Ad image

ಸಿಲಿಕಾನ್ ಸಿಟಿಗೆ ‘ಗ್ಯಾಸ್’ ಟ್ರಬಲ್’: ಹೋಟೆಲ್, ಪಿಜಿ, ಇಂದಿರಾ ಕ್ಯಾಂಟೀನ್ ಬಂದ್..!

Team SanjeMugilu
2 Min Read

ಬೆಂಗಳೂರು: ಸಿಲಿಂಡರ್ ಅಭಾವ ರಾಜಧಾನಿ ಬೆಂಗಳೂರಿನ ಜನತೆಯನ್ನು ಅಕ್ಷರಶಃ ಕಂಗಾಲಾಗಿಸಿದೆ. ಗೃಹಬಳಕೆ ಮಾತ್ರವಲ್ಲದೆ ವಾಣಿಜ್ಯ ಸಿಲಿಂಡರ್‌ಗಳ ತೀವ್ರ ಕೊರತೆಯಿಂದಾಗಿ ಹೋಟೆಲ್, ಪಿಜಿ, ಬೇಕರಿ ಹಾಗೂ ಇಂದಿರಾ ಕ್ಯಾಂಟೀನ್‌ಗಳ ದೈನಂದಿನ ಕಾರ್ಯಚಟುವಟಿಕೆಗಳು ಸಂಪೂರ್ಣ ಅಸ್ತವ್ಯಸ್ತವಾಗಿವೆ. ಸಿಲಿಕಾನ್ ಸಿಟಿ ಮತ್ತೆ ಸಹಜ ಸ್ಥಿತಿಯತ್ತ ಮರಳುವುದು ಯಾವಾಗ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.

ಕಾಳಸಂತೆಯಲ್ಲಿ ಗ್ಯಾಸ್ ಖರೀದಿ!
ಗ್ಯಾಸ್ ಅಭಾವದಿಂದಾಗಿ ನಗರದ ಬಹುತೇಕ ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳು ಬಾಗಿಲು ಹಾಕಿವೆ. ವಾಣಿಜ್ಯ ಗ್ಯಾಸ್ ಪೂರೈಕೆಯಾಗುವವರೆಗೂ ಹೋಟೆಲ್ ತೆರೆಯುವುದು ಅನುಮಾನ ಎನ್ನಲಾಗಿದೆ. ಹೋಟೆಲ್ ಬಂದ್ ಆಗಿರುವುದರಿಂದ ಮಾಲೀಕರು ಸಿಬ್ಬಂದಿಗೆ ಸಂಬಳ ಹಾಗೂ ಊಟ ನೀಡಲಾಗದೆ ಪರದಾಡುತ್ತಿದ್ದಾರೆ. ಕೆಲ ಹೋಟೆಲ್ ಮಾಲೀಕರು ಅನಿವಾರ್ಯವಾಗಿ ಕಾಳಸಂತೆಯಲ್ಲಿ ದುಪ್ಪಟ್ಟು ಬೆಲೆ ಕೊಟ್ಟು ಗ್ಯಾಸ್ ತಂದು ಅಡುಗೆ ಮಾಡುತ್ತಿದ್ದಾರೆ.

ಈ ನಡುವೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ಪ್ರತಿಕ್ರಿಯಿಸಿದ್ದು, ಅಸೋಸಿಯೇಷನ್ ಸಭೆ ನಡೆಸಿ ಬಂದ್ ಆಗಿರುವ ಹೋಟೆಲ್‌ಗಳನ್ನು ತೆರೆಯುವ ಬಗ್ಗೆ ಶೀಘ್ರವೇ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ.

