಾರ ಹಂಚಿಕೆ ಬಗ್ಗೆ ಅಂತಿಮ ನಿರ್ಧಾರ ಆಗಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಬುಧವಾರವೇ ಡಿಕೆ ಸುರೇಶ್‌ಕೂಡ ದೆಹಲಿಗೆ ತೆರಳಿದ್ದು, ತಡರಾತ್ರಿ ಮಹತ್ವದ ಬೆಳವಣಿಗೆಯಲ್ಲಿ ದೆಹಲಿಯ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಎಡತಾಕಿ ಚರ್ಚಿಸಿದ್ದಾರೆ. ಖರ್ಗೆ ಭೇಟಿ ಬೆನ್ನಲ್ಲೇ ಕೆಸಿ ವೇಣುಗೋಪಾಲ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಕದ್ದುಮುಚ್ಚಿ ಮಾತನಾಡಿಲ್ಲ. ನಾನು ಸಿದ್ದರಾಮಯ್ಯ ಮಾತನಾಡಿಡಿದ್ದೇವೆ. ಕಾಲವೇ ಉತ್ತರಿಸುತ್ತದೆ ಎಂದು ದೆಹಲಿಯಲ್ಲಿ ಡಿಸಿಎಂ ಡಿಕೆಶಿ ಆಡಿದ ಮಾತು ಕೌತುಕ ಹೆಚ್ಚಿಸಿದೆ. ಇನ್ನು ಡಿಕೆ ಸುರೇಶ್ ಕೂಡ, ಸಿಎಂ ಕೊಟ್ಟ ಮಾತು ಉಳಿಸಿಕೊಳ್ತಾರೆ ಎಂದಿದ್ದಾರೆ. ಪವರ್ ಶೇರಿಂಗ್ ಬಗ್ಗೆ ಮಾತುಕತೆ ಆಗಿದೆ ಎಂಬ ಧಾಟಿಯಲ್ಲೇ ಡಿಕೆ ಸಹೋದರರು ಮಾತನಾಡಿದ್ದರೆ, ಸಿಎಂ ಸಿದ್ದರಾಮಯ್ಯ ಮಾತ್ರ ಅಂತಹದ್ದೇನು ಅಗಿಲ್ಲ. ಹೈಕಮಾಂಡ್ ಹೇಳಿದರೆ ನಾನು, ಡಿಕೆ ಕೇಳ್ಬೇಕು ಎಂದಿದ್ದಾರೆ. ನಾಯಕತ್ವ ಬದಲಾವಣೆ ಕುರಿತು ಪ್ರಶ್ನೆ ಕೇಳಿದ್ದಕ್ಕೆ ಗರಂ ಆಗಿದ್ದಾರೆ. ಪೂರ್ಣಾವಧಿ ಸಿದ್ದರಾಮಯ್ಯ ಅವರೇ ಸಿಎಂ ಎಂದು ಪದೇ ಪದೇ ಯತೀಂದ್ರ ಹೇಳಿರುವ ಮಾತಿಗೆ ಡಿಕೆ ಸುರೇಶ್ ನಯವಾಗೇ ಕೌಂಟರ್ ಕೊಟ್ಟಿದ್ದಾರೆ. ಅವರ ಮಾತೇ ವೇದವಾಕ್ಯ ಎಂದು ಕುಹಕವಾಡಿದ್ದಾರೆ.

