Ad image

ಡಿಕೆಶಿ ಕನಸಿನ ಕೂಸಿಗೆ ಸಿಎಂ ಅಭಯ! ಬರೋಬ್ಬರಿ 60 ಸಾವಿರ ಕೋಟಿ ಮೀಸಲು!

Team SanjeMugilu
2 Min Read

ಕರುನಾಡಿನ 2026-27ನೇ ಸಾಲಿನ ಬಜೆಟ್  ಅಖಾಡ ಭಾರಿ ಕೌತುಕ ಮೂಡಿಸಿದ್ದು, ದೊಡ್ಡ ಸಾಲದ ಹೊರೆ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರು ಬೃಹತ್ ಆರ್ಥಿಕ ಲೆಕ್ಕಾಚಾರ ಮುಂದಿಟ್ಟಿದ್ದಾರೆ. ದೊಡ್ಡ ಬಜೆಟ್, ದೊಡ್ಡ ಸವಾಲುಗಳ  ಮಧ್ಯೆಯೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ‘ಬ್ರ್ಯಾಂಡ್ ಬೆಂಗಳೂರು’ ಪ್ರಾಜೆಕ್ಟ್‌ಗೆ ಭರ್ಜರಿ ಆರ್ಥಿಕ ಬಲ ಸಿಕ್ಕಿದೆ. ರಾಜಧಾನಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಬರೋಬ್ಬರಿ 60 ಸಾವಿರ ಕೋಟಿ ರೂಪಾಯಿಗಳ ಬೃಹತ್ ಮೊತ್ತವನ್ನು ಮೀಸಲಿಡುವ ಮೂಲಕ, ಸಿಲಿಕಾನ್ ಸಿಟಿಯ ಟ್ರಾಫಿಕ್ ಮುಕ್ತ ಕನಸಿಗೆ ಸಿಎಂ ಅಭಯ ಹಸ್ತ ನೀಡಿದ್ದಾರೆ.
ಬೆಂಗಳೂರಿನ ಟ್ರಾಫಿಕ್ ಅಂದ್ರೆ ಪ್ರಪಂಚದಾದ್ಯಂತ ಫೇಮಸ್! ಈ ಕಿರಿಕಿರಿಯಿಂದ ಸಿಟಿ ಜನರನ್ನು ಪಾರು ಮಾಡೋಕೆ, ಸಿಟಿಯಾದ್ಯಂತ ಸಾಕಷ್ಟು ‘ಅಂಡರ್‌ಗ್ರೌಂಡ್ ಬ್ರಿಡ್ಜ್’ (ಸುರಂಗ ರಸ್ತೆಗಳು ಮತ್ತು ಅಂಡರ್‌ಪಾಸ್‌) ನಿರ್ಮಾಣ ಮಾಡಲೇಬೇಕು ಅನ್ನೋದು ಡಿಕೆಶಿ ಅವರ ಬಹುದೊಡ್ಡ ಕನಸಾಗಿತ್ತು. ಇದೀಗ ಆ ಬಿಗ್ ಡ್ರೀಮ್‌ಗೆ ಸಿಎಂ ಸಿದ್ದರಾಮಯ್ಯ ಸಾಥ್ ಕೊಟ್ಟಿದ್ದು, ಬಜೆಟ್‌ನಲ್ಲಿ ಈ ಯೋಜನೆಗೆ ಸಂಪೂರ್ಣ ಬೆಂಬಲ ಹಾಗೂ ಅನುದಾನ ಘೋಷಿಸಿದ್ದಾರೆ.
ಹೆಬ್ಬಾಳ ಟ್ರಾಫಿಕ್‌ಗೆ ಮುಕ್ತಿ: 2250 ಕೋಟಿ ವೆಚ್ಚದ ಬೃಹತ್ ಫ್ಲೈಓವರ್!