ಸೆಲ್ಫ್ ಕುಕ್ಕಿಂಗ್‌ಗೆ ಬ್ರೇಕ್!
ಐಟಿ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ವಾಸಿಸುವ ಪಿಜಿಗಳ ಪರಿಸ್ಥಿತಿ ಹೇಳತೀರದಾಗಿದೆ. ಸಿಲಿಂಡರ್ ಉಳಿಸುವ ಸಲುವಾಗಿ ಪಿಜಿ ಮಾಲೀಕರು ನಾನಾ ಕಸರತ್ತು ನಡೆಸುತ್ತಿದ್ದಾರೆ. ಬೆಳಗ್ಗೆಯೇ ಬಲ್ಕ್ ಆಗಿ ಅಡುಗೆ ಮಾಡಿ, ಮಧ್ಯಾಹ್ನಕ್ಕೂ ಅದೇ ಊಟವನ್ನು ನೀಡಲಾಗುತ್ತಿದೆ. ಕೆಲವೆಡೆ ಊಟದ ಬದಲು ಕೇವಲ ಬ್ರೆಡ್-ಜಾಮ್ ನೀಡಿ ಕೈತೊಳೆದುಕೊಳ್ಳಲಾಗುತ್ತಿದೆ. ಪಿಜಿಗಳಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗಿದ್ದ ‘ಸೆಲ್ಫ್ ಕುಕ್ಕಿಂಗ್’ (ಸ್ವಂತ ಅಡುಗೆ) ವ್ಯವಸ್ಥೆಯನ್ನು ಬಂದ್ ಮಾಡಲಾಗಿದೆ. ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ ಕೆಲ ಪಿಜಿಗಳು ಊಟಕ್ಕಾಗಿ ಎಕ್ಸ್‌ಟ್ರಾ ಹಣ ವಸೂಲಿ ಮಾಡುತ್ತಿರುವುದು ವರದಿಯಾಗಿದೆ.

ಬಡವರ ಹೊಟ್ಟೆಗೆ ತಣ್ಣೀರು ಬಟ್ಟೆ
ಕಡಿಮೆ ದುಡ್ಡಲ್ಲಿ ಕಾರ್ಮಿಕರು ಮತ್ತು ಬಡವರ ಹಸಿವು ನೀಗಿಸುತ್ತಿದ್ದ ಇಂದಿರಾ ಕ್ಯಾಂಟೀನ್‌ಗಳಿಗೂ ಗ್ಯಾಸ್ ಅಭಾವ ತಟ್ಟಿದೆ. ಮೆಜೆಸ್ಟಿಕ್ ಬಳಿಯ ಇಂದಿರಾ ಕ್ಯಾಂಟೀನ್‌ನಲ್ಲಿ ಕಳೆದ 2 ದಿನಗಳಿಂದ ಮಧ್ಯಾಹ್ನ ಹಾಗೂ ರಾತ್ರಿ ಊಟವನ್ನು ಸ್ಥಗಿತಗೊಳಿಸಲಾಗಿದೆ. ಬೆಳಗ್ಗಿನ ತಿಂಡಿ ಮಾತ್ರ ಲಭ್ಯವಿದ್ದು, ಊಟಕ್ಕಾಗಿ ಬರುವ ನೂರಾರು ಗ್ರಾಹಕರು ಹಸಿವಿನಿಂದಲೇ ವಾಪಸ್ ಹೋಗುವಂತಾಗಿದೆ. ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸುವಂತೆ ಜನರು ಸರ್ಕಾರದ ಮೊರೆ ಹೋಗಿದ್ದಾರೆ.

