Ad image

625 ಕೋಟಿ ರೂ. ದುರ್ಬಳಕೆ ಆರೋಪ.. ಸಚಿವ ಜಮೀರ್‌ಗೆ ‘ಲೋಕಾ’ ಸಂಕಷ್ಟ..!

Team SanjeMugilu
1 Min Read

ಬೆಂಗಳೂರು: ರಾಜ್ಯ ಸರ್ಕಾರದ ಮತ್ತೋರ್ವ ಸಚಿವರಿಗೆ ಇದೀಗ ಸಂಕಷ್ಟ ಎದುರಾಗಿದೆ. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಲ್ಲಿ ಬರೋಬ್ಬರಿ 625 ಕೋಟಿ ರೂಪಾಯಿಗಳ ಅನುದಾನ ದುರ್ಬಳಕೆ ಮಾಡಿಕೊಂಡಿರುವ ಗಂಭೀರ ಆರೋಪದ ಹಿನ್ನೆಲೆಯಲ್ಲಿ ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್‌ಗೆ ಲೋಕಾಯುಕ್ತದಿಂದ ನೋಟಿಸ್ ಜಾರಿಯಾಗಿದೆ.

ಏನಿದು ಆರೋಪ?
ಅಲ್ಪಸಂಖ್ಯಾತ ಕಾಲೋನಿಗಳ ಅಭಿವೃದ್ಧಿಗೆ ಮೀಸಲಾಗಿದ್ದ ಕೋಟ್ಯಂತರ ರೂಪಾಯಿ ಹಣವನ್ನು ನಿಯಮಬಾಹಿರವಾಗಿ ಬಳಸಲಾಗಿದೆ ಎಂಬುದು ಸಚಿವ ಜಮೀರ್ ಮೇಲಿರುವ ಪ್ರಮುಖ ಆರೋಪ. ಸರ್ಕಾರದ ಆರ್ಥಿಕ ಇಲಾಖೆಯ  ಯಾವುದೇ ಪೂರ್ವಾನುಮತಿ ಪಡೆಯದೆ, ಗುತ್ತಿಗೆದಾರರ ಜೊತೆ ಶಾಮೀಲಾಗಿ ಈ ಬೃಹತ್ ಮೊತ್ತದ (625 ಕೋಟಿ ರೂ.) ಕಾಮಗಾರಿಗಳನ್ನು ಹಂಚಿಕೆ ಮಾಡಿ, ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ದೂರಲಾಗಿದೆ.

ಲೋಕಾಯುಕ್ತ ಮೆಟ್ಟಿಲೇರಿದ್ದ ಜೆಡಿಎಸ್
ಅಲ್ಪಸಂಖ್ಯಾತ ಕಾಲೋನಿ ಅಭಿವೃದ್ಧಿ ಹೆಸರಿನಲ್ಲಿ ನಡೆದಿರುವ ಈ ಬೃಹತ್ ಹಗರಣದ ಕುರಿತು ಜೆಡಿಎಸ್  ವಕ್ತಾರರಾದ ಪ್ರದೀಪ್ ಕುಮಾರ್ ಅವರು ಅಗತ್ಯ ದಾಖಲೆಗಳೊಂದಿಗೆ ಲೋಕಾಯುಕ್ತಕ್ಕೆ ಅಧಿಕೃತವಾಗಿ ದೂರು ಸಲ್ಲಿಕೆ ಮಾಡಿದ್ದರು. ಸಚಿವರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.

ದೂರು ಸ್ವೀಕರಿಸಿರುವ ಲೋಕಾಯುಕ್ತರು, ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಅಧಿಕೃತ ನೋಟಿಸ್ ಜಾರಿ ಮಾಡಿದ್ದಾರೆ. ತಮ್ಮ ಮೇಲಿನ ಹಣ ದುರ್ಬಳಕೆ ಆರೋಪಗಳಿಗೆ ಸಂಬಂಧಿಸಿದಂತೆ ಸಮಗ್ರ ವಿವರಣೆ ನೀಡುವಂತೆ ಸೂಚಿಸಲಾಗಿದೆ. ತಮ್ಮ ಉತ್ತರವನ್ನು ಎರಡು ಪ್ರತಿಗಳಲ್ಲಿ  ಸಲ್ಲಿಸುವಂತೆ ಲೋಕಾಯುಕ್ತರು ನೋಟಿಸ್‌ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.

ಟೈಂ ಕೇಳಿದ ಜಮೀರ್ ವಕೀಲರು
ಲೋಕಾಯುಕ್ತ ನೋಟಿಸ್ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸಚಿವ ಜಮೀರ್ ಅಹ್ಮದ್, ತಮ್ಮ ವಕೀಲರ ಮೂಲಕ ಪ್ರತಿಕ್ರಿಯಿಸಿದ್ದಾರೆ. ದೂರಿನಲ್ಲಿರುವ ಆರೋಪಗಳಿಗೆ ಸಂಬಂಧಿಸಿದಂತೆ ವಿವರವಾದ ಉತ್ತರ ಹಾಗೂ ದಾಖಲೆಗಳನ್ನು ಒದಗಿಸಲು ಇನ್ನಷ್ಟು ಕಾಲಾವಕಾಶ ನೀಡುವಂತೆ ಜಮೀರ್ ಪರ ವಕೀಲರು ಲೋಕಾಯುಕ್ತರಿಗೆ ಮನವಿ ಮಾಡಿದ್ದಾರೆ.

Share This Article