Ad image

GST ಆಫೀಸರ್ ಹೆಸರಲ್ಲಿ ಲಕ್ಷ ಲಕ್ಷ ದೋಚಿದ ಹೌಸ್ ಕೀಪಿಂಗ್ ಸಿಬ್ಬಂದಿ! ಗುಟ್ಕಾ ವ್ಯಾಪಾರಿಗೆ ಬೆದರಿಸಿ ವಂಚನೆ

Team SanjeMugilu
2 Min Read

ಬೆಂಗಳೂರು: ಜಿಎಸ್‌ಟಿ  ಅಧಿಕಾರಿಗಳ ಹೆಸರಿನಲ್ಲಿ ಗುಟ್ಕಾ ವ್ಯಾಪಾರಿಯನ್ನು ಬೆದರಿಸಿ 5 ಲಕ್ಷ ರೂಪಾಯಿ ಸುಲಿಗೆ ಮಾಡಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬೆಂಗಳೂರು ಬನಶಂಕರಿ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಆರೋಪಿಗಳು ಕೇಂದ್ರ ಸರ್ಕಾರದ ಜಿಎಸ್‌ಟಿ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಹೌಸ್‌ಕೀಪಿಂಗ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ.

ಬಂಧಿತರನ್ನು ದಾದಾಪೀರ್ ಮತ್ತು ನಾಗರಾಜ್ ಎಂದು ಗುರುತಿಸಲಾಗಿದೆ. ಇವರು ಬನಶಂಕರಿಯ ಬಿಎಂಟಿಸಿ ಬಸ್ ನಿಲ್ದಾಣದ ಕಟ್ಟಡದಲ್ಲಿರುವ ಜಿಎಸ್‌ಟಿ ಕಚೇರಿಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಈ ಹಿಂದೆ ಇಂದಿರಾನಗರ ಸೇರಿದಂತೆ ವಿವಿಧ ಕೇಂದ್ರ ಸರ್ಕಾರಿ ಕಚೇರಿಗಳಲ್ಲೂ ಕೆಲಸ ನಿರ್ವಹಿಸಿ ಅಧಿಕಾರಿಗಳ ವಿಶ್ವಾಸ ಗಳಿಸಿದ್ದರು. 2016ರಿಂದ ಬನಶಂಕರಿ ಜಿಎಸ್‌ಟಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಜಿಎಸ್‌ಟಿ ಇಂಟೆಲಿಜೆನ್ಸ್ ಅಧಿಕಾರಿಗಳ ಸೋಗಿನಲ್ಲಿ ಕೃತ್ಯ
ಪೊಲೀಸ್ ಮಾಹಿತಿ ಪ್ರಕಾರ, ಆರೋಪಿಗಳು ಜಿಎಸ್‌ಟಿ ಇಂಟೆಲಿಜೆನ್ಸ್ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಗುರುತಿನ ಚೀಟಿ ಸೃಷ್ಟಿಸಿಕೊಂಡು ಪೀಣ್ಯ ಭಾಗದ ಗುಟ್ಕಾ ವ್ಯಾಪಾರಿಯೊಬ್ಬರ ಮನೆಗೆ ತೆರಳಿದ್ದರು. ‘ನೀವು ನಿಯಮ ಉಲ್ಲಂಘನೆ ಮಾಡಿದ್ದೀರಿ, ನಿಮ್ಮ ಗೋಡೌನ್ ಹಾಗೂ ಕಚೇರಿಗೆ ದಾಳಿ ಮಾಡುತ್ತೇವೆ’ ಎಂದು ಬೆದರಿಸಿ ಐದು ಲಕ್ಷ ರೂಪಾಯಿ ನೀಡುವಂತೆ ಒತ್ತಾಯಿಸಿದ್ದರು. ಭಯಗೊಂಡ ವ್ಯಾಪಾರಿ ಹಣ ನೀಡಿದ್ದಾನೆ ಎನ್ನಲಾಗಿದೆ.

ಕಚೇರಿಯಲ್ಲೇ ಹಣ ಇಟ್ಟು ಲಾಕ್!
ಹಣ ಪಡೆದ ಬಳಿಕ, ವಿಚಾರ ಯಾರಿಗಾದರೂ ತಿಳಿಸಿದರೆ ಮತ್ತೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಆದರೆ ಆರೋಪಿಗಳು ಆ ಹಣವನ್ನು ಮನೆಗೆ ತೆಗೆದುಕೊಂಡು ಹೋಗದೆ ಕಚೇರಿಯಲ್ಲಿಯೇ ಇಟ್ಟುಕೊಂಡಿದ್ದರು. ಇದೇ ವೇಳೆ ಜಿಎಸ್‌ಟಿ ಅಧಿಕಾರಿಗಳ ಪರಿಶೀಲನೆಯ ಸಂದರ್ಭದಲ್ಲಿ ಐದು ಲಕ್ಷ ರೂಪಾಯಿ ಪತ್ತೆಯಾಗಿ ಅನುಮಾನ ಮೂಡಿದೆ. ವಿಚಾರಣೆ ನಡೆಸಿದಾಗ ಆರೋಪಿಗಳು ಕೃತ್ಯವನ್ನು ಒಪ್ಪಿಕೊಂಡಿದ್ದಾರೆ.

ಈ ಸಂಬಂಧ ಜಿಎಸ್‌ಟಿ ಸೂಪರಿಂಟೆಂಡೆಂಟ್ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿ ಇಬ್ಬರನ್ನೂ ಬಂಧಿಸಿದ್ದಾರೆ. ನಕಲಿ ಗುರುತಿನ ಚೀಟಿ ತಯಾರಿಸಲು ಇನ್ನಾರದರೂ ಸಹಾಯ ಮಾಡಿದ್ದಾರೆ? ಇಂತಹ ಕೃತ್ಯವನ್ನು ಇದಕ್ಕೂ ಮೊದಲು ನಡೆಸಿದ್ದಾರೆಯೇ? ಎಂಬ ಕುರಿತು ತನಿಖೆ ಮುಂದುವರಿದಿದೆ.

ಅಧಿಕಾರಿಗಳ ಹೆಸರಿನಲ್ಲಿ ಯಾರಾದರೂ ಹಣದ ಬೇಡಿಕೆ ಇಟ್ಟಲ್ಲಿ ಸಾರ್ವಜನಿಕರು ಸಂಬಂಧಿತ ಕಚೇರಿಯೊಂದಿಗೆ ದೃಢಪಡಿಸಿಕೊಳ್ಳುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Share This Article