ಕಲಬುರಗಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವ ಕಾರಣ ಅಧಿಕಾರಿಗಳನ್ನ ಬಳಸಿಕೊಂಡು ತಂದೆಯ ಹೆಸರು ಮತ್ತು ನನ್ನ ಹೆಸರನ್ನು ಚಾರ್ಜ್‌ಶೀಟ್‌ನಲ್ಲಿ ಹಾಕಿದ್ದಾರೆ ಎಂದು ಹರ್ಷಾನಂದ್ ಗುತ್ತೇದಾರ್ ಹೇಳಿದ್ದಾರೆ.
ಆಳಂದ ಮತಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ, ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಮತ್ತು ತನ್ನ ವಿರುದ್ಧ ವಿಶೇಷ ತನಿಖಾ ತಂಡ ಬೆಂಗಳೂರಿನ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಕ್ಕೆ ಅವರು ನೀಡಿದರು.
2023 ರ ಚುನಾವಣೆಯಲ್ಲಿ ಆರೋಪ ಮಾಡಿದ ಬಳಿಕ ಬಿಆರ್ ಪಾಟೀಲ್ ಕಾಂಗ್ರೆಸ್‌ನಿಂದ ಜಯಗಳಿಸಿದರು. ಎರಡು ವರ್ಷದಲ್ಲಿ ಈ ಪ್ರಕರಣದಲ್ಲಿ ಯಾವುದೇ ಬೆಳವಣಿಗೆ ಆಗಿರಲಿಲ್ಲ. ಯಾವುದೇ ದಾಖಲೆಗಳು ಸಿಕ್ಕಿರಲಿಲ್ಲ. ಯಾವಾಗ ರಾಹುಲ್ ಗಾಂಧಿ ಈ ವಿಚಾರ ಬಗ್ಗೆ ಪ್ರಸ್ತಾಪ ಮಾಡಿದರೋ ಆಗ ಬಿಆರ್ ಪಾಟೀಲ್ ರಾಹುಲ್ ಗಾಂಧಿ ಅವರಿಗೆ ಹತ್ತಿರವಾಗಿ ಸಚಿವರಾಗಲು ಇದನ್ನು ಬಳಸಿಕೊಂಡಿದ್ದಾರೆ ಎಂದು ದೂರಿದರು.
ಚಾರ್ಜ್‌ಶೀಟ್‌ನಲ್ಲಿರುವ ಅಂಶಗಳ ಬಗ್ಗೆ ನಮಗೆ ಯಾವುದೇ ಮಾಹಿತಿಯಿಲ್ಲ. ನಮ್ಮ ವಕೀಲರ ಮೂಲಕ ಚಾರ್ಜ್‌ಶೀಟ್ ನೋಡುತ್ತೇವೆ. ದೇಶದಲ್ಲಿ ಜನ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದಕ್ಕೆ ಬಿಜೆಪಿ ವಿರುದ್ಧ ಈ ಮತಗಳ್ಳತನ ಅಭಿಯಾನ ಮಾಡುತ್ತಿದ್ದಾರೆ. ದೆಹಲಿಯಲ್ಲಿ ವೋಟ್ ಚೋರಿ ಸಮಾವೇಶಕ್ಕೂ ಮೊದಲು ತರಾತುರಿಯಲ್ಲಿ ಅಧಿಕಾರಿಗಳನ್ನು ಬಳಸಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ ಎಂದು ಆರೋಪಿಸಿದರು.
ಸೋಮವಾರ ನೋಟಿಸ್ ಕೊಟ್ಟು ಹೇಳಿಕೆ ಪಡೆದುಕೊಂಡಿದ್ದಾರೆ. ನಮ್ಮ ಪಾತ್ರ ಏನು ಎಂದು ಹೇಳಿಕೆ ನೀಡಿದ್ದೇವೆ. ನಮ್ಮ ಮನೆಯಲ್ಲಿ ಯಾವ ಲ್ಯಾಪಟಾಪ್ ಸಿಕ್ಕಿಲ್ಲ. ನಮ್ಮ ಪಾತ್ರ ದೃಢ ಆಗಿರುವುದನ್ನು ನ್ಯಾಯಲಯದಲ್ಲಿ ಸಾಬಿತು ಮಾಡಲಿ ಎಂದು ಸವಾಲು ಎಸೆದರು.
