Ad image

ಬಿಸಿಲಿನ ತಾಪಕ್ಕೆ ‘ಬೆಂದಕಾಳೂರು’ ವಿಲ ವಿಲ! ಮಣ್ಣಿನ ಮಡಿಕೆಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್

Team SanjeMugilu
1 Min Read

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು  ಸೇರಿದಂತೆ ರಾಜ್ಯದೆಲ್ಲೆಡೆ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜನರು ಬಿಸಿಲಿನ ತಾಪದಿಂದ ತತ್ತರಿಸಿ ಹೋಗಿದ್ದಾರೆ. ಫೆಬ್ರವರಿಯಿಂದಲೇ ಆರಂಭವಾದ ಬೇಸಿಗೆಯ ತಾಪ ಇನ್ನೂ ಕಡಿಮೆಯಾಗದೇ ಇರುವ ಹಿನ್ನೆಲೆ, ತಂಪಿಗಾಗಿ ಜನರು ಮಣ್ಣಿನ ಮಡಿಕೆ ಮತ್ತು ಎಳನೀರಿನ ಮೊರೆ ಹೋಗುತ್ತಿರುವ ದೃಶ್ಯಗಳು ಮಾರುಕಟ್ಟೆಗಳಲ್ಲಿ ಕಂಡು ಬರುತ್ತಿವೆ.

ಮಣ್ಣಿನ ಮಡಿಕೆ, ಎಳನೀರಿಗೆ ಹೆಚ್ಚಿನ ಬೇಡಿಕೆ
ಬೇಸಿಗೆ ಕಾಲ ಆರಂಭವಾದಾಗಲೇ ಬೆಂಗಳೂರಿನ ಜನರು ಮಣ್ಣಿನ ಮಡಿಕೆ ಬಳಕೆಗೆ ಹೆಚ್ಚಿನ ಒತ್ತು ನೀಡುತ್ತಾರೆ. ಈ ಬಾರಿ ಕೂಡ ಮಣ್ಣಿನ ಮಡಿಕೆಗಳಿಗೆ ಭಾರೀ ಬೇಡಿಕೆ ಕಂಡು ಬಂದಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಮಡಿಕೆ ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಮಾರುಕಟ್ಟೆಯಲ್ಲಿ ಬಣ್ಣ ಬಣ್ಣದ ಮಡಿಕೆಗಳು, ಟ್ಯಾಪ್ ಹೊಂದಿರುವ ಮಡಿಕೆಗಳು, ಮಣ್ಣಿನ ಲೋಟಗಳು ಮತ್ತು ಆಕರ್ಷಕ ವಿನ್ಯಾಸದ ಬಾಟಲ್‌ಗಳು ಜನರನ್ನು ಸೆಳೆಯುತ್ತಿವೆ. ಮಡಿಕೆಗಳ ಬೆಲೆ 300 ರೂಪಾಯಿಯಿಂದ 1500 ರೂಪಾಯಿ ವರೆಗೆ ಮಾರಾಟವಾಗುತ್ತಿದ್ದು, ಆರೋಗ್ಯಕರವಾಗಿರುವ ಕಾರಣ ಜನರು ಹೆಚ್ಚಾಗಿ ಖರೀದಿಸುತ್ತಿದ್ದಾರೆ.

ಇನ್ನೊಂದೆಡೆ, ಬಿಸಿಲಿನ ತಾಪ ಹೆಚ್ಚಾದ ಹಿನ್ನೆಲೆಯಲ್ಲಿ ಎಳನೀರಿನ ಬೇಡಿಕೆಯೂ ಹೆಚ್ಚಾಗಿದೆ. ಸಾಮಾನ್ಯವಾಗಿ 20 ರಿಂದ 30 ರೂಪಾಯಿಗೆ ಸಿಗುತ್ತಿದ್ದ ಎಳನೀರು ಈಗ 60 ರಿಂದ 70 ರೂಪಾಯಿವರೆಗೆ ಮಾರಾಟವಾಗುತ್ತಿದೆ. ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಜನರು ಎಳನೀರು ಸೇವಿಸುವತ್ತ ಹೆಚ್ಚು ಒಲವು ತೋರಿಸುತ್ತಿದ್ದಾರೆ.

ಒಟ್ಟಿನಲ್ಲಿ ಬಿಸಿಲಿನ ತಾಪಮಾನ ಹೆಚ್ಚುತ್ತಿರುವುದರಿಂದ ಜನರು ತಂಪು ನೀಡುವ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದ್ದು, ಮಣ್ಣಿನ ಮಡಿಕೆ ಮತ್ತು ಎಳನೀರಿನ ಮಾರಾಟದಲ್ಲಿ ಏರಿಕೆ ಕಂಡುಬರುತ್ತಿದೆ. ಮುಂದಿನ ದಿನಗಳಲ್ಲಿ ಬಿಸಿಲಿನ ತಾಪ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಆರೋಗ್ಯದ ಬಗ್ಗೆ ಜನರು ಹೆಚ್ಚಿನ ಜಾಗ್ರತೆ ವಹಿಸುವ ಅಗತ್ಯವಿದೆ.

Share This Article