ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಮತ್ತು ಸಂಪುಟ ಪುನಾರಚನೆ ಕುರಿತು ಚರ್ಚೆಗಳು ಜೋರಾಗಿರುವ ನಡುವಲ್ಲೇ, ರಾಹುಲ್ ಗಾಂಧಿ ನವೆಂಬರ್ 19ರಂದು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ಯತೀಂದ್ರ ಸಿದ್ದರಾಮಯ್ಯ ನೀಡಿದ “ಸತೀಶ್ ಜಾರಕಿಹೊಳಿ ಸಿದ್ದರಾಮಯ್ಯ ಅವರ ಉತ್ತರಾಧಿಕಾರಿ” ಎಂಬ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದು, ಈ ವೇಳೆಯಲ್ಲಿ ರಾಹುಲ್ ಗಾಂಧಿಯ ಭೇಟಿ ರಾಜಕೀಯ ತಾಪಮಾನವನ್ನು ಹೆಚ್ಚಿಸಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಅಂಗನವಾಡಿ ಸ್ಥಾಪನೆಯ 50ನೇ ವಾರ್ಷಿಕೋತ್ಸವದ ಅಂಗನವಾಡಿ ಕಾರ್ಯಕರ್ತರ ರ‍್ಯಾಲಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಹಾಗೂ ಹೈಕಮಾಂಡ್ ನಾಯಕರನ್ನು ಆಹ್ವಾನಿಸಿರುವುದಾಗಿ ತಿಳಿದುಬಂದಿದೆ. ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ರಾಹುಲ್ ಗಾಂಧಿಯವರನ್ನೂ ಆಹ್ವಾನಿಸುವ ಸಾಧ್ಯತೆ ಇದೆ.
ಸಿಎಂ ಸಿದ್ದರಾಮಯ್ಯ ದೆಹಲಿಗೆ ಭೇಟಿ:
ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶಗಳ ನಂತರ, ನವೆಂಬರ್ 15ರಂದು ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳುವ ಸಾಧ್ಯತೆ ಇದೆ. ಹೈಕಮಾಂಡ್ ನಾಯಕರೊಂದಿಗೆ ಸಂಪುಟ ಪುನಾರಚನೆ ಕುರಿತು ಚರ್ಚೆ ನಡೆಯುವ ನಿರೀಕ್ಷೆಯಿದೆ.
ಮೂಲಗಳ ಪ್ರಕಾರ, ಸಚಿವ ಸಂಪುಟ ಪುನಾರಚನೆಯಾದರೆ ಸುಮಾರು 10 ಮಂದಿ ಸಚಿವರನ್ನು ಬದಲಾಯಿಸುವ ಸಾಧ್ಯತೆ ಇದೆ. ಹೊಸ ಮುಖಗಳಿಗೆ ಅವಕಾಶ ನೀಡುವ ಕುರಿತು ತೀರ್ಮಾನ ಕೈಗೊಳ್ಳಬಹುದು ಎಂದು ಅಂದಾಜಿಸಲಾಗಿದೆ.
ಈ ನಡುವೆ ಸಿಎಂ ಆಪ್ತರಾದ ಬೈರತಿ ಸುರೇಶ್ ಹಾಗೂ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ದೆಹಲಿಗೆ ಭೇಟಿ ನೀಡಿದ್ದು, ಇಡಿ ವಿಚಾರಣೆ ಸಂಬಂಧಿತ ಕಾನೂನು ಸಲಹೆಗಾಗಿ ಭೇಟಿ ನೀಡಿದರೆಂದು ತಿಳಿದುಬಂದಿದೆ. ಅದೇ ವೇಳೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಕೂಡ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರೊಂದಿಗೆ ರಾಜಕೀಯ ಚರ್ಚೆ ನಡೆಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಈಶ್ವರ್ ಖಂಡ್ರೆ ಸ್ಪರ್ಧಿ ಎಂಬ ಮಾತುಗಳು ಕೇಳಿಬರುತ್ತಿದ್ದು, ಅದಕ್ಕಾಗಿ ಸಚಿವ ಸ್ಥಾನ ತ್ಯಜಿಸುವ ಸಾಧ್ಯತೆಗಳೂ ವದಂತಿಯಾಗಿ ಹರಿದಾಡುತ್ತಿವೆ.
