ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಚುನಾವಣೆಗೆ ಸಿದ್ಧತೆಗಳು ವೇಗ ಪಡೆದುಕೊಂಡಿವೆ. ಸರ್ಕಾರ ಈಗಾಗಲೇ ಚುನಾವಣಾ ಪ್ರಕ್ರಿಯೆಗೆ ಹಸಿರು ನಿಶಾನೆ ತೋರಿದರೆ, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ತಮ್ಮ ಸಂಯೋಜಕರನ್ನು ನೇಮಕ ಮಾಡಿವೆ. ಆದರೆ ಬಿಜೆಪಿ ಶಿಬಿರದೊಳಗೆ ಸಂಯೋಜಕರ ಆಯ್ಕೆ ಭಾರಿ ಅಸಮಾಧಾನ ಉಂಟುಮಾಡಿದೆ.
ಬಿಜೆಪಿಯ ಹಿರಿಯ ಶಾಸಕರು ಮತ್ತು ಮಾಜಿ ಮೇಯರ್‌ಗಳಿಗೆ ಸಂಯೋಜಕರ ಪಟ್ಟಿಯಲ್ಲಿ ಸ್ಥಾನ ದೊರೆಯದಿರುವುದು ಕೇಸರಿ ಪಾಳಯದೊಳಗೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ. ಮಹಾದೇವಪುರ ಮಾಜಿ ಶಾಸಕ ಅರವಿಂದ್ ಲಿಂಬವಳಿ, ಸರ್ವಜ್ಞ ನಗರ ಶಾಸಕ ಎಸ್. ರಘು, ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ, ಯಲಹಂಕ ಶಾಸಕ ವಿಶ್ವನಾಥ್ ಹಾಗೂ ಬೊಮ್ಮನಹಳ್ಳಿ ಶಾಸಕ ಸತ್ತೀಶ್ ರೆಡ್ಡಿ ಮುಂತಾದ ನಾಯಕರಿಗೆ ಈ ಬಾರಿ ಅವಕಾಶ ಸಿಕ್ಕಿಲ್ಲ.
ಪಕ್ಷದ ನಿಷ್ಠಾವಂತ ಹಿರಿಯರಿಗೆ ಕಡೆಗಣನೆ, ಸಂಸದರು ಮತ್ತು ಪರಿಷತ್ ಸದಸ್ಯರಿಗೂ ಮಾತ್ರ ಸ್ಥಾನ ನೀಡಿರುವ ಕ್ರಮವನ್ನು ಕೆಲ ನಾಯಕರು ಪ್ರಶ್ನಿಸಿದ್ದಾರೆ. “ಸ್ಥಳೀಯ ಜನರ ನಾಡಿ ಮಿಡಿತ ಅರಿತಿರುವ ನಾಯಕರಿಗೇ ಅವಕಾಶ ನೀಡಬೇಕು, ಆಗಷ್ಟೇ ಹೆಚ್ಚು ಸೀಟು ಗೆಲ್ಲಬಹುದು,” ಎಂದು ಒಳಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.
ಮಾಜಿ ಮೇಯರ್‌ಗಳು ಹಾಗೂ ಹಲವು ಬಾರಿ ಗೆದ್ದ ಕಾರ್ಪೋರೇಟರ್‌ಗಳು ಸಂಯೋಜಕರ ಪಟ್ಟಿಯಿಂದ ಹೊರಗುಳಿದಿರುವುದರಿಂದ ಅಸಮಾಧಾನದ ಕಿರಿಚು ರಾಜ್ಯಾಧ್ಯಕ್ಷರ ಕಡೆ ತಿರುಗಿದೆ. ಕೆಲವರು ಇದು ಏಕಪಕ್ಷೀಯ ತೀರ್ಮಾನ ಎಂದು ಆರೋಪಿಸುತ್ತಿದ್ದು, ಪಟ್ಟಿಯನ್ನು ಮರುಪರಿಶೀಲಿಸುವಂತೆ ಆಗ್ರಹಿಸುತ್ತಿದ್ದಾರೆ.
ಜಿಬಿಎ ಚುನಾವಣೆಯ ಮೊದಲು ಪಕ್ಷದ ಒಳಸಂಚು ಬಯಲಾಗಿರುವ ಈ ಬೆಳವಣಿಗೆ, ನಗರ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ನಾಯಕತ್ವ ಒಳಗಿನ ಅಸಮಾಧಾನ ಶಮನಗೊಳಿಸದಿದ್ದರೆ, ಗ್ರೇಟರ್ ಬೆಂಗಳೂರು ಚುನಾವಣೆಯಲ್ಲಿ ಹಿನ್ನಡೆಯ ಸಾಧ್ಯತೆ ಇದೆ ಎಂಬ ಅಭಿಪ್ರಾಯ ಪಕ್ಷದ ವಲಯದಲ್ಲೇ ಕೇಳಿ ಬರುತ್ತಿದೆ.