ಸಿದ್ದರಾಮಯ್ಯ, ಡಿಕೆಶಿ ಬಣಗಳ ನಡುವೆ ವಾಕ್ಸಮರ ಜೋರು
ಇದೆಲ್ಲದರ ನಡುವೆ ಡಿಕೆಶಿ ಬಣ ಮತ್ತು ಸಿದ್ದರಾಮಯ್ಯ ಬಣದವರ ಮಾತಿನ ಯುದ್ಧವೂ ಜೋರಾಗಿದೆ. ಅಧಿಕಾರ ಹಂಚಿಕೆ ವಿಚಾರದಲ್ಲಿ ಹೈಕಮಾಂಡ್ ಮೌನ ಮುರಿಯಬೇಕು ಎಂದು ಶಾಸಕ ಬಾಲಕೃಷ್ಣ ಹೇಳಿದ್ದಾರೆ. 2028ರವರೆಗೂ ಸಿದ್ದರಾಮಯ್ಯ ಅವರೇ ಸಿಎಂ. ಆದರೆ ಹೈಕಮಾಂಡ್ ಬೀದಿ ದಾಸಯ್ಯನ ಸಿಎಂ ಮಾಡಿದರೂ ಒಪ್ಪಿಕೊಳ್ಳಬೇಕಾಗುತ್ತದೆ ಎಂದು ಸಚಿವ ಜಮೀರ್ ಹೇಳಿದ್ದಾರೆ.

ಸಿದ್ದರಾಮಯ್ಯ ಆಪ್ತ ಸಚಿವರ ನೇತೃತ್ವದಲ್ಲಿ ಶಾಸಕರ ಫಾರಿನ್ ಟೂರ್
ಸಿದ್ದರಾಮಯ್ಯ ಆಪ್ತ ಪಶುಸಂಗೋಪನೆ ಸಚಿವ ಕೆ ವೆಂಕಟೇಶ್ ನೇತೃತ್ವದಲ್ಲಿ ಫೆಬ್ರವರಿ 16ಕ್ಕೆ 25 ಶಾಸಕರ ಫಾರಿನ್ ಟೂರ್ ಕೈಗೊಳ್ಳಲಾಗುತ್ತಿದೆ. ಕುರ್ಚಿ ಉಳಿಸಿಕೊಳ್ಳುವ ಆತಂಕದಲ್ಲಿರುವ ಸಿದ್ದರಾಮಯ್ಯ ತಮ್ಮ ಬಣದ ಶಾಸಕರನ್ನು ಹಿಡಿದಿಟ್ಟಿಕೊಳ್ಳಲು ಸದ್ದಿಲ್ಲದೇ ಫಾರಿನ್‌ ಟ್ರಿಪ್ ಕಳಿಸಲು ಪ್ಲಾನ್‌ ಮಾಡಿದ್ದಾರೆ. ಪಟ್ಟಕ್ಕಾಗಿ ದೆಹಲಿ ಯಾತ್ರೆಯಲ್ಲಿರುವ ಡಿಕೆ ಶಿವಕುಮಾರ್ ಹೇಗಾದರೂ ಮಾಡಿ ಕುರ್ಚಿ ಪಡೆಯಬೇಕು ಎಂದು ಹೈಕಮಾಂಡ್‌ ಹಿಂದೆ ಬಿದ್ದಿದ್ದಾರೆ.

ಏತನ್ಮಧ್ಯೆ, ಬಜೆಟ್‌ನಲ್ಲಿ ಸಿಗುವ ಅನುದಾನಕ್ಕಿಂತ ಫಾರಿನ್‌ ಟೂರ್‌ನಲ್ಲಿ ಸಿಗುವ ಸಮಾಧಾನ ದೊಡ್ಡದು ಎಂದು ಕೆಲ ಶಾಸಕರು ವಿಮಾನ ಹತ್ತಲು ರೆಡಿಯಾಗಿದ್ದಾರೆ ಎಂದು ಜೆಡಿಎಸ್ ಟೀಕಿಸಿದೆ. ಒಟ್ಟಿನಲ್ಲಿ, ಕಾಂಗ್ರೆಸ್‌ನಲ್ಲಿ ಕುರ್ಚಿ ಕದನ ಕ್ಲೈಮ್ಯಾಕ್ಸ್ ಘಟ್ಟಕ್ಕೆ ಬಂದಂತೆ ಕಾಣಿಸುತ್ತಿದೆ. ಬಜೆಟ್ ಬಳಿಕ ದೊಡ್ಡ ಕ್ರಾಂತಿಯಾಗುತ್ತದೆಯೇ ಎಂಬುದೇ ಸದ್ಯದ ಪ್ರಶ್ನೆಯಾಗಿದೆ.

Share This Article