ಯುಗಾದಿ ಸಂಭ್ರಮಕ್ಕೆ ‘ಗ್ಯಾಸ್’ ಗಲಿಬಿಲಿ ಎಫೆಕ್ಟ್:
ಹಬ್ಬದ ಸೀಸನ್‌ನಲ್ಲಿ ಬೇಕರಿ ಹಾಗೂ ಸ್ವೀಟ್ ಸ್ಟಾಲ್‌ಗಳಿಗೂ ಟ್ರಬಲ್ ಶುರುವಾಗಿದೆ. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಸಿಹಿ ತಿನಿಸುಗಳ ತಯಾರಿ ಭರದಿಂದ ಸಾಗಬೇಕಿತ್ತು. ಆದರೆ, ರಾಜಾಜಿನಗರದ ಪ್ರಸಿದ್ಧ ಕರಿಗಿರಿ ಸ್ವೀಟ್ಸ್ ಸೇರಿದಂತೆ ಹಲವೆಡೆ ಕೇವಲ ಒಂದೆರಡು ಗ್ಯಾಸ್ ಸಿಲಿಂಡರ್ ಮಾತ್ರ ಉಳಿದಿರುವುದರಿಂದ ಸ್ವೀಟ್ ತಯಾರಿಕೆ ಸ್ಥಗಿತಗೊಂಡಿದೆ. ಆರ್ಡರ್ ತೆಗೆದುಕೊಳ್ಳಲಾಗದೆ ಮಾಲೀಕರು ಆತಂಕಕ್ಕೆ ಒಳಗಾಗಿದ್ದಾರೆ.

ತುಮಕೂರಿನಲ್ಲೂ ಹೋಟೆಲ್ ಕ್ಲೋಸ್
ಬೆಂಗಳೂರು ಮಾತ್ರವಲ್ಲದೆ ತುಮಕೂರಿನಲ್ಲೂ ಸಿಲಿಂಡರ್ ಇಲ್ಲದೆ ಹೋಟೆಲ್‌ಗಳು ಬಾಗಿಲು ಹಾಕುತ್ತಿವೆ. ನಿತ್ಯ ನೂರಾರು ಗ್ರಾಹಕರು ಭೇಟಿ ನೀಡುತ್ತಿದ್ದ ನಗರದ ಹೊರಪೇಟೆಯ ‘ಪ್ರಸಾದ್ ಹೋಟೆಲ್’ ಅನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಗ್ಯಾಸ್ ಬರುವವರೆಗೂ ಹೋಟೆಲ್ ಸಿಬ್ಬಂದಿಗೆ ರಜೆ ಘೋಷಿಸಲಾಗಿದೆ.

ಎಲೆಕ್ಟ್ರಿಕ್ ಸ್ಟೌವ್ ಮೊರೆ ಹೋದವರಿಗೆ ಬೆಸ್ಕಾಂ ಎಚ್ಚರಿಕೆ!
ಗ್ಯಾಸ್ ಸಿಗದೆ ಕಂಗಾಲಾದ ವ್ಯಾಪಾರಿಗಳು ವಾಣಿಜ್ಯ ಉದ್ದೇಶಗಳಿಗಾಗಿ ಎಲೆಕ್ಟ್ರಿಕ್ (ಇಂಡಕ್ಷನ್) ಸ್ಟೌವ್‌ಗಳ ಮೊರೆ ಹೋಗುತ್ತಿದ್ದಾರೆ. ಆದರೆ ಇದಕ್ಕೆ ಬೆಸ್ಕಾಂ ಕಠಿಣ ಎಚ್ಚರಿಕೆ ನೀಡಿದೆ. ಗೃಹ ಬಳಕೆಯ ವಿದ್ಯುತ್ ಸಂಪರ್ಕವನ್ನು ವಾಣಿಜ್ಯ ಹಾಗೂ ಅನ್ಯ ಉದ್ದೇಶಗಳಿಗೆ ಬಳಸುವಂತಿಲ್ಲ. ಒಂದು ವೇಳೆ ನಿಯಮ ಉಲ್ಲಂಘಿಸಿ ಕಮರ್ಷಿಯಲ್ ಉದ್ದೇಶಕ್ಕೆ ಎಲೆಕ್ಟ್ರಿಕ್ ಸ್ಟೌವ್ ಬಳಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬೆಸ್ಕಾಂ ಗ್ರಾಹಕರಿಗೆ ಖಡಕ್ ವಾರ್ನಿಂಗ್ ಕೊಟ್ಟಿದೆ.

Share This Article