ಬೆಂಗಳೂರು: ಕೇಂದ್ರ ಸರ್ಕಾರ ಹಲವು ವಸ್ತುಗಳ ಜಿಎಸ್ಟಿ ಇಳಿಸಿ ಜನ ಸಾಮಾನ್ಯರಿಗೆ ಕೊಂಚ ಹೊರೆ ಕಡಿಮೆ ಮಾಡಿದೆ ಎನ್ನುವಷ್ಟರಲ್ಲೇ ರಾಜ್ಯ ಸರ್ಕಾರ ಮತ್ತೆ ಬೆಲೆ ಏರಿಕೆ ಬಿಸಿ ಮುಟ್ಟಿಸಲು ಸಜ್ಜಾಗಿದೆ. ಇಂದಿನಿಂದ ದೇಸಿ ಹಾಲಿನ ಪ್ಯಾಕೆಟ್ ದರ ಏರಿಕೆ ಆಗಿದೆ. ಇದೀಗ ಸಾರಿಗೆ ಪ್ರಯಾಣಿಕರಿಗೆ ಶಾಕಿಂಗ್ ಸುದ್ದಿ ಹೊರಬಿದ್ದಿದೆ. ವಿದ್ಯುತ್ ದರ ಏರಿಕೆಯಂತೆ ಇನ್ಮುಂದೆ ವರ್ಷಕ್ಕೊಮ್ಮೆ ಸಾರಿಗೆ ಸಂಸ್ಥೆಗಳ ದರವನ್ನ ಏರಿಕೆ ಮಾಡಲು ಸಮಿತಿ ರೂಪಿಸಲಾಗಿದೆ.
ಸಾರಿಗೆ ಪ್ರಯಾಣಿಕೆಗೆ ಮತ್ತೊಂದು ಶಾಕ್!
ಕೆಲ ವರ್ಷಗಳಿಗೊಮ್ಮೆ ಸಾರಿಗೆ ಟಿಕೆಟ್ ದರ ಹೆಚ್ಚಳ ಮಾಡೋದು ರೂಢಿಯಲ್ಲಿತ್ತು. ಆದ್ರೆ ಇನ್ಮುಂದೆ KSRTC ಬಸ್ ದರವೂ ವರ್ಷಕ್ಕೊಮ್ಮೆ ಏರಿಕೆಯಾಗಲಿದೆ. ವಿದ್ಯುತ್ ದರ ಏರಿಕೆಯಂತೆ ಇನ್ಮುಂದೆ ಸಾರಿಗೆ ಸಂಸ್ಥೆಗಳ ದರವನ್ನ ಏರಿಕೆ ಮಾಡಲು ಸರ್ಕಾರ ಸಮಿತಿ ರಚಿಸಿದೆ ಎನ್ನುವ ಮಾಹಿತಿ ಹೊರಬಂದಿದೆ.
ಸಾರಿಗೆ ದರ ನಿಯಂತ್ರಣ ಸಮಿತಿ
KERC ಮಾದರಿಯಲ್ಲಿ ಇನ್ಮುಂದೆ ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿ ಇರಲಿದೆ. ಕರ್ನಾಟಕ ಮೋಟಾರು ವಾಹನ ನಿಯಮ 1989ರ ಅಡಿಯಲ್ಲಿ ದರ ನಿಯಂತ್ರಣ ಸಮಿತಿಯನ್ನ ರಾಜ್ಯ ಸರ್ಕಾರ ರಚನೆ ಮಾಡಿದೆ. ಈ ಸಮಿತಿ ಪ್ರತಿ ವರ್ಷ ರಸ್ತೆ ಸಾರಿಗೆ ದರ ಹೆಚ್ಚಿಸುವ ನಿರ್ಧಾರ ತೆಗೆದುಕೊಳ್ಳಲಿದೆ.
ಕಾಲಕಾಲಕ್ಕೆ ದರ ಪರಿಷ್ಕರಣೆ
ಈ ಸಮಿತಿ ಅಧ್ಯಕ್ಷರು ಹಾಗೂ ಇಬ್ಬರು ಸದಸ್ಯರನ್ನು ಒಳಗೊಂಡಿದ್ದು. ಕಾಲಕಾಲಕ್ಕೆ ದರ ಪರಿಷ್ಕರಣೆ ಮಾಡಲಿದೆ. ವಿವಿಧ ಸರ್ಚಾರ್ಜ್, ಶುಲ್ಕಗಳನ್ನು ವಿಧಿಸಲು ಈ ಸಮಿತಿ ಸೂಚಿಸಬಹುದು. ದಿನೇ ದಿನೇ ಇಂಧನ ದರ ಹೆಚ್ಚುತ್ತಿರುವ ಹಿನ್ನೆಲೆ ಲಾಂಗ್ ಟರ್ಮ್ ನಲ್ಲಿ ಏರಿಕೆ ಬದಲು ಆಗಾಗ ಏರಿಕೆಗೆ ಸಮಿತಿ ರಚನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.