ಬೆಂಗಳೂರು: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗಾಗಿ ದಸರಾ ರಜೆ ವಿಸ್ತರಣೆ ಮಾಡಿರೋ ಸರ್ಕಾರದ ನಡೆಗೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ.
ಈ ಸಂಬಂಧ ಎಕ್ಸ್‌ನಲ್ಲಿ ಟ್ವೀಟ್ ಮಾಡಿರೋ ನಿಖಿಲ್, ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
ಎಕ್ಸ್‌ನಲ್ಲಿ ಏನಿದೆ?
ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಕಾಂಗ್ರೆಸ್ ಸರ್ಕಾರ ಪೂರ್ವ ತಯಾರಿ ಇಲ್ಲದೆ ಯಾರದೋ ಒತ್ತಡಕ್ಕೆ ಮಣಿದು ಆತುರಾತುರವಾಗಿ ಸಮೀಕ್ಷೆ ಮಾಡುತ್ತಿದೆ. ಜಾತಿಗಣತಿ ದಿನದಿಂದ ದಿನಕ್ಕೆ ಗೊಂದಲಮಯವಾಗುತ್ತಿದೆ. ಈಗ ಸಮೀಕ್ಷೆಗಾಗಿ ಶಾಲಾ ಮಕ್ಕಳ ಭವಿಷ್ಯದ ಜೊತೆ ಕಾಂಗ್ರೆಸ್ ಸರ್ಕಾರ ಚೆಲ್ಲಾಟವಾಡುತ್ತಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ವಿದ್ಯಾರ್ಥಿಗಳ ಭವಿಷ್ಯ ಮುಖ್ಯವಲ್ಲ. ಜಾತಿ ಮುಖ್ಯ ಎಂಬುದು ಇದರಿಂದ ಸ್ಪಷ್ಟವಾಗಿದೆ.
2 ಕೋಟಿ ಮನೆಗಳಲ್ಲಿ ವಾಸಿಸುವ 7 ಕೋಟಿ ಜನರನ್ನು ಕೇವಲ 15 ದಿನಗಳಲ್ಲಿ ಸಮೀಕ್ಷೆ ಮಾಡಲು ಸಾಧ್ಯವಿಲ್ಲ ಎಂಬುದು ಸಮೀಕ್ಷೆ ಪ್ರಾರಂಭವಾಗುವ ಮೊದಲೇ ಸ್ಪಷ್ಟವಾಗಿತ್ತು. ಸರ್ಕಾರಿ ಶಾಲೆಗಳು ದೀಪಾವಳಿಯ ನಂತರವೇ ಮತ್ತೆ ತೆರೆಯುತ್ತವೆ. ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಒಂದು ತಿಂಗಳ ಕಾಲ ಶಾಲೆಗಳಿಂದ ದೂರವಿರುತ್ತಾರೆ. ಆದರೆ ಖಾಸಗಿ ಶಾಲೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ. ಇದು ಲಕ್ಷಾಂತರ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತದೆ. ಈ ಸಮೀಕ್ಷೆಯು ನಿಜವಾಗಿಯೂ ಸಾಮಾಜಿಕ ಕಲ್ಯಾಣದ ಬಗ್ಗೆ ಆಗಿದ್ದರೆ, ಬೇಸಿಗೆ ರಜೆಯ ಸಮಯದಲ್ಲಿ ಶಿಕ್ಷಣವನ್ನು ಅಡ್ಡಿಪಡಿಸದೆ ವ್ಯವಸ್ಥಿತವಾಗಿ ನಡೆಸಬಹುದಿತ್ತು. ಇವರ ರಾಜಕೀಯದ ತೆವಲಿಗೋಸ್ಕರ ಸಾರ್ವಜನಿಕರ ತೆರಿಗೆ ಹಣವನ್ನು ವ್ಯರ್ಥ ಮಾಡುವ ಜೊತೆಗೆ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕೂಡ ಅಡ್ಡಿಪಡಿಸುತ್ತಿದೆ. ಸರ್ಕಾರದ ಈ ನಿಲುವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ವಾಗ್ದಾಳಿ ನಡೆಸಿದ್ದಾರೆ.