Ad image

‘ರಾಜಕಾರಣ ಮಾಡೋಕೆ ಬಂದಿದ್ದೀನಿ, ಗಾಳಿ ಕುಡಿಯೋಕಲ್ಲ : ಸೋನಿಯಾ ಭೇಟಿ ಬಳಿಕ ಡಿಕೆಶಿ ಸ್ಫೋಟಕ ಹೇಳಿಕೆ!

Team SanjeMugilu
1 Min Read

ನವದೆಹಲಿ: ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಬದಲಾವಣೆ ಸದ್ದು ಮತ್ತೆ ಜೋರಾಗಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಇಂದು ಎಐಸಿಸಿ ವರಿಷ್ಠೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಈ ಭೇಟಿ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ.

ದೆಹಲಿಗೆ ತೆರಳಿರುವ ಡಿ.ಕೆ. ಶಿವಕುಮಾರ್ ಅವರು, ಸಹೋದರ ಡಿ.ಕೆ. ಸುರೇಶ್ ಅವರೊಂದಿಗೆ ಸೋನಿಯಾ ಗಾಂಧಿ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದರು. ಈ ವೇಳೆ ರಾಹುಲ್ ಗಾಂಧಿ ಕೂಡ ಉಪಸ್ಥಿತರಿದ್ದರು ಎನ್ನಲಾಗಿದೆ. ಬಹುದಿನಗಳಿಂದ ಬಾಕಿ ಉಳಿದಿರುವ ಅಧಿಕಾರ ಹಂಚಿಕೆ (Power Sharing) ಸೂತ್ರದ ಬಗ್ಗೆಯೇ ಈ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ತಮ್ಮ ಮನದ ಇಂಗಿತವನ್ನು ಡಿಕೆಶಿ ಹೈಕಮಾಂಡ್ ನಾಯಕರ ಮುಂದೆ ಬಿಚ್ಚಿಟ್ಟಿದ್ದಾರೆ ಎನ್ನಲಾಗಿದೆ.

ಡಿಕೆಶಿ ಮೊದಲ ಪ್ರತಿಕ್ರಿಯೆ ಏನಾಗಿತ್ತು?
ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಭೇಟಿಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ತಮ್ಮ ನಡೆ ಮತ್ತು ಮಾತಿನಲ್ಲಿ ನಿಗೂಢತೆಯನ್ನು ಕಾಯ್ದುಕೊಂಡರು. ಆದರೆ, ಅವರ ಮಾತುಗಳು ಸಾಕಷ್ಟು ಅರ್ಥಗರ್ಭಿತವಾಗಿದ್ದವು.

‘‘ದೆಹಲಿಗೆ ಬಂದ ಮೇಲೆ ಎಲ್ಲಾ ವಿಚಾರ ಮಾತನಾಡಬೇಕು, ಅದನ್ನ ಮಾತನಾಡಿದ್ದೀನಿ. ಆದರೆ ಯಾರ್ಯಾರ ಹತ್ತಿರ ಏನೇನು ಮಾತನಾಡಿದೆ ಅಂತ ಬಹಿರಂಗವಾಗಿ ಹೇಳೋಕೆ ಆಗಲ್ಲ. ಒಳಗೆ ನಡೆದ ಚರ್ಚೆಯನ್ನು ಹೊರಗೆ ಹೇಳುವುದು ಸರಿಯಲ್ಲ’’

ಮುಂದುವರಿದು ಮಾತನಾಡಿದ ಅವರು, ‘‘ನಾನು ಇಲ್ಲಿಗೆ ಬಂದಿರೋದು ರಾಜಕಾರಣ ಮಾಡೋಕೆ, ಸುಮ್ಮನೆ ಗಾಳಿ ಕುಡಿಯೋಕೆ ಬಂದಿಲ್ಲ. ವರಿಷ್ಠರ ಬಳಿ ಏನು ಮಾತನಾಡಬೇಕೋ ಅದನ್ನ ಮಾತನಾಡಿದ್ದೀನಿ. ಎಲ್ಲದಕ್ಕೂ ಕಾಲ ಉತ್ತರ ಕೊಡುತ್ತೆ’’ ಎನ್ನುವ ಮೂಲಕ ಕುರ್ಚಿ ಕದನದ ಬಗ್ಗೆ ಪರೋಕ್ಷವಾಗಿ ಸುಳಿವು ನೀಡಿದರು.

ಡಿಕೆಶಿ ಪ್ರಸ್ತಾಪಕ್ಕೆ ಸೋನಿಯಾ ಮತ್ತು ರಾಹುಲ್ ಗಾಂಧಿ ಏನು ಉತ್ತರಿಸಿದ್ದಾರೆ? ಸಿಎಂ ಸಿದ್ದರಾಮಯ್ಯ ಅವರಿಗೆ ಸಂದೇಶ ರವಾನೆಯಾಗಿದೆಯಾ? ಅಥವಾ ಸದ್ಯಕ್ಕೆ ಯಥಾಸ್ಥಿತಿ ಕಾಪಾಡಿಕೊಳ್ಳಲು ಸೂಚಿಸಿದ್ದಾರಾ? ಎಂಬುದು ಸದ್ಯದ ಕುತೂಹಲ. ಡಿಕೆಶಿ ಅವರ ‘ರಾಜಕಾರಣ ಮಾಡೋಕೆ ಬಂದಿದ್ದೀನಿ’ ಎಂಬ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನಕ್ಕೆ ನಾಂದಿ ಹಾಡಿದೆ.

Share This Article