Ad image

ಬೆಂಗಳೂರಲ್ಲಿ ಮತ್ತೆ ಹರಿದ ನೆತ್ತರು; ತಾಯಿ ಮುಂದೆಯೇ ರೌಡಿಶೀಟರ್ ಬರ್ಬರ ಹ*

Team SanjeMugilu
2 Min Read

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಮತ್ತೆ ನೆತ್ತರು ಹರಿದಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಪವನ್ ಕುಮಾರ್ (25) ಎಂಬಾತನನ್ನ ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ವರದಿ ಆಗಿದೆ. ಥಣಿಸಂದ್ರದ ಅಮರಜ್ಯೋತಿ ಲೇಔಟ್​​ನಲ್ಲಿ ಕೊಲೆ ಘಟನೆ ನಡೆದಿದ್ದು. ದುಷ್ಕರ್ಮಿಗಳು ನನ್ನ ಮುಂದೆಯೇ ನನ್ನ ಮಗನನ್ನ ಕೊಂದಿದ್ದಾರೆ ಎಂದು ಪವನ್​ ತಾಯಿ ಕಣ್ಣೀರು ಹಾಕಿದ್ದಾರೆ. ರೌಡಿಶೀಟರ್​ ಪವನ್ ಕುಮಾರ್ ಕೊಲೆ ಹಿಂದಿದ್ಯಾ ಸೇಡಿನ ಕಿಚ್ಚು?
ಬೆಂಗಳೂರಿನಲ್ಲಿ ರೌಡಿಗಳ ಅಬ್ಬರ ಹೆಚ್ಚುತ್ತಿದೆ. ಥಣಿಸಂದ್ರದ ಅಮರಜ್ಯೋತಿ ಲೇಔಟ್​​ನಲ್ಲಿ ನಿನ್ನೆ (ಫೆ.25) ಸಂಜೆ ರೌಡಿಶೀಟರ್ ಪವನ್ ಕುಮಾರ್ ಎಂಬಾತನ ಬರ್ಬರ ಕೊಲೆ ಕಂಡು ಜನರು ಬೆಚ್ಚಿಬಿದ್ದಿದ್ದಾರೆ. ವಿಷಯ ಗೊತ್ತಾಗ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾಯಿ ಮುಂದೆಯೇ ಮಗನ ಕೊಲೆ
ಬೇಕರಿ ಮುಚ್ಚಿ ಮನೆಗೆ ಹೋಗ್ತಿದ್ದ ಪವನ್ ಮೇಲೆ ಅಟ್ಯಾಕ್ ನಡೆದಿದ್ದು, ತಾಯಿ ಮುಂದೆಯೇ ಆತನನ್ನ ಬರ್ಬರವಾಗಿ ಕೊಲೆಗೈದಿದ್ದಾರೆ ಎನ್ನಲಾಗ್ತಿದೆ. ಘಟನೆ ಬಗ್ಗೆ ಮೃತ ಪವನ್ ತಾಯಿ ಕೆಲ ಮಾಹಿತಿ ನೀಡಿದ್ದಾರೆ. ಮೂರು ಬೈಕ್ ನಲ್ಲಿ ಬಂದಿದ್ದ ಆರು ಜನರು ಪವನ್ ಮೇಲೆ ಅಟ್ಯಾಕ್​​ ಮಾಡಿದ್ದು, ಆರೋಪಿಗಳೆಲ್ಲಾ ಹೆಲ್ಮೆಟ್ ಹಾಕಿಕೊಂಡು ಬಂದು ಕೊಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ
ನನ್ನನ್ನ ಕೊಲೆ ಮಾಡ್ತಾರೆ ಅಮ್ಮ ಎಂದಿದ್ದ ಪವನ್​
