Ad image

‘ನೀವು ಮತ್ತು ಆ ಹುಡುಗಿ ಬೇರೆ ಬೇರೆ ಮಲಗಿ’: ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಕೆ ಹಾಕಿದ ಬಸ್ ಕಂಡಕ್ಟರ್

Team SanjeMugilu
1 Min Read

ಬೆಂಗಳೂರು: ಬಸ್ಸಿನಲ್ಲಿ ಆಗುವ ಕೆಲವೊಂದು ವಿಚಾರಗಳು ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುತ್ತದೆ. ದೀರ್ಘ ಸಮಯದವರಗೆ ಪ್ರಯಾಣ ಮಾಡುವಾಗ ಬಸ್ಸಿನಲ್ಲಿ ತುಂಬಾ ಆರಾಮದಾಯಕವಾಗಿರಬೇಕು ಎನ್ನುವುದು ಅನೇಕರ ಯೋಚನೆ, ಅದಕ್ಕೆ ಎರಡು ಸೀಟ್​​, ಅಥವಾ ಸಿಂಗಲ್​​​ ಸೀಟ್​​​ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇನ್ನು ದಂಪತಿಗಳು, ಮಕ್ಕಳು ಇದ್ರೆ ಡಬಲ್​​​​, ತ್ರಿಬಲ್​​​​​ ಸೀಟ್​​ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ಅನೇಕ ಕಡೆ ಹುಡುಗ-ಹುಡುಗಿ ಒಂದೇ ಸೀಟ್​​​ನಲ್ಲಿ ಜತೆಯಾಗಿ ಪ್ರಯಾಣ ಮಾಡುವುದನ್ನು ವಿರೋಧಿಸುತ್ತಾರೆ. ಇದೀಗ ಇಂತಹದೇ ಕಿರಿಕಿರಿಯನ್ನು ಬೆಂಗಳೂರಿನ ವ್ಯಕ್ತಿಯೊಬ್ಬರು ಅನುಭವಿಸಿದ್ದಾರೆ.

22 ವರ್ಷದ ಯುವಕ ಮತ್ತು ಆತನ ಗೆಳತಿ ಬೆಂಗಳೂರಿನಿಂದ ಪ್ರಯಾಣಿಸಲು ಖಾಸಗಿ ಸ್ಲೀಪರ್ ಬಸ್‌ನಲ್ಲಿ 3 ಬರ್ತ್‌ಗಳನ್ನು ಬುಕ್ ಮಾಡಿದ್ದರು. ಹೆಚ್ಚು ಜಾಗವಿರಲಿ ಮತ್ತು ಆರಾಮದಾಯಕವಾಗಿ ಪ್ರಯಾಣಿಸಲಿ ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದರು. ಆದರೆ ಬಸ್ ಹತ್ತಿದ ನಂತರ ಕಂಡಕ್ಟರ್ ಇವರಿಬ್ಬರನ್ನು ಒಟ್ಟಿಗೆ ಕುಳಿತುಕೊಳ್ಳದಂತೆ ತಡೆದಿದ್ದಾರೆ. ಇಬ್ಬರೂ ವಯಸ್ಕರಾಗಿದ್ದರೂ ಮತ್ತು ಅಧಿಕೃತ ಟಿಕೆಟ್ ಹೊಂದಿದ್ದರೂ, ಕಂಡಕ್ಟರ್ ಇಬ್ಬರನ್ನು ಪ್ರತ್ಯೇಕ ಸೀಟುಗಳಲ್ಲಿ ಮಲಗುವಂತೆ ಒತ್ತಾಯಿಸಿದ್ದಾರೆ.

“ನಿಮ್ಮ ಪೋಷಕರಿಗೆ ಫೋನ್ ಮಾಡಿ” ಇಲ್ಲವೆಂದರೆ “ಪೊಲೀಸರಿಗೆ ದೂರು ನೀಡುತ್ತೇವೆ” ಎಂದು ಕಂಡಕ್ಟರ್ ಬೆದರಿಕೆ ಹಾಕಿದ್ದರಿಂದ ಆತಂಕಗೊಂಡ ಜೋಡಿ, ವಿವಾದ ಬೇಡವೆಂದು ದೂರ ಕುಳಿತಿದ್ದಾರೆ.ಈ ಘಟನೆ ರೆಡ್ಡಿಟ್‌ನಲ್ಲಿ ಪೋಸ್ಟ್ ಆದ ಬೆನ್ನಲ್ಲೇ ನೂರಾರು ಜನರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. “ಕಂಡಕ್ಟರ್ ನೀವು ಖಾಲಿ ಬಿಟ್ಟಿದ್ದ ಒಂದು ಸೀಟನ್ನು ಬೇರೆಯವರಿಗೆ ಮಾರಿ ಹಣ ಮಾಡಲು ಈ ರೀತಿ ನಾಟಕ ಆಡಿರಬಹುದು” ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. “ವಯಸ್ಕರು ಒಟ್ಟಿಗೆ ಪ್ರಯಾಣಿಸುವುದು ಕಾನೂನುಬಾಹಿರವಲ್ಲ. ನೀವು ಟಿಕೆಟ್ ಹಣ ಪಾವತಿಸಿರುವಾಗ ನಿಮ್ಮ ಸೀಟಿನ ಮೇಲೆ ಕಂಡಕ್ಟರ್‌ಗೆ ಯಾವುದೇ ಹಕ್ಕಿಲ್ಲ” ಎಂದು ಒಬ್ಬರು ಹೇಳಿದ್ದಾರೆ. ಖಾಸಗಿ ಬಸ್‌ಗಳಿಗಿಂತ ಕೆಎಸ್ಆರ್‌ಟಿಸಿ ಸ್ಲೀಪರ್ ಬಸ್‌ಗಳು ಸುರಕ್ಷಿತ ಮತ್ತು ಅಲ್ಲಿ ಇಂತಹ ನೈತಿಕ ಪೊಲೀಸ್‌ಗಿರಿ ನಡೆಯುವುದಿಲ್ಲ ಎಂದು ಮತ್ತೊಬ್ಬರು ಹೇಳಿದ್ದಾರೆ. ಪೋಷಕರಿಗೆ ಕರೆ ಮಾಡುವುದಾಗಿ ಬೆದರಿಸಿದಾಗ ‘ಮಾಡಿ’ ಎಂದು ಧೈರ್ಯವಾಗಿ ಹೇಳಬೇಕಿತ್ತು. ನೀವು ಯಾವುದೇ ತಪ್ಪು ಮಾಡದಿದ್ದಾಗ ಹೆದರುವ ಅಗತ್ಯವಿಲ್ಲ ಎಂದು ಮತ್ತೊಬ್ಬರು ಸಲಹೆ ನೀಡಿದ್ದಾರೆ.

Share This Article