ನವದೆಹಲಿ: ವೇತನ ಮತ್ತು ಭತ್ಯೆಗಳನ್ನು ಹೆಚ್ಚಿಸುವಂತೆ ಸಂಸದರು ಆಗಾಗ ಸದನದಲ್ಲಿ ಕೂಗು ಕೇಳಿರಬರುತ್ತೆ. ಆದರೆ ಈ ಇಬ್ಬರು ಸಂಸದರು ತಮಗೆ ವೇತನವೂ ಬೇಡ, ಸರ್ಕಾರಿ ಸೌಲಭ್ಯಗಳು ಬೇಡ ಎಂದು ನಿರಾಕರಿಸಿರುವುದು ಅಚ್ಚರಿ ಮೂಡಿಸಿದೆ. ಲೋಕಸಭೆಯಲ್ಲಿ ಕೇವಲ ಇಬ್ಬರು ಸಂಸದರು (ಬಿಜೆಪಿಯಿಂದ ಒಬ್ಬರು ಮತ್ತು ಕಾಂಗ್ರೆಸ್‌ನಿಂದ ಒಬ್ಬರು) ತಮ್ಮ ಸಂಬಳವನ್ನು ಪಡೆಯದಿರಲು ನಿರ್ಧರಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕುರುಕ್ಷೇತ್ರದ ಬಿಜೆಪಿ ಸಂಸದ ನವೀನ್ ಜಿಂದಾಲ್ ಮತ್ತು ಇನ್ನರ್ ಮಣಿಪುರದ ಕಾಂಗ್ರೆಸ್ ಸಂಸದ ಡಾ. ಬಿಮೋಲ್ ಅಕೋಯಿಜಮ್ ಅಂಗೋಮ್ಚಾ ಈ ಇಬ್ಬರು ವೇತನ ಪಡೆಯಲು ನಿರಾಕರಿಸಿದ್ದಾರೆ. ಲೋಕಸಭಾ ಸಚಿವಾಲಯವು ನವೀನ್ ಜಿಂದಾಲ್ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಸಂಬಳವನ್ನು ಮಾತ್ರವಲ್ಲದೆ ಎಲ್ಲಾ ಸರ್ಕಾರಿ ಭತ್ಯೆಗಳು ಮತ್ತು ಸವಲತ್ತುಗಳನ್ನು ಸಂಪೂರ್ಣವಾಗಿ ಬೇಡ ಎಂದಿದ್ದಾರೆ. ಕುರುಕ್ಷೇತ್ರದಿಂದ ಇಂಫಾಲ್‌ವರೆಗಿನ ಎರಡು ವೈವಿಧ್ಯಮಯ ಕ್ಷೇತ್ರಗಳ ಪ್ರತಿನಿಧಿಗಳು ಈ ಕೆಲಸ ಮಾಡಿದ್ದಾರೆ.
ತಮ್ಮ ಸಂಬಳ ಮತ್ತು ಭತ್ಯೆಗಳನ್ನು ತ್ಯಜಿಸಿದ ಸಂಸದರ ಆರ್ಥಿಕ ಸ್ಥಿತಿಯಲ್ಲಿ ಭಾರಿ ವ್ಯತ್ಯಾಸವಿದೆ. ನವೀನ್ ಜಿಂದಾಲ್ 1,241 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ ಮತ್ತು ಲೋಕಸಭೆಯ ಅತ್ಯಂತ ಶ್ರೀಮಂತ ಸಂಸದರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಡಾ. ಬಿಮೋಲ್ ಅಕೋಯಿಜಮ್ ಸುಮಾರು 97 ಲಕ್ಷ ರೂ. ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ.
ಈ ಆರ್ಥಿಕ ಅಸಮಾನತೆಯ ಹೊರತಾಗಿಯೂ, ಇಬ್ಬರೂ ಸಾರ್ವಜನಿಕ ಸೇವೆಗಾಗಿ ಸಂಬಳವನ್ನು ಸ್ವೀಕರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ಜಿಂದಾಲ್ ಖಂಡಿತವಾಗಿಯೂ ಶ್ರೀಮಂತರು, ಆದರೆ ಅವರು ಸದನದ ಅತ್ಯಂತ ಶ್ರೀಮಂತ ಸಂಸದರಲ್ಲ, ಗುಂಟೂರಿನ ಟಿಡಿಪಿ ಸಂಸದ ಡಾ. ಚಂದ್ರಶೇಖರ್ ಪೆಮ್ಮಸಾನಿ ಅತ್ಯಂತ ಶ್ರೀಮಂತ ಸಂಸದರಾಗಿದ್ದು, 5,705 ಕೋಟಿ ರೂ. ಹೆಚ್ಚು ಆಸ್ತಿ ಹೊಂದಿದ್ದಾರೆ.
ಚೆವೆಲ್ಲಾದ ಬಿಜೆಪಿ ಸಂಸದ ಕೊಂಡ ವಿಶ್ವೇಶ್ವರ ರೆಡ್ಡಿ 4,568 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. 543 ಲೋಕಸಭಾ ಸ್ಥಾನಗಳಲ್ಲಿ ಎರಡು ಸ್ಥಾನಗಳು ಪ್ರಸ್ತುತ ಖಾಲಿಯಾಗಿವೆ ಎಂದು ಆರ್‌ಟಿಐ ಬಹಿರಂಗಪಡಿಸಿದೆ. ಲೋಕಸಭೆಯ 481 ಹಾಲಿ ಸದಸ್ಯರು ಪ್ರಸ್ತುತ ಸಂಬಳ ಪಡೆಯುತ್ತಿದ್ದಾರೆ.