ಬೆಂಗಳೂರಿನಲ್ಲಿ ಅತಿ ಹೆಚ್ಚು ಟ್ರಾಫಿಕ್ ಜಾಮ್ ಆಗುವ ಡೆಡ್ಲಿ ಏರಿಯಾಗಳಲ್ಲಿ ಹೆಬ್ಬಾಳ ಜಂಕ್ಷನ್ ನಂಬರ್ ಒನ್. ಏರ್‌ಪೋರ್ಟ್‌ಗೆ ಹೋಗುವವರ ಪರದಾಟ ತಪ್ಪಿಸಲು ಹಾಗೂ ವಾಹನ ದಟ್ಟಣೆ ಕರಗಿಸಲು, ಹೆಬ್ಬಾಳ ಜಂಕ್ಷನ್‌ನಿಂದ ಮೇಖ್ರಿ ಸರ್ಕಲ್‌ವರೆಗೆ ಹೊಸದಾಗಿ ಬೃಹತ್ ಮೇಲು ಸೇತುವೆ (ಫ್ಲೈಓವರ್) ರಸ್ತೆಯನ್ನು ನಿರ್ಮಿಸಲು ಸರ್ಕಾರ ಭರ್ಜರಿ ಪ್ಲಾನ್ ಮಾಡಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (BDA) ವತಿಯಿಂದ ಬರೋಬ್ಬರಿ 2250 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಹೈಟೆಕ್ ಮಾರ್ಗ ತಲೆ ಎತ್ತಲಿದೆ.
ಹೊರವರ್ತುಲ ರಸ್ತೆ ಕಮಾಲ್: ನೆಲಮಂಗಲ ಟು ಬಿಡದಿ ಟ್ರಾಫಿಕ್ ಫ್ರೀ!
ಸಿಟಿ ಒಳಗೆ ನುಗ್ಗುವ ಭಾರಿ ವಾಹನಗಳನ್ನು ಹೊರಗಡೆಯೇ ಡೈವರ್ಟ್ ಮಾಡಲು ಸರ್ಕಾರ ಮತ್ತೊಂದು ಮಾಸ್ಟರ್ ಸ್ಟ್ರೋಕ್ ಕೊಟ್ಟಿದೆ. ಬೆಂಗಳೂರು ನಗರ ದಟ್ಟಣೆಯನ್ನು ಸಂಪೂರ್ಣವಾಗಿ ಇಳಿಸಲು ‘ನೆಲಮಂಗಲ-ಬಿಡದಿ ಮಧ್ಯಂತರ ವರ್ತುಲ ರಸ್ತೆ’  ನಿರ್ಮಾಣ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ವಿಶೇಷ ಅಂದ್ರೆ, ಸ್ಥಳೀಯ ಯೋಜನೆ ಪ್ರಾಧಿಕಾರಿಗಳ ಆರ್ಥಿಕ ಸಂಪನ್ಮೂಲಗಳನ್ನು ಬಳಸಿಕೊಂಡೇ ಈ ಬೃಹತ್ ರಸ್ತೆಯನ್ನು ನಿರ್ಮಿಸುವ ಐಡಿಯಾ ಮಾಡಲಾಗಿದೆ.
60 ಸಾವಿರ ಕೋಟಿಯ ಮ್ಯಾಜಿಕ್ ವರ್ಕೌಟ್ ಆಗುತ್ತಾ?
ಒಂದೆಡೆ ರಾಜ್ಯದ ಮೇಲೆ ಸಾವಿರಾರು ಕೋಟಿ ರೂಪಾಯಿಗಳ ಸಾಲದ ಬುದ್ಧಿದೆ. ಗ್ಯಾರಂಟಿ ಯೋಜನೆಗಳಿಗೆ ದಿನ ಬೆಳಗಾದರೆ ಹಣ ಹೊಂದಿಸುವ ಆತಂಕವೂ ಇದೆ. ಇಂಥ ದೊಡ್ಡ ಸವಾಲುಗಳ ನಡುವೆಯೂ ಕೇವಲ ಬೆಂಗಳೂರಿನ ಅಭಿವೃದ್ಧಿಗಾಗಿ ಬರೋಬ್ಬರಿ 60 ಸಾವಿರ ಕೋಟಿ ರೂ. ಒದಗಿಸಿರುವುದು ನಿಜಕ್ಕೂ ರಾಜ್ಯ ಸರ್ಕಾರದ ದೊಡ್ಡ ಸಾಹಸವೇ ಸರಿ.
ಡಿಕೆಶಿ ಅವರ ‘ಬ್ರ್ಯಾಂಡ್ ಬೆಂಗಳೂರು’ ದೃಷ್ಟಿಕೋಣ ಮತ್ತು ಸಿದ್ದರಾಮಯ್ಯ ಅವರ ಹಣಕಾಸು ಲೆಕ್ಕಾಚಾರ ಒಟ್ಟಿಗೆ ಸೇರಿ, ಮುಂದಿನ ದಿನಗಳಲ್ಲಿ ನಮ್ಮ ಸಿಲಿಕಾನ್ ಸಿಟಿಯ ಚಿತ್ರಣವನ್ನೇ ಬದಲಾಯಿಸುತ್ತಾ ಇರಬಹುದು ಅನ್ನೋದನ್ನು ಕಾದು ನೋಡಬೇಕಿದೆ.

Share This Article