ಬೆಂಗಳೂರು: ಕನ್ನಡದ ಹಿರಿಯ ನಟಿ ಪ್ರಿಯಾಂಕ ಉಪೇಂದ್ರ ಅವರ ಮೊಬೈಲ್ ಫೋನ್ ಹ್ಯಾಕ್ ಮಾಡಿ ಹಣ ವಂಚನೆ ಮಾಡಿದ ಆರೋಪಿಯನ್ನು ಬಂದಿಸಿದ್ದಾರೆ. ಆರೋಪಿ ಬಿಹಾರ ಮೂಲದ ಯುವಕನಾಗಿದ್ದು, ಸದಾಶಿವನಗರ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ. ಈ ಘಟನೆಯಿಂದ ಕಂಗಾಲಾದ ಪ್ರಿಯಾಂಕ ಉಪೇಂದ್ರ ಅವರಿಗೆ ನ್ಯಾಯ ದೊರಕುವ ದಾರಿಯಲ್ಲಿ ಪೊಲೀಸರು ಮಹತ್ತರ ಹೆಜ್ಜೆ ಇಟ್ಟಿದ್ದಾರೆ.
ಪೊಲೀಸರ ವರದಿ ಪ್ರಕಾರ, ಬಿಹಾರ ಮೂಲದ ವಿಕಾಸ್ ಕುಮಾರ್ ಬಂದಿತ ಆರೋಪಿ. ಸೆಪ್ಟೆಂಬರ್ 15ರಂದು ನಟಿ ಪ್ರಿಯಾಂಕ ಉಪೇಂದ್ರ ಅವರ ಮೊಬೈಲ್ ಫೋನ್‌ಗೆ ಒಂದು ಡೆಲಿವರಿ ಸಂಬಂಧಿತ ಕರೆ ಬಂದಿತ್ತು. ಆರ್ಡರ್ ಡೆಲಿವರಿ ಮಾಡುವ ನೆಪದಲ್ಲಿ ಮಾತನಾಡಿದ ಅಪರಿಚಿತ ವ್ಯಕ್ತಿ, ಫೋನ್‌ನಲ್ಲಿ ಲಿಂಕ್ ಕಳುಹಿಸಿ ಕ್ಲಿಕ್ ಮಾಡಲು ಹೇಳಿದ್ದ. ಪ್ರಿಯಾಂಕ ಅವರು ಅದನ್ನು ಕ್ಲಿಕ್ ಮಾಡಿದ ಕ್ಷಣದಲ್ಲೇ ಅವರ ಮೊಬೈಲ್ ಹ್ಯಾಕ್ ಆಗಿ ಖಾತೆಯಿಂದ ಹಣ ಕಡಿತವಾದ ಪ್ರಕರಣ ನಡೆದಿತ್ತು.
ಕಾರ್ಯಾಚರಣೆ ಬಳಿಕ ಬಂಧನ
ಘಟನೆ ಬಳಿಕ ಪ್ರಿಯಾಂಕ ಉಪೇಂದ್ರ ತಕ್ಷಣ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ನಿಟ್ಟಿನಲ್ಲಿ ದೂರು ಸ್ವೀಕರಿಸಿದ ಪೊಲೀಸರು ತಾಂತ್ರಿಕ ತಂಡದ ಸಹಾಯದಿಂದ ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಸೈಬರ್ ಟ್ರೇಲ್ ಹಿಂಬಾಲಿಸಿ ಪೊಲೀಸರು ವಂಚನೆಗೆ ಬಳಸಿದ ಬ್ಯಾಂಕ್ ಖಾತೆ, ಫೋನ್ ನಂಬರು, ಹಾಗೂ ಡಿಜಿಟಲ್ ಲೆಕ್ಕಾಚಾರವನ್ನು ಪತ್ತೆಹಚ್ಚಿದ್ದಾರೆ. ತನಿಖೆಯ ಆಧಾರದ ಮೇಲೆ ಪೊಲೀಸರು ಬಿಹಾರಕ್ಕೆ ತೆರಳಿ ನಿರಂತರ ಕಾರ್ಯಾಚರಣೆಯ ಬಳಿಕ ವಿಕಾಸ್ ಕುಮಾರ್ನನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ.
ಮೋಜು ಮಸ್ತಿ ಮಾಡಿ ಹಣ ಖಾಲಿ ಮಾಡಿದ ಆರೋಪಿ
ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಂತೆ, ವಿಕಾಸ್ ಕುಮಾರ್ ಫೋನ್ ಹ್ಯಾಕ್ ಮಾಡಿ ಸುಮಾರು 50 ಸಾವಿರ ರೂಪಾಯಿ ಮೊತ್ತವನ್ನು ಪ್ರಿಯಾಂಕ ಉಪೇಂದ್ರ ಮತ್ತು ಅವರ ಮಗ ಸೇರಿ ಕೆಲವರಿಂದ ವಂಚಿಸಿದ್ದಾನೆ. ಹಣವನ್ನು ಆನ್‌ಲೈನ್ ಪೇಮೆಂಟ್ ಆ್ಯಪ್‌ಗಳ ಮೂಲಕ ಖಾಲಿ ಮಾಡುತ್ತಿದ್ದ ಆತ, ನಂತರ ಮೋಜು ಮಸ್ತಿ ಮಾಡಿ ಹಣ ವ್ಯಯಿಸುತ್ತಿದ್ದನು ಎಂಬುದು ಪ್ರಾಥಮಿಕವಾಗಿ ತಿಳಿದುಬಂದಿದೆ.
ಬಂಧಿತನನ್ನು ಇದೀಗ ಬೆಂಗಳೂರಿಗೆ ಕರೆತರಲಾಗಿದ್ದು, ವಿಚಾರಣೆ ಮುಂದುವರಿದಿದೆ. ತನಿಖೆಯಲ್ಲಿ ಆರೋಪಿ ಇತರ ಖಾತೆಗಳಿಂದಲೂ ಹಣ ವಂಚನೆ ನಡೆಸಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಪೊಲೀಸರು ಈ ಪ್ರಕರಣದ ಹಿಂದೆ ಇನ್ನೂ ಯಾರಾದರೂ ಭಾಗಿಗಳಿದ್ದಾರೆಯೇ ಎಂಬುದು ಪತ್ತೆಹಚ್ಚುವ ಪ್ರಯತ್ನದಲ್ಲಿದ್ದಾರೆ.
ಪ್ರಕರಣ ಬೇಧಿಸಿದ ಖಾಕಿ
ಸದಾಶಿವನಗರ ಠಾಣೆಯ ಪೊಲೀಸರು, ಸೈಬರ್ ಕ್ರೈಮ್ ವಿಭಾಗದ ಸಹಾಯದಿಂದ ಈ ಪ್ರಕರಣವನ್ನು ಬೇಧಿಸಿದ್ದಾರೆ. ನಟಿ ಪ್ರಿಯಾಂಕ ಉಪೇಂದ್ರ ಅವರು ಪೊಲೀಸರ ಕಾರ್ಯಾಚರಣೆಗೆ ಕೃತಜ್ಞತೆ ಸಲ್ಲಿಸಿದ್ದು, “ಸಾಮಾನ್ಯ ಜನರು ಇಂತಹ ಸೈಬರ್ ವಂಚನೆಗಳಿಂದ ಎಚ್ಚರಿಕೆಯಿಂದ ಇರಬೇಕು. ಅಜ್ಞಾತ ಲಿಂಕ್‌ಗಳು ಅಥವಾ ಕರೆಗಳಿಗೆ ಸ್ಪಂದಿಸಬಾರದು ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಪ್ರಕರಣದ ತನಿಖೆ ಇನ್ನೂ ಮುಂದುವರಿದಿದ್ದು, ಪೊಲೀಸರು ವಿಕಾಸ್ ಕುಮಾರ್‌ನ ಬ್ಯಾಂಕ್ ಖಾತೆ ವಿವರಗಳು ಹಾಗೂ ಡಿಜಿಟಲ್ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಸೈಬರ್ ವಂಚನೆಗಳ ಹಿನ್ನಲೆಯಲ್ಲಿ ಬೆಂಗಳೂರು ಪೊಲೀಸರು ಮತ್ತೊಮ್ಮೆ ಜನರಿಗೆ ಎಚ್ಚರಿಕೆ ನೀಡಿದ್ದುಅಪರಿಚಿತ ಲಿಂಕ್‌ಗಳು, ಕ್ಯೂಆರ್ ಕೋಡ್‌ಗಳು ಅಥವಾ ಅನಾಮಧೇಯ ಕರೆಗಳ ಮೂಲಕ ಹಣ ವರ್ಗಾವಣೆ ಮಾಡುವುದನ್ನು ತಪ್ಪಿಸಿಕೊಂಡು, ಡಿಜಿಟಲ್ ದರೋಡೆಯ ಕಡಿವಾಣಕ್ಕೆ ಸಹಕರಿಸಿ ಎಂದು ಕರೆ ನೀಡಿದ್ದಾರೆ.
ಡಿಜಿಟಲ್ ದರೋಡೆಗೆ ಅಸ್ತ್ರವಾಯಿತಾ ತಂತ್ರಜ್ಞಾನ?
ಈ ಘಟನೆಯು ಸೈಬರ್ ಸುರಕ್ಷತೆ ಕುರಿತಂತೆ ಮತ್ತೊಮ್ಮೆ ಸಂಚಲನ ಸೃಷ್ಟಿಸಿದೆ. ತಂತ್ರಜ್ಞಾನ ಯುಗದಲ್ಲಿ ಎಚ್ಚರಿಕೆಯು ಮಾತ್ರವೇ ಶಸ್ತ್ರ ಎಂಬುದನ್ನು ಈ ಪ್ರಕರಣ ಮತ್ತೆ ಸಾಬೀತುಪಡಿಸಿದೆ. ಆದ್ದರಿಂದ ಪ್ರಸ್ತುತ ತಂತ್ರಜ್ಞಾನದ ಕಲಿಕೆ ಬಹಳ ಮುಖ್ಯ ಅದನ್ನು ಹೇಗೆ ಬಳಸುವುದರ ಮೇಲೆ ಇರುತ್ತದೆ. ಆದ್ದರಿಂದ ಅಪರಿಚಿತರಿಂದ ಬರುವ ಸಂದೇಶಗಳಿಗೆ ಯಾವುದೆ ಉತ್ತರ ನೀಡಬೇಡಿ, ಡಿಜಿಟಲ್ ದರೋಡೆ ತಡೆಗೆ ಪೊಲೀಸ್ರೊಂದಿಗೆ ಸಹಕರಿಸಿ ಎಂದು ಪೊಲೀಸ್ರು ಮನವಿ ಮಾಡಿದ್ದಾರೆ.
ನಟಿ ಪ್ರಿಯಾಂಕಾ ಉಪೇಂದ್ರ ಫೋನ್ ಹ್ಯಾಕ್ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಅರೆಸ್ಟ್!
