ಮೃತ ಕಾರ್ಮಿಕರನ್ನು ಇಂದ್ರಜಿ ಸದಾ (32), ಭಾಗೀರಥ್ ಗೋಪಿ, ಛೋಟೆಲಾಲ್ ಸದಾ (37), ಶಿವಶಂಕರ್ (31), ಶಿವಕಾಂತ್ ಚೌಧರಿ (47) ಮತ್ತು ಮಂಗಾತ್ರಮ್ (32) ಎಂದು ಗುರುತಿಸಲಾಗಿದ್ದು, ಇನೋರ್ವ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.
ಅಧಿಕಾರಿಗಳ ಮಾಹಿತಿ ಪ್ರಕಾರ, ಸೋಮವಾರ (ಮಾ.9) ರಾತ್ರಿ 7 ಗಂಟೆ ಸುಮಾರಿಗೆ ಅವಘಡ ಸಂಭವಿಸಿದೆ. ಸುಮಾರು 12-15 ಕಾರ್ಮಿಕರ ಗುಂಪು ಒಳಚರಂಡಿ ಸಂಸ್ಕರಣಾ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಗೋಡೆ ಕುಸಿದಿದ್ದು, ಕಾರ್ಮಿಕರು ಅವಶೇಷಗಳು ಹಾಗೂ ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದ್ದರು. 9:30 ಸುಮಾರಿಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF) ಮತ್ತು ಅಗ್ನಿಶಾಮಕ ದಳ ರಕ್ಷಣಾ ಕಾರ್ಯ ಆರಂಭಿಸಿದವು ಎಂದು ತಿಳಿಸಿದ್ದಾರೆ.
ಈವರೆಗೆ ಏಳು ಕಾರ್ಮಿಕರ ಶವಗಳನ್ನು ಹೊರತೆಗೆಯಲಾಗಿದ್ದು, ಅವರ ಬಳಿಯಿದ್ದ ಗುರುತಿನ ಚೀಟಿ ಆಧಾರದ ಮೇಲೆ ಕಾರ್ಮಿಕರ ಮಾಹಿತಿ ಪತ್ತೆ ಹಚ್ಚಲಾಗಿದೆ. ಇನ್ನೂ ಗಂಭೀರವಾಗಿ ಗಾಯಗೊಂಡ ಐವರು ಕಾರ್ಮಿಕರನ್ನು ರಾಜಸ್ಥಾನದ ಭಿವಾಡಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಸದ್ಯ ಪೊಲೀಸರು ಗೋಡೆ ಕುಸಿತಕ್ಕೆ ಕಾರಣವೇನು ಎಂಬುವುದನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದ್ದಾರೆ.