ಪ್ರೇಮ್ ಎಂಬಾತ ನನ್ನನ್ನ ಕೊಲೆ ಮಾಡಿಸ್ತಾನೆ ಎಂದು ಪವನ್ ಕುಮಾರ್​ ತನ್ನ ತಾಯಿ ಬಳಿ ಹೇಳಿದ್ದನಂತೆ. ಕೆಲವರು ಬಂದು ನನ್ನ ಮುಂದೆಯೇ ನನ್ನ ಮಗನನ್ನ ಕೊಲೆ ಮಾಡಿದ್ರು ಎನ್ನುತ್ತಾ ತಾಯಿ ಕೋಮಲ ಕಣ್ಣೀರು ಹಾಕಿದ್ದಾರೆ.
ಜೈಲಿಗೆ ಹೋಗಿ ಬಂದಿದ್ದ ಪವನ್
ರೌಡಿಶೀಟರ್​ ಪವನ್ ಕುಮಾರ್ ಈ ಹಿಂದೆ ಮರ್ಡರ್ ಕೇಸ್ ಒಂದರಲ್ಲಿ ಜೈಲಿಗೆ ಹೋಗಿ ಬಂದಿದ್ದ. ಕಳೆದ ವರ್ಷ ಮೇ ನಲ್ಲಿ ಜೈಲಿನಿಂದ ರಿಲೀಸ್ ಆಗಿ ಬಂದಿದ್ದ. ಒಂದೂವರೆ ತಿಂಗಳ ಹಿಂದಷ್ಟೇ ಮನೆಯವರು ಬೇಕರಿ ಹಾಕಿ ಕೊಟ್ಟಿದ್ರು.
ರಿವೇಂಜ್​​ಗೆ ನಡೀತಾ ಪವನ್ ಮರ್ಡರ್?
ಕಪಿಲ ಎಂಬಾತನ ಮರ್ಡರ್ ರಿವೇಂಜ್​​ಗೆ ಪವನ್ ಕುಮಾರ್ ಕೊಲೆ ನಡೆದಿದ್ಯಾ ಎಂಬ ಶಂಕೆ ವ್ಯಕ್ತವಾಗಿದೆ. ಮೂರು ವರ್ಷದ ಹಿಂದೆ ಕಪಿಲ ಎಂಬಾತನ ಕೊಲೆ ನಡೆದಿತ್ತು. ಜುಲೈ 11, 2023 ರಲ್ಲಿ ನಡೆದಿದ್ದ ಕಪಿಲ ಹತ್ಯೆ ಕೇಸ್​ನಲ್ಲಿ ಪವನ್ ಕುಮಾರ್ A5 ಆಗಿದ್ದ. ಅಂದು ಹೆಲ್ಮೆಟ್ ಹಾಕಿಕೊಂಡೇ 6 ಜನರು ಬಂದು ಮುಖ ಕೊಚ್ಚಿ ಕಪಿಲನ ಕೊಲೆ ಮಾಡಿದ್ರು. ಅದೇ ರೀತಿ ಈಗ ಹೆಲ್ಮೆಟ್ ಧರಿಸಿದ ಬಂದ ದುಷ್ಕರ್ಮಿಗಳು ಪವನ್ ಕುಮಾರ್ ಕೊಲೆ ಮಾಡಿದ್ದಾರೆ ಎನ್ನಲಾಗ್ತಿದೆ.
ಕಪಿಲನ ತಮ್ಮ ಪ್ರೇಮ್ ಸೇರಿದಂತೆ ಹಲವರ ಮೇಲೆ ಪೊಲೀಸರಿಗೆ ಅನುಮಾನ ಮೂಡಿದೆ. ಪ್ರೇಮ್ ನನ್ನನ್ನ ಫಾಲೋ ಮಾಡ್ತಿದ್ದಾನೆ ಎಂದು ತಾಯಿ ಬಳಿ ಪವನ್ ಹೇಳಿದ್ದನಂತೆ. ನಿನ್ನೆ ರಾತ್ರಿ ಬೇಕರಿ ಮುಚ್ಚಿ ಮನೆಗೆ ಬಂದಿದ್ದ ವೇಳೆ ಆರು ಜನರು ಅಟ್ಯಾಕ್ ಮಾಡಿದ್ದಾರೆ ಎನ್ನಲಾಗ್ತಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹತ್ಯೆ ಸಂಬಂಧ ಸಂಪಿಗೆಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